Advertisement

ಕಾರ್ಮಿಕರಿಲ್ಲದೆ ವಿವಿಧ ಕೆಲಸ ಕಾರ್ಯಗಳು ಬಾಕಿ, ಬಸ್‌ಗೂ ಪ್ರಯಾಣಿಕರಿಲ್ಲ

11:09 PM May 21, 2020 | Sriram |

ಉಡುಪಿ: ಕೋವಿಡ್‌ ಪರಿಣಾಮದಿಂದ ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ತೆರಳಿದವರ ಇದುವರೆಗಿನ ಅಧಿಕೃತ ಸಂಖ್ಯೆ 11,608. ಉಡುಪಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಬಂದವರ ಸಂಖ್ಯೆ 7,355.

Advertisement

ಉಡುಪಿ ಜಿಲ್ಲೆಗೆ ಪ್ರವೇಶಿಸಲು ಮೇ 7ರಿಂದ ಅನುಮತಿ ದೊರಕಿದ್ದರೆ ಹೊರರಾಜ್ಯಕ್ಕೂ ಇಲ್ಲಿಂದ ಹೋಗಲು ಮೇ 7ರಿಂದ ಅನುಮತಿ ದೊರಕಿತ್ತು. ಆಂಧ್ರ ಪ್ರದೇಶ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಝಾರ್ಖಂಡ್‌, ಮಧ್ಯಪ್ರದೇಶ ರಾಜ್ಯಗಳಿಗೆ ಹೋಗಲು ಉಡುಪಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಉಡುಪಿ ರೈಲು ನಿಲ್ದಾಣದಿಂದ ವಿಶೇಷ ರೈಲು ಹೊರಟಿದ್ದರೆ, ಮಂಗಳೂರಿನ ವರೆಗೆ ಬಿಟ್ಟು ಅಲ್ಲಿಂದ ರೈಲು ಮಾರ್ಗ ಮೂಲಕ ಕಳುಹಿಸಲಾಗಿತ್ತು. ಬೆಂಗಳೂರಿನವರೆಗೆ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಕಳುಹಿಸಿ ಅಲ್ಲಿಂದ ರೈಲು ಮಾರ್ಗದ ಮೂಲಕ ಕಳುಹಿಸಲಾಗಿತ್ತು. ಹೀಗೆ ಹೊರ ರಾಜ್ಯಕ್ಕೆ ಜಿಲ್ಲಾಡಳಿತದ ಸುಪರ್ದಿಯಲ್ಲಿ ತೆರಳಿದವರ ಸಂಖ್ಯೆ ಇದುವರೆಗೆ 4,116.

ಎ. 25ರಿಂದ ಮೇ 7ರ ವರೆಗೆ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲಾಗಿತ್ತು. ಹೀಗೆ ರಾಜ್ಯದೊಳಗಿನ ಅಂತರ್ಜಿಲ್ಲೆ ಪ್ರಯಾಣ ಮಾಡಿದವರ ಸಂಖ್ಯೆ ಒಟ್ಟು 7,492. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಪ್ರಕಾರ ಈಗಾಗಲೇ ಸೇವಾಸಿಂಧು ಮೂಲಕ ಅನುಮತಿಸಿದಂತೆ ಇನ್ನಷ್ಟು ಜನರು ಬರುವ ನಿರೀಕ್ಷೆ ಇದೆ.
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಟ್ಟಡ, ರಸ್ತೆ, ಸೇತುವೆ ಕಾಮಗಾರಿಗಳು ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಕಾರ್ಮಿಕರ ನಿರ್ಗಮನದಿಂದ ಸ್ಥಗಿತಗೊಂಡಿದೆ. ಉಡುಪಿ ಜಿಲ್ಲೆಗೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಎಷ್ಟೇ ಜನರು ಬಂದರೂ ಈ ಕಾರ್ಮಿಕರ ಕೊರತೆಯನ್ನು ನೀಗಿಸುವುದಿಲ್ಲ.

