Advertisement

ಅಪರ್ಣಾ ಟಾಕೀಸ್‌

12:10 PM Nov 01, 2017 | |

ನಟಿಯಾಗಿ, ನಿರೂಪಕಿಯಾಗಿ 3 ದಶಕಗಳನ್ನು ಯಶಸ್ವಿಯಾಗಿ ಕಳೆದವರು ಅಪರ್ಣಾ. ಸ್ವತ್ಛ ಕನ್ನಡದ ನಿರೂಪಣೆಗೆ ಪರ್ಯಾಯ ಪದ ಎಂದರೆ ಅದು “ಅಪರ್ಣಾ’ ಅನ್ನುವಷ್ಟರ ಮಟ್ಟಿಗೆ ಇವರು ಕನ್ನಡಿಗರ ಮನಸ್ಸಿನಲ್ಲಿ ಛಾಪು ಒತ್ತಿದ್ದಾರೆ. ಇವರನ್ನು ನೋಡಿದವರು, “ಅಪರ್ಣಾಗೆ ವಯಸ್ಸೇ ಆಗೋದಿಲ್ವಾ?’ ಅಂತ ಉದ್ಗಾರ ತೆಗೆಯುವುದು ಸಾಮಾನ್ಯ.

Advertisement

ಏಕೆಂದರೆ ದೂರದರ್ಶನದಲ್ಲಿದ್ದಾಗ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ಅದೇ ಶರೀರ, ಅದೇ ಶಾರೀರ. 1984ರಲ್ಲಿ ತೆರೆಕಂಡ “ಮಸಣದ ಹೂವು’ ಚಿತ್ರದಿಂದ ತಮ್ಮ ನಟನಾ ವೃತ್ತಿ ಆರಂಭಿಸಿದ ಅಪರ್ಣಾ, ಮೊದಲ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆಗೂ ಪಾತ್ರರಾದರು. ತಮ್ಮದೇ ಆದ ಶೈಲಿಯ ನಿರೂಪಣೆ, ವಾರ್ತಾವಾಚನೆ ಅವರಿಗೆ ಇನ್ನಷ್ಟು ಪ್ರಸಿದ್ಧಿ ನೀಡಿತು.

ಇತ್ತೀಚಿನ “ಪ್ರೀತಿ ಇಲ್ಲದ ಮೇಲೆ’, “ಬಿಗ್‌ಬಾಸ್‌ ಸೀಸನ್‌-1′ ಟಿ.ವಿ. ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ “ಮಜಾ ಟಾಕೀಸ್‌’ನಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡು ರಂಜಿಸಿದ್ದಾರೆ. ಇವರ ಪತಿ ಆರ್ಕಿಟೆಕ್ಟ್ ಮತ್ತು ಸಾಹಿತಿ ನಾಗರಾಜ್‌ ವಸ್ತಾರೆ. ತಮ್ಮ ಕನ್ನಡ ಪ್ರೀತಿ, ಕುಟುಂಬ ಮುಂತಾದ ವಿಷಯಗಳ ಬಗ್ಗೆ “ಅವಳು’ ಜೊತೆಗೆ ಹಂಚಿಕೊಂಡಿದ್ದಾರೆ. 

* ಬಹುತೇಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ನೀವು ನಿರೂಪಣೆ ಮಾಡಿದ್ದೀರಿ. ಅದರಲ್ಲಿ ನಿಮಗೆ ಸವಾಲು ಅಂತನ್ನಿಸಿದ ಸಮಾರಂಭ ಯಾವುದು?
ಒಂದು ವರ್ಷ 120ಕ್ಕೂ ಹೆಚ್ಚು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಅವರಲ್ಲಿ ಹಲವಾರು ಪ್ರಶಸ್ತಿ ಪುರಸ್ಕೃತರ ಹೆಸರುಗಳು ಕೊನೆ ಕ್ಷಣಗಳಲ್ಲಿ ಪಟ್ಟಿ ಸೇರಿದ್ದವು. ನಿರೂಪಣೆ ವೇಳೆ ಹಲವರ ಪರಿಚಯ, ಸಾಧನೆಯ ಕ್ಷೇತ್ರದ ಕುರಿತು ಮಾಹಿತಿಯೇ ಇರಲಿಲ್ಲ. ಕಾರ್ಯಕ್ರಮ ನಡೆಯುತ್ತಿರುವಾಗಲೇ ಮಾಹಿತಿ ಕಲೆಹಾಕಿ, ಕಾರ್ಯಕ್ರಮಕ್ಕೆ ಸ್ವಲ್ಪವೂ ಚ್ಯುತಿ ಬರದಂತೆ ನಿರೂಪಣೆ ಮಾಡಿದ್ದೆ. ಆ ಸಮಾರಂಭ ನಿಜಕ್ಕೂ ಸವಾಲಿನದ್ದಾಗಿತ್ತು. 

