Advertisement

ಇಂದಿನಿಂದ ಎಪಿಎಂಸಿ ಬಂದ್‌

12:55 PM Aug 05, 2017 | Team Udayavani |

ಹುಬ್ಬಳ್ಳಿ: ಇ-ಪಾವತಿ ವ್ಯವಸ್ಥೆ ರದ್ದುಗೊಳಿಸಬೇಕು. ಜಿಎಸ್‌ಟಿ ಮಾದರಿಯಲ್ಲಿ ದೇಶಕ್ಕೆ ಒಂದೇ ಸೆಸ್‌ ಜಾರಿಯಾಗುವಂತೆ ಕ್ರಮ ಕೈಗೊಳ್ಳಲು ಹಾಗೂ ಅಸಂವಿಧಾನಾತ್ಮಕವಾದ ರೇಮ್ಸ್‌ (ರಾಷ್ಟ್ರೀಯ ಇ-ಮಾರ್ಕೆಟಿಂಗ್‌  ಸರ್ವಿಸ್‌) ತೆಗೆದು ಹಾಕಬೇಕೆಂದು ಒತ್ತಾಯಿಸಿ ಆ.5ರಿಂದ ಅನಿರ್ದಿಷ್ಟಾವಧಿವರೆಗೆ ರಾಜ್ಯಾದ್ಯಂತ ಎಲ್ಲ ಎಪಿಎಂಸಿಗಳನ್ನು ಬಂದ್‌ ಮಾಡಿ ಹೋರಾಟ ನಡೆಸಲು ನಿರ್ಣಯಿಸಲಾಯಿತು. 

Advertisement

ಇಲ್ಲಿನ ಕೆಸಿಸಿಐ ಸಭಾಭವನದಲ್ಲಿ ಶುಕ್ರವಾರ ನಡೆದ ಮುಂದಿನ ಹೋರಾಟದ ರೂಪರೇಷೆಗಳ ಕುರಿತ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ವರ್ತಕರು ಹಾಗೂ ದಲಾಲರ ಸಮ್ಮುಖದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಜೊತೆಗೆ ಸರಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಹೋರಾಟದ ರೂಪರೇಷೆಗಳನ್ನು ಹಾಕಿಕೊಂಡು ಒಗ್ಗಟ್ಟಿನಿಂದ ಹೋರಾಟ ನಡೆಸಲು ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಯಿತು.  

ಸಭೆಯಲ್ಲಿ ಮಾತನಾಡಿದ ಕೆಸಿಸಿಐ ಮಾಜಿ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ಜಗದೀಶಗೌಡ ಪಾಟೀಲ, ವಿಜಯಪುರದ ರವೀಂದ್ರ ಬಿಜ್ಜರಗಿ, ಗಜೇಂದ್ರಗಡದ ಅಮರೇಶ ಬಳಿಗೇರ, ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಗಂಗನಗೌಡ ಪಾಟೀಲ, ಬಸವರಾಜ ಯಕಲಾಸಪುರ, ಎಫ್‌ಕೆಸಿಸಿಯ ನಿರ್ದೇಶಕ ಪಿ.ಡಿ. ಶಿರೂರ, ಸೋಮಲಿಂಗಪ್ಪ ಅಜ್ಜಂಪುರ, ಗದಗದ ವಸಂತಗೌಡ ಪೊಲೀಸ್‌ ಪಾಟೀಲ ಹಾಗೂ ದಾವಣಗೆರೆ, ಕಲಬುರ್ಗಿ, 

ರಾಣಿಬೆನ್ನೂರ ಸೇರಿದಂತೆ ಇನ್ನಿತರೆ ಭಾಗಗಳ ವ್ಯಾಪಾರಸ್ಥರು, ಜು.28ರಂದು ನಡೆದ  ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಆ.5ರಿಂದ ಅನಿರ್ದಿಷ್ಟಾವಧಿ ವರೆಗೆ ಮುಷ್ಕರ ನಡೆಸೋಣ. ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿ ಸರಕು ಸಾಗಾಣಿಕೆಗೆ ಅವಕಾಶ ನೀಡಬಾರದು ಹಾಗೂ ಯಾವುದೇ ಬಗೆಯಲ್ಲಿ ಟೆಂಡರ್‌ ಪ್ರಕ್ರಿಯೆಗಳನ್ನು ನಡೆಸಬಾರದು.

ಮುಷ್ಕರ ಆರಂಭವಾದ ಮೇಲೆ ಎಪಿಎಂಸಿ ಸಚಿವರು  ಸೇರಿದಂತೆ ಸಂಬಂಧಿಸಿದ ಸಚಿವರನ್ನು ಕರೆದುಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡೋಣ. ಯಾವುದೇ ಕಾರಣಕ್ಕೂ ನಮ್ಮ ನಿಲುವಿನಿಂದ ಹಿಂದೆ ಸರಿಯಬಾರದೆಂಬ ಸಲಹೆ-ಸೂಚನೆ ನೀಡಿದರು. ಈಗಾಗಲೇ ಈ ಹೋರಾಟದ ಕುರಿತಂತೆ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. 

Advertisement

ಆದರೆ, ಸರಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಮಾರುಕಟ್ಟೆ ಬಂದ್‌ ಮಾಡಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಯಾವುದೇ ಕಾರಣಕ್ಕೂ ವಹಿವಾಟು ನಡೆಸದೆ ಹೋರಾಟಕ್ಕೆ ಎಲ್ಲರೂ ಮುಂದಾಗೋಣ. ಮಾರುಕಟ್ಟೆಗಳಿಂದ ಸರಕಾರಕ್ಕೆ ಹೋಗುತ್ತಿರುವ ಆದಾಯ ಸಂಪೂರ್ಣ ಬಂದ್‌ ಆಗಬೇಕು.

ಜಿಲ್ಲಾ ಹಾಗೂ ತಾಲೂಕಾವಾರು ಹೋರಾಟ ಕಮೀಟಿ ರಚಿಸಿಕೊಂಡು ಪ್ರತಿಭಟನೆ ಮಾಡೋಣ, ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲೂ ಹೋರಾಟ ಮಾಡೋಣ ಎಂದರು. ವರ್ತಕರ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಇ- ಪಾವತಿ ರದ್ದತಿ, ದೇಶಾದ್ಯಂತ ಒಂದೇ ತೆರನಾದ ಸೆಸ್‌ ಜಾರಿ, ವಿಮ್ಸ್‌ ನಮಗೆ ಅವಶ್ಯಕತೆಯಿಲ್ಲ ಎಂಬ ಪ್ರಮುಖ ಮೂರು ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಮಾಡೋಣ.

ನಮ್ಮಲ್ಲಿ ಗೊಂದಲ ಬೇಡ. ಒಗ್ಗಟ್ಟಿನಿಂದ ಹೋರಾಟ ಮಾಡೋಣ. ಆ.5ರಿಂದ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಬಂದ್‌ ಮಾಡೋಣ. ಬಂದ್‌ ಒಂದೇ ನಮ್ಮ ಮಂತ್ರವಾಗಿರಲಿ ಎಂದರು. ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಮೇಶ ಪಾಟೀಲ, ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ವಿನಯ ಜವಳಿ, ಶಿವಶಂಕರಪ್ಪ ಮೂಗಬಸ್ತ, ಡಿ.ಎಸ್‌. ಪರಮೇಶಗೌಡ, ವೀರೇಶ ಮೋಟಗಿ, ಬಸಂತಗೌಡ ಪಾಟೀಲ ಸೇರಿದಂತೆ ರಾಜ್ಯದ ವಿವಿಧ ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next