ಆಶ್ಚರ್ಯಕರ ಸಂಗತಿ ಎಂದರೆ ಅಧಿಕೃತ ಸಂಖ್ಯೆಯಲ್ಲದೆ ನಡೆದುಕೊಂಡು ಲೆಕ್ಕಕ್ಕೆ ಸಿಗದ ಅದೆಷ್ಟೋ ಕಾರ್ಮಿಕರು ಉಡುಪಿ ಜಿಲ್ಲೆಯಿಂದ ಜಾಗ ಖಾಲಿ ಮಾಡಿದ್ದಾರೆ. ಜಿಲ್ಲೆಯ ಗಡಿಗಳನ್ನು ಸೀಲ್‌ಡೌನ್‌ ಮಾಡುವ ಮೊದಲು ವಾಹನಗಳ ಮೂಲಕ ತೆರಳಿದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಎಲ್ಲದನ್ನು ಒಟ್ಟುಗೂಡಿಸಿದರೆ ಸುಮಾರು 20,000 ವಲಸೆ ಕಾರ್ಮಿಕರು ಹೊರ ಹೋಗಿರುವ ಸಾಧ್ಯತೆ ಇದೆ.

ಈಗ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೊರತೆಯಾಗಲು ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಿದ್ದೂ ಒಂದು ಕಾರಣ. ಸ್ಥಳೀಯ ಸಾರ್ವಜನಿಕರು ಹೆಚ್ಚಾಗಿ ಸ್ವಂತ ವಾಹನಗಳಲ್ಲಿ ತೆರಳುತ್ತಿದ್ದಾರೆ. ಹೀಗಾಗಿ ಬಸ್ಸುಗಳಲ್ಲಿ ಪ್ರಯಾಣಿಕರ ಕೊರತೆ ಕಾಣುತ್ತಿದೆ.

Advertisement

ಕ್ವಾರಂಟೈನಿಗರ ಸಂಖ್ಯೆ ಹೆಚ್ಚಳ
ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದಕ್ಕೂ ಕ್ವಾರಂಟೈನ್‌ ವ್ಯವಸ್ಥೆಯಲ್ಲಿರುವವರ ಸಂಖ್ಯೆ ಏರುತ್ತಿರುವುದಕ್ಕೂ ಹತ್ತಿರದ ಸಂಬಂಧ ಕಂಡುಬರುತ್ತಿದೆ.
ಉಡುಪಿ ಜಿಲ್ಲೆಗೆ ಇದುವರೆಗೆ 7,872 ಜನರು ಆಗಮಿಸಿ ಕ್ವಾರಂಟೈನ್‌ನಲ್ಲಿದ್ದಾರೆ. ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 50 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು ಬಹುತೇಕ ಪ್ರಕರಣಗಳು ಹೊರ ರಾಜ್ಯದಿಂದ ಆಗಮಿಸಿದವರಿಂದ ಕೂಡಿದೆ.

ಬೈಂದೂರು ಮತ್ತು ಕಾರ್ಕಳ ತಾಲೂಕಿನಲ್ಲಿ ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ ಅತೀ ಹೆಚ್ಚು, ಉಡುಪಿ, ಕಾಪು, ಬ್ರಹ್ಮಾವರದಲ್ಲಿ ಕಡಿಮೆ, ಕುಂದಾಪುರ ತಾಲೂಕಿನಲ್ಲಿ ಮಧ್ಯಮ ಮಟ್ಟದಲ್ಲಿ ಕ್ವಾರಂಟೈನಿಗರು ಇದ್ದಾರೆ. ಉಡುಪಿ ತಾಲೂಕಿನಲ್ಲಿ 567, ಕಾಪು ತಾಲೂಕಿನಲ್ಲಿ 410, ಬ್ರಹ್ಮಾವರ ತಾಲೂಕಿನಲ್ಲಿ 497, ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಒಟ್ಟು 2,377, ಕುಂದಾಪುರ ತಾಲೂಕಿನಲ್ಲಿ 1,543, ಬೈಂದೂರು ತಾಲೂಕಿನಲ್ಲಿ 2,478 ಜನರು ಕ್ವಾರಂಟೈನ್‌ನಲ್ಲಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸಿದವರು 7,097. ತಮಿಳುನಾಡಿನಿಂದ 75, ತೆಲಂಗಾಣದಿಂದ 425, ಆಂಧ್ರಪ್ರದೇಶದಿಂದ 43, ಗೋವಾದಿಂದ 53, ಗುಜರಾತ್‌ನಿಂದ 40, ಮಧ್ಯಪ್ರದೇಶ, ಹರ್ಯಾಣ, ಚಂಡೀಗಢ, ಒಡಿಶಾದಿಂದ ತಲಾ ಒಂದು, ದಿಲ್ಲಿಯಿಂದ 21, ಪಶ್ಚಿಮಬಂಗಾಲದಿಂದ ಆರು, ರಾಜಸ್ಥಾನದಿಂದ ಐದು, ಪಂಜಾಬ್‌ನಿಂದ 11, ಕೇರಳದಿಂದ 92 ಮಂದಿ ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next