* ಸ್ವತ್ಛ ಕನ್ನಡದಲ್ಲಿ ಅಚ್ಚುಕಟ್ಟಾದ ನಿರೂಪಣೆ ಅಂದರೆ ಈಗಲೂ ನಿಮ್ಮ ಹೆಸರೇ ಚಾಲ್ತಿಯಲ್ಲಿದೆಯಲ್ಲಾ?
ಆ ಬಗ್ಗೆ ನನಗೆ ಹೆಮ್ಮೆ ಇದೆ. ಅಷ್ಟೇ ಬೇಸರವೂ ಇದೆ. ನಾನು ಈ ಕ್ಷೇತ್ರಕ್ಕೆ ಬಂದಾಗ ಡಿಡಿ ವಾಹಿನಿ ಬಿಟ್ಟರೆ ಬೇರೆ ಯಾವ ಚಾನೆಲ್‌ಗ‌ಳೂ ಇರಲಿಲ್ಲ. ಈಗ ಹತ್ತಾರು ಚಾನೆಲ್‌ಗ‌ಳಿವೆ. ನೂರಾರು ನಿರೂಪಕ, ನಿರೂಪಕಿಯರಿದ್ದಾರೆ. ಆದರೂ ಸ್ವತ್ಛ ಕನ್ನಡದ ನಿರೂಪಣೆಗೆ ನಾನೇ ಏಕೆ ಬ್ರಾಂಡ್‌ ಆಗಿದ್ದೀನೊ ಗೊತ್ತಿಲ್ಲ.

Advertisement

ಹಾಗಾದರೆ ಬೇರೆ ಯಾರಿಗೂ ಸ್ವತ್ಛ ಕನ್ನಡ ಬರುವುದಿಲ್ಲವಾ ಅಥವಾ ಬಂದರೂ ಅವರು ಮಾತಾಡಲು ಹಿಂದೇಟು ಹಾಕುತ್ತಾರಾ ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ. ಅದೂ ಅಲ್ಲದೇ ನಾನು ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದೇನೆ. ಆದರೂ ಅಪರ್ಣಾ ಎಂದರೆ ಸ್ವತ್ಛ ಕನ್ನಡದ ನಿರೂಪಕಿ ಎಂದೇ ಗುರುತಿಸಲ್ಪಡುತ್ತೇನೆ. ಹಾಗಾದರೆ, ನನ್ನ ಬೇರೆಲ್ಲಾ ಸಾಧನೆಗಳು ಗೌಣವಾ ಅಥವಾ ಸ್ವತ್ಛ ಕನ್ನಡ ಮಾತಾಡುವುದೇ ಒಂದು ಸಾಧನೆಯಾ?

* ನಿಮ್ಮ ನಿರೂಪಣೆ ಬಗ್ಗೆ ಟೀಕೆಗಳು ಬಂದ ಸಂದರ್ಭಗಳು ಇವೆಯಾ?
“ಅಪರ್ಣಾ ನೀವ್ಯಾಕೆ ಇಂಗ್ಲಿಷ್‌ ಬಳಸಲೇಬಾರದು ಅಂತ ಹಠ ಮಾಡ್ತೀರಾ?’ ಹೀಗಂತ ನನಗೆ ಸಾಕಷ್ಟು ಜನ ಕೇಳಿದ್ದಾರೆ. ನಾನೇನು ಇಂಗ್ಲಿಷ್‌ ವಿರೋಧಿಯಲ್ಲ. ಆದರೆ, ನನಗೆ ಸ್ವತ್ಛ ಕನ್ನಡವನ್ನು ಸುಲಲಿತವಾಗಿ ಮಾತಾಡಲು ಬರುವಾಗ ಕಲಬೆರಕೆ ಕನ್ನಡ ಏಕೆ ಮಾತನಾಡಲಿ? ಹಾಗಂತ ನಾನು ಪ್ರಯತ್ನಪೂರ್ವಕವಾಗಿ ಸ್ವತ್ಛ ಕನ್ನಡ ಮಾತನಾಡುವ ಪೈಕಿಯಲ್ಲ. ತೀರಾ ಸಹಜವಾದ ನನ್ನ ಕನ್ನಡ ಕೆಲವರಿಗೆ ಹಠದಂತೆ ಏಕೆ ಕಾಣುತ್ತದೆಯೋ ಗೊತ್ತಿಲ್ಲ. 

