ಕಲಬುರಗಿ: ಮಹಾನಗರಗಳಲ್ಲಿ ಹೆಚ್ಚು ವಿಸ್ತಾರಗೊಳ್ಳುತ್ತಿರುವ ಹಾಗೂ ಆಕರ್ಷಣೆಯಾಗಿ ಕಾಣುತ್ತಿರುವ ಅಪಾರ್ಟಮೆಂಟ್ ಸಂಸ್ಕೃತಿಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ವೂ ಮಾರು ಹೋಗಿದ್ದು, ಮುಂದಿನ ದಿನಗಳಲ್ಲಿ ನಿರ್ಮಿಸಲು ಮುಂದಾಗಿದೆ.
ಇಲ್ಲಿನ ಜೇವರ್ಗಿ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಹಾಗೂ ಧರಿಯಾಪುರ ಬಡಾವಣೆಯಲ್ಲಿ ಕುಡಾ ನಿವೇಶನಗಳ ಸ್ಥಳದಲ್ಲಿ ಪ್ಲ್ರಾಟ್ ನಿರ್ಮಿಸಲು ಕುಡಾ ಉದ್ದೇಶಿಸಿದ್ದು, ಶೀಘ್ರವೇ ಈ ಕಾರ್ಯಕ್ಕೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಕರ್ನಾಟಕ ಗೃಹ ನಿರ್ಮಾಣ ಈಗಾಗಲೇ ಪ್ಲ್ರಾಟ್‌ಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿದೆ. ಹಲವು ಕಡೆ ಉತ್ತಮ ಬೇಡಿಕೆ ಜತೆಗೆ ಆದಾಯ ಬಲವರ್ಧನೆಗೂ ಪೂರಕವಾಗಿರುವುದನ್ನು ಮನಗಂಡು ಕುಡಾ ಸಹ ಪ್ಲ್ರಾಟ್ ನಿರ್ಮಿಸಲು ಯೋಜನೆ ರೂಪಿಸುತ್ತಿದೆ ಎಂದು ಕುಡಾ ಅಧ್ಯಕ್ಷ ದಯಾಘನ್ ಧಾರವಾಡಕರ್ ತಿಳಿಸಿದ್ದಾರೆ.
ಹೊಸ ಬಡಾವಣೆ: ಕುಡಾದಿಂದ ಅಫಜಲಪುರ ರಸ್ತೆಯಲ್ಲೂ ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಹೊಲದ ಶೋಧನೆ ನಡೆದಿದೆ. ಕುಡಾದಿಂದ ಮಹಾನಗರದ ಎಲ್ಲ ರಸ್ತೆಗಳಲ್ಲಿ ಕುಡಾ ಬಡಾವಣೆಗಳಿವೆ. ಆದರೆ ಅಫಜಲಪುರ ರಸ್ತೆಯಲ್ಲಿ ಇರದ ಹಿನ್ನೆಲೆಯಲ್ಲಿ ಶರಣಸಿರಸಗಿ ಹತ್ತಿರ ಬಡಾವಣೆ ನಿರ್ಮಿಸಲು ಯೋಜನೆ ಹೊಂದಲಾಗಿದೆ.
50;50 ಆಧಾರದ ಮೇಲೆ ನೇರವಾಗಿ ರೈತರಿಂದಲೇ ಭೂಮಿ ಪಡೆದು ಬಡಾವಣೆ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಆದ್ದರಿಂದ ಈ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬಂದರೂ ಆಶ್ಚರ್ಯವಿಲ್ಲ. ಜೇವರ್ಗಿ ರಸ್ತೆಯಲ್ಲಿ ಬಡಾವಣೆಯಾದರೆ ಬೇಡಿಕೆಯಿದೆ ಎನ್ನಲಾಗಿದೆ. ಹಾಗರಗಾ ಬಡಾವಣೆ ಒಂದು ಹಂತಕ್ಕೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಪರಿಹಾರ ಹಂಚಿಕೆ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾದ ನಂತರ ಹೊಸ ಬಡಾವಣೆಗೆ ವೇಗ ಸಿಗಲಿದೆ ಎಂದು ಕುಡಾ ಅಧಿಕಾರಿಗಳು ತಿಳಿಸಿದ್ದಾರೆ.
ಧರಿಯಾಪುರ-ಕೋಟನೂರ ಡಿ ಸಾರ್ವಜನಿಕ ಉದ್ಯಾನವನ ಸ್ಥಳ ಅಭಿವೃದ್ಧಿಗೆ ಕುಡಾ ಉದ್ದೇಶಿಸಿದೆ. ಈ ಸ್ಥಳದ ಅಭಿವೃದ್ಧಿ ಕೆಕೆಆರ್‌ಡಿಬಿ ಅಡಿಯಲ್ಲಿ ಇದೆ. ಇದನ್ನು ಕುಡಾ ಪಡೆದು, ಕೆಕೆಆರ್‌ಡಿಬಿ ಅನುದಾನದಲ್ಲೇ ಮಾದರಿಯಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ಮುಂದಾಗಲಾಗುವದು ಎಂದು ಕುಡಾ ಅಧ್ಯಕ್ಷರು ಹಾಗೂ ಆಯುಕ್ತರು ತಿಳಿಸಿದ್ದಾರೆ.