ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ವಿಸ್ತರಿಸಿ ಬಲಪಡಿಸದೇ ಹೋದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಿ.ನಾರಾಯಣಸ್ವಾಮಿ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸಂಘಟನೆಯಾಗೂ ಶಿಡ್ಲಘಟ್ಟ ತಾಲೂಕಿಗೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಶೋಷಣೆ ಮುಂದುವರೆದಿದೆ. ಜಿಲ್ಲೆಯ ಶಿಡ್ಲಘಟ್ಟದಲ್ಲಿ ಇದುವರೆಗೂ ಎಪಿಎಂಸಿ ಮಾರುಕಟ್ಟೆ ಇಲ್ಲ. 30 ಎಕೆರೆ ಕೇಳಿದ್ದರೆ ಸರ್ಕಾರ ಕೇವಲ 15 ಎಕೆರೆಯಷ್ಟು ಭೂಮಿ ಮಂಜೂರು ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ಮಾರುಕಟ್ಟೆ ವಿಸ್ತರಣೆ ಜೊತೆಗೆ ಬಲವರ್ಧನೆ ಆಗಬೇಕು. ಎಪಿಎಂಸಿ ಮಾರುಕಟ್ಟೆಗಳಲ್ಲಿ ತೂಕ, ದಲ್ಲಾಳಿ ವಿಚಾರದಲ್ಲಿ ರೈತರಿಗೆ ಸಾಕಷ್ಟು ಮೋಸ ಆಗುತ್ತಿದೆ. ಈ ಬಗ್ಗೆ ಸಂಬಂದಪಟ್ಟವರು ಕ್ರಮ ವಹಿಸಬೇಕು. ರೈತರಿಗೆ ಸೂಕ್ತವಾದ ಮಾರುಕಟ್ಟೆ ಒದಗಿಸಿ, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ನಾರಾಯಣಸ್ವಾಮಿ, ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೈತರ ಹೋರಾಟಗಳನ್ನು ರೂಪಿಸಲಾಗುವುದೆಂದರು.
ಜಿಲ್ಲಾಧ್ಯಕ್ಷರ ನೇಮಕ: ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾಗಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಬಸವರಾಜ್‌ರನ್ನು ನೇಮಿಸಲಾಗಿದೆಯೆಂದು ಸಂಘಟನೆ ರಾಜ್ಯಾಧ್ಯಕ್ಷರಾದ ಬಾಗೇಪಲ್ಲಿ ಬಿ.ನಾರಾಯಣಸ್ವಾಮಿ ಘೋಷಿಸಿದರು. ಅದೇ ರೀತಿ ಶಿಡ್ಲಘಟ್ಟ ತಾಲೂಕು ಅಧ್ಯಕ್ಷರಾಗಿ ಟಿ.ಎಂ. ಮಂಜುನಾಥ, ಉಪಾಧ್ಯಕ್ಷರಾಗಿ ಭಾಗ್ಯರೇಖಾ, ಸಂಘಟನಾ ಸಂಚಾಲಕರಾಗಿ ಎಂ.ಲಕ್ಷ್ಮೀ ನಾರಾಯಣ, ಎಂ. ವೆಂಕಟಸ್ವಾಮಿಗೌಡ, ಶಿವಣ್ಣ, ಗೌರವ ಕಾರ್ಯದರ್ಶಿಗಳಾಗಿ ಎನ್. ಮುನಿಕದಿ ರಪ್ಪ, ಸಹ ಕಾರ್ಯದರ್ಶಿ ಮಂಜುನಾಥ, ಎನ್. ನಾಗರಾಜ್, ಎಂ.ಶ್ರೀನಿವಾಸ್, ನಾಗರಾಜ್ ಆಯ್ಕೆಗೊಂಡಿದ್ದಾರೆ ಎಂದರು.
ಬಾಗೇಪಲ್ಲಿ ರೈತ ಮುಖಂಡರಾದ ಶ್ರೀನಿವಾಸ್, ವೆಂಕಟರೆಡ್ಡಿ, ನಾರಾಯಣರೆಡ್ಡಿ, ಬೀಚಗಾನಹಳ್ಳಿ ಕೃಷ್ಣಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ಗೋವಿಂದಪ್ಪ, ಆಂಜನೇಯರೆಡ್ಡಿ, ಲಿಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.