* ತುಂಬಾ ಕಲಾತ್ಮಕವಾದ, ಸುಂದರವಾದ ಮನೆ ನಿಮ್ಮದು. ಗೃಹಿಣಿಯಾಗಿ ಮನೆ ನಿರ್ವಹಣೆ ಕಷ್ಟ ಅಂತನ್ನಿಸಲ್ವಾ?
ನಮ್ಮ ಮನೆಯಲ್ಲಿ 2 ಭಾಗಗಳಿವೆ. ಒಂದು ಮನೆ ಭಾಗ. ಇನ್ನೊಂದು ಆಫೀಸ್‌ ಭಾಗ. ಮನೆಯಲ್ಲೊಂದು ಅಲಿಖೀತ ನಿಯಮ ಪಾಲನೆಯಲ್ಲಿದೆ. ಮನೆ ಸ್ವತ್ಛಗೊಳಿಸಲು ಸಹಾಯಕರಿದ್ದರೂ ನಾನು ಮತ್ತು ನಾಗರಾಜ್‌ ಬಿಡುವಿನ ಸಮಯದ ಹೆಚ್ಚಿನ ಭಾಗವನ್ನು ಮನೆ ಸ್ವತ್ಛತೆಯಲ್ಲಿ ಕಳೆಯಬೇಕು.

ಬಚ್ಚಲು ತಿಕ್ಕುವ ಕೆಲಸದಿಂದ ಹಿಡಿದು ಎಲ್ಲ ರೀತಿಯ ಸ್ವತ್ಛ ಕಾರ್ಯಗಳನ್ನೂ ನಾವು ಮಾಡುತ್ತೇವೆ. ಸ್ವತ್ಛತೆ ವಿಷಯಕ್ಕೆ ಬಂದರೆ ನಾಗರಾಜ್‌ ನನ್ನ ತಾತ. ಎಲ್ಲವೂ ಅವರಿಗೆ ಅಚ್ಚುಕಟ್ಟಾಗಿರಬೇಕು. ಚಂದವಾಗಿ ಮನೆ ಕಟ್ಟಿಕೊಂಡರೆ ಸಾಕಾ? ಅದನ್ನು ಅಷ್ಟೇ ಚಂದವಾಗಿ ನಿರ್ವಹಿಸಬೇಕು ಕೂಡ ಅಂತಾರೆ.

* “ಬಿಗ್‌ಬಾಸ್‌’, “ಮಜಾ ಟಾಕೀಸ್‌’ನಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನರಿಗೆ ಶಾಕ್‌ ಕೊಟ್ರಿ?
ಬಿಗ್‌ಬಾಸ್‌ ಒಪ್ಪಿಕೊಳ್ಳುವಾಗ ಆ ಕಾರ್ಯಕ್ರಮದ ಪರಿಕಲ್ಪನೆಯೇ ನನಗಿರಲಿಲ್ಲ. ಕಾರ್ಯಕ್ರಮ ತಂಡ ಕೂಡ ನನ್ನನ್ನು ಕೊನೇ ಕ್ಷಣದಲ್ಲಿ ಸಂಪರ್ಕಿಸಿತ್ತು. 15 ದಿನಗಳ ಕಾಲ ಕಾರ್ಯಕ್ರಮದಲ್ಲಿ ಇದ್ರೆ ಸಾಕು ಎಂದಿದ್ದರು. 15 ದಿನ ಅಷ್ಟೇ ಅಲ್ವಾ, ಇದೊಂದು ಹೊಸ ಪ್ರಯೋಗ ಮಾಡಿಯೇ ಬಿಡೋಣ ಅಂತ ಅಜ್ಞಾನದಲ್ಲೇ ಒಪ್ಪಿಕೊಂಡೆ. ಆದರೆ, 42 ದಿನ ನಾನು ಅಲ್ಲಿರಬೇಕಾಯಿತು. ಅದೊಂಥರಾ ಬೇರೆಯದ್ದೇ ಅನುಭವ.

