ಚಾಮರಾಜನಗರ/ ಗುಂಡ್ಲುಪೇಟೆ: ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಗಾಗಿ ಭಾನುವಾರ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಚಾಮರಾಜನಗರ ಎಪಿಎಂಸಿಗೆ ಶೇ. 26.96 ಮತ್ತು ಗುಂಡ್ಲುಪೇಟೆ ಎಪಿಎಂಸಿಗೆ ಶೇ. 37.93 ರಷ್ಟು ಮತದಾನ ನಡೆಯಿತು. ಗುಂಡ್ಲುಪೇಟೆ ತಾಲೂಕಿನ 11 ಕ್ಷೇತ್ರ, ಚಾಮರಾಜನಗರ ತಾಲೂಕಿನ 12 ಕ್ಷೇತ್ರಗಳ ನಿರ್ದೇಶಕರ ಆಯ್ಕೆಗೆ ಮತದಾನ ನಡೆಯಿತು.
ವರ್ತಕರ ಕ್ಷೇತ್ರದ ಮತದಾನ ತಾಲೂಕು ಕಚೇರಿಯಲ್ಲಿ ನಡೆದರೆ, ಇನ್ನು 22 ಕ್ಷೇತ್ರಗಳ ಮತದಾನ ಆಯಾ ವ್ಯಾಪ್ತಿಯ ಗ್ರಾ.ಪಂ.ಕೇಂದ್ರಗಳಲ್ಲಿ ಮತಗಟ್ಟೆಯನ್ನು ಸ್ಥಾಪನೆ ಮಾಡಲಾಯಿತು. ಖಾತೆ ಹೊಂದಿರುವ ರೈತರು ಹಾಗೂ ರೈತ ಮಹಿಳೆಯರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಆಲೂರಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಶಾಸಕ ಪುಟ್ಟರಂಗಶೆಟ್ಟಿ ಅವರು ಕೂಡ್ಲೂರಿನಲ್ಲಿ ಜಮೀನು ಹೊಂದಿರುವ ಕಾರಣ, ಈ ವ್ಯಾಪ್ತಿಯ ಆಲೂರಿನ ಮತಗಟ್ಟೆ ಯಲ್ಲಿ ಮತ ಚಲಾಯಿಸಿದರು. ಚಾಮುಲ್ ಅಧ್ಯಕ್ಷ ಎಚ್. ಎಸ್. ನಂಜುಂಡಪ್ರಸಾದ್, ಕಾಂಗ್ರೆಸ್ ಯುವ ಮುಖಂಡ ಗಣೇಶ್ ಪ್ರಸಾದ್ ನಿಟ್ರೆಯಲ್ಲಿ ಮತದಾನ ಮಾಡಿದರು.
ಆಯಾ ಕಂದಾಯ ಗ್ರಾಮಗಳ ಶಾಲೆಯಲ್ಲಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಬೆಳಗ್ಗೆ 7 ರಿಂದ ಮಧ್ಯಾಹ್ನ 4 ಗಂಟೆಯ ವರೆಗೆ ಮತದಾನ ನಡೆಯಿತು. ಮತಗಟ್ಟೆಗಳಿಗೆ ಪೊಲೀಸ್ ಬಂದ್‌ಬಸ್ತ್ ನಿಯೋಜನೆ ಮಾಡಲಾಗಿತ್ತು.