ಇನ್ನು “ಮಜಾ ಟಾಕೀಸ್‌’ನಲ್ಲಿ ಪಾತ್ರ ನಿರ್ವಹಿಸುವಂತೆ ಸೃಜನ್‌ ಲೋಕೇಶ್‌ ನನ್ನನ್ನು ಕೇಳಿಕೊಂಡರು. ಮೊದಲಿಗೆ ಭಯದಿಂದಲೇ ಒಪ್ಪಿಕೊಂಡೆ. ಒಂದೆರಡು ಎಪಿಸೋಡ್‌ಗಳಾದ ಬಳಿಕ ನಾನು ಇದರಲ್ಲಿ ಮುಂದುವರೆಯುವುದಿಲ್ಲ. ನನ್ನಿಂದ ಇದನ್ನು ನಿರ್ವಹಿಸಲಾಗುವುದಿಲ್ಲ ಎಂದು ಸೃಜನ್‌ಗೆ ಕೇಳಿಕೊಂಡೆ. ಆದರೆ, ಅವರು “ನಿಮ್ಮಿಂದ ಖಂಡಿತಾ ಆಗುತ್ತೆ. ನೀವೇ ಈ ಪಾತ್ರವನ್ನು ನಿರ್ವಹಿಸಬೇಕು’ ಎಂದರು. “ಮಜಾ ಟಾಕೀಸ್‌’ ಬಗ್ಗೆ ಖುಷಿ ಇದೆ. ನಾನು ಕಾಮಿಡಿ ಮಾಡ್ತೀನಿ, ಜನರನ್ನು ನಗಿಸ್ತೀನಿ ಅಂತ ನನಗೇ ತಿಳಿದಿರಲಿಲ್ಲ. 

* ನಿಮ್ಮದು ಲವ್‌ ಮ್ಯಾರೇಜಾ? ಮೊದಲು ಯಾರು ಪ್ರಪೋಸ್‌ ಮಾಡಿದ್ದು ?
ನಮ್ಮದು ಲವ್‌ ಮ್ಯಾರೇಜ್‌. ಅವರು ನನ್ನ ಧ್ವನಿಯನ್ನು ಆಕಾಶವಾಣಿಯಲ್ಲಿ ಕೇಳಿ ಮೆಚ್ಚಿಕೊಂಡಿದ್ದರಂತೆ. ಟಿ.ವಿ.ಯಲ್ಲೂ ಹಲವಾರು ಸಲ ನೋಡಿ ನನ್ನನ್ನು ಭೇಟಿಯಾಗುವ ಆಸೆ ಹೊಂದಿದ್ದರಂತೆ. ಒಮ್ಮೆ ನನ್ನ ಯಾವುದೋ ಕಾರ್ಯಕ್ರಮದ ಬಗ್ಗೆ ಅವರ ಸ್ನೇಹಿತನ ಜೊತೆ ಮಾತನಾಡುತ್ತಾ “ಅಪರ್ಣಾರನ್ನು ಒಮ್ಮೆಯಾದ್ರೂ ಭೇಟಿಯಾಗಬೇಕು’ ಅಂದರಂತೆ. ಆ ಸ್ನೇಹಿತ ನನಗೂ ಪರಿಚಿತರು. ಅವರು ನನಗೆ ಈ ವಿಷಯ ತಿಳಿಸಿದರು.

ನಾನು ನಾಗರಾಜ್‌ ವಸ್ತಾರೆ ಅವರ ಕಥೆ, ಲೇಖನಗಳನ್ನು ಓದಿದ್ದೆ. ಹಾಗಾಗಿ ಭೇಟಿಗೆ ಖುಷಿಯಿಂದ ಒಪ್ಪಿಕೊಂಡೆ. ಬಳಿಕ “ನಿಮ್ಮ ಕಾರ್ಯಕ್ರಮ ಚೆನ್ನಾಗಿತ್ತು. ಆದರೆ, ನಿಮ್ಮ ಡ್ರೆಸ್‌ ನನಗೆ ಹಿಡಿಸಲಿಲ್ಲ’ ಎಂದು ಟೀಕಿಸುವಷ್ಟು ಇಬ್ಬರ ಮಧ್ಯೆ ಸಲುಗೆ ಬೆಳೆಯಿತು. ಮೊದಲಿಗೆ ಪ್ರಪೋಸ್‌ ಮಾಡಿದ್ದು ಅವರೇ. ಇಷ್ಟ ಇದ್ದರೂ ನಾನು ತಕ್ಷಣ ಒಪ್ಪಿಕೊಳ್ಳಲಿಲ್ಲ. ಒಂದಷ್ಟು ಸಮಯ ತೆಗೆದುಕೊಂಡು ಸರಿಯಾದ ತೀರ್ಮಾನ ತೆಗೆದುಕೊಳ್ಳೋಣ ಅಂತ ಒಂದಷ್ಟು ತಿಂಗಳು ಅವರನ್ನು ಕಾಯಿಸಿದೆ.

* ಈಗ ಟಿ.ವಿ. ಕಾರ್ಯಕ್ರಮಗಳಲ್ಲಿ ಬಳಕೆಯಾಗುತ್ತಿರುವ ಕನ್ನಡದ ಬಗ್ಗೆ ನಿಮ್ಮ ಅಭಿಪ್ರಾಯ ಏನು? 
ಇಂಗ್ಲಿಷ್‌ ಬೆರೆಸದೇ ಕನ್ನಡ ಮಾತಾಡಲು ಸಾಧ್ಯವೇ ಇಲ್ಲ ಎಂದು ತಿಳಿದಿದ್ದಾರೆ. ಕಂಗ್ಲಿಷ್‌ ಮಾತಾಡುವುದು ಅಪ್‌ಡೇಟೆಟ್‌ ವರ್ಷನ್‌ ಅಂತೆ. ಸ್ವತ್ಛ ಕನ್ನಡದಲ್ಲಿ ಮಾತಾಡಿದರೆ ಯುವ ಜನರನ್ನು ಸೆಳೆಯಲು ಸಾಧ್ಯವಿಲ್ಲ ಎಂಬ ಧೋರಣೆ ಇದೆ. ಇದನ್ನು ನಾನು ಖಂಡಿತಾ ಒಪ್ಪಲ್ಲ. ಕನ್ನಡ ಒಂದು ಚಂದದ, ಸೊಗಸಾದ ಭಾಷೆ. ಸರಳ ಕನ್ನಡದಲ್ಲಿ ಮಾತಾಡಿದರೆ ಕನ್ನಡದ ಯುವ ಪೀಳಿಗೆಗೆ ಅರ್ಥವೇ ಆಗುವುದಿಲ್ಲ ಅಂದರೆ ಏನರ್ಥ? 

* ಈಗಿನ ನಿರೂಪಕರ ಬಗ್ಗೆ ನಿಮ್ಮ ಅಭಿಪ್ರಾಯ?
ಈಗಿನ ನಟ-ನಟಿ, ನಿರೂಪಕರಲ್ಲಿ ಕೆಲವರು ತಮಗೆ ಇಂಗ್ಲಿಷ್‌ ಬರುವುದಿಲ್ಲ ಎಂಬ ಕೀಳರಿಮೆ ಹೊಂದಿರುವುದನ್ನೂ ನಾನು ನೋಡಿದ್ದೇನೆ. ಇಂಗ್ಲಿಷ್‌ ಕಲಿಯಬೇಕು ನಿಜ. ಆದರೆ, ನಿರರ್ಗಳವಾಗಿ ಮಾತಾಡಲು ಬರುವುದಿಲ್ಲ ಎಂದು ಯಾರೂ ಕುಗ್ಗುವ ಅಗತ್ಯವಿಲ್ಲ. ಇನ್ನು ಎಷ್ಟೋ ನಿರೂಪಕ, ನಿರೂಪಕಿಯರು ತಮಗೆ ಇಂಗ್ಲಿಷ್‌ ಕೂಡ ಚೆನ್ನಾಗಿ ಬರುತ್ತದೆ ಎಂದು ಅವಕಾಶ ಸಿಕ್ಕಾಗಲೆಲ್ಲಾ ನಿರೂಪಿಸಲು ಪ್ರಯತ್ನಿಸುತ್ತಾರೆ.

ಆ ಮನೋಭಾವ ಈಗ ಹೆಚ್ಚಿನವರಿಗೆ ಇದೆ. ಆದರೆ, ಕನ್ನಡ ಎಷ್ಟೇ ಚೆನ್ನಾಗಿ ಬಂದರೂ ಅದನ್ನು ಮರೆಮಾಚಿ ತಮಗೆ ಭಾಷೆ ಮೇಲೆ ಹಿಡಿತ ಇಲ್ಲ ಎಂದು ತೋರಿಸಿಕೊಳ್ಳಲು ಹೆಣಗುತ್ತಾರೆ. ನನಗೆ ಒಳ್ಳೆಯ ಕನ್ನಡ ಬರುವುದಿಲ್ಲ ಎಂಬುದೇ ಈಗಿನವರಿಗೆ ಒಂಥರಾ ದೊಡ್ಡಸ್ತಿಕೆ ವಿಷಯ.

* ನಿಮಗೆ ಕಂಠಪಾಠವೇ ಆಗಿಹೋಗಿರು ಕನ್ನಡ ಪದ್ಯಗಳು ಯಾವುವು?
ಪಂಜೆ ಮಂಗೇಶರಾಯರ “ಮೂಡುವನು ರವಿ ಮೂಡುವನು…’, ಡಿವಿಜಿ ಅವರ “ವನಸುಮದೊಳೆನ್ನ ಜೀವನವು ವಿಕಸಿಸುವಂತೆ…’

* ನೀವು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು? ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವ ಬೆಂಗಳೂರಿನ ಸ್ಥಳಗಳು ಯಾವುವು?
ನನ್ನ ತಂದೆ ಪತ್ರಕರ್ತರಾಗಿದ್ದವರು. ಭಾನುವಾರವೂ ಕೆಲವೊಮ್ಮೆ ಕಚೇರಿಗೆ ಹೋಗುತ್ತಿದ್ದರು. ಆಗ ನಮ್ಮನ್ನೂ ಕರೆದೊಯ್ಯುತ್ತಿದ್ದರು. ವಾಪಸ್ಸು ಬರುವಾಗ “ಇಂಡಿಯನ್‌ ಎಕ್ಸ್‌ಪ್ರೆಸ್‌’ ಎದುರಿಗೆ “ಶ್ಯಾಮ್‌ ಪ್ರಸಾದ್‌’ ಅಂತ ಹೋಟೆಲ್‌ ಇತ್ತು.

ಅಲ್ಲಿ ನನಗೆ, ತಮ್ಮನಿಗೆ ದೋಸೆ ಕೊಡಿಸುತ್ತಿದ್ದರು. ಅಲ್ಲಿಂದ ಕನ್ನಿಂಗ್‌ಹ್ಯಾಂ ರಸ್ತೆ, ಕಾವೇರಿ ಥಿಯೇಟರ್‌ ಮಾರ್ಗವಾಗಿ ಪ್ಯಾಲೆಸ್‌ ಗುಟ್ಟಳ್ಳಿಯಲ್ಲಿದ್ದ ನಮ್ಮ ಮನೆಗೆ ನಡೆದುಕೊಂಡೇ ಬರುತ್ತಿದ್ದೆವು. ಈಗಿನ ಕನ್ನಿಂಗ್‌ಹ್ಯಾಂ ರಸ್ತೆಯ ಸ್ವರೂಪ ಯೋಚಿಸಲೂ ಸಾಧ್ಯವಾಗದಷ್ಟು ಬದಲಾಗಿದೆ. 

* ನಿಮ್ಮ ಪತಿ ಲೇಖಕರು. ನೀವೂ ಆಗೀಗ ಲೇಖನ ಬರೆಯುವುದನ್ನು ನೋಡಿದ್ದೇವೆ. ಪೂರ್ಣ ಪ್ರಮಾಣದ ಲೇಖಕಿಯಾಗುವ ಇರಾದೆ ಇಲ್ಲವೇ?
ಬರೆಯುವ ಆಸಕ್ತಿ ಇದೆ. ಸಮಯದ ಅಭಾವವೂ ಇದೆ. ಜೊತೆಗೆ ನನ್ನದಿನ್ನೂ ಕೈಬರಹ. ನಾನು ಬರೆದಿದ್ದನ್ನು ಮತ್ತೂಬ್ಬರು ಟೈಪಿಸಬೇಕು. ಆದರೆ, ನಾನು ಕೂತು ಬರೆಯುವ ದಿನಗಳು ಖಂಡಿತಾ ಬರುತ್ತವೆ. ನಾನು ದೂರದರ್ಶನದ ಆರಂಭಿಕ ದಿನಗಳನ್ನು ಕಂಡವಳು. ಈಗಿನ ಆಧುನಿಕ ಟಿ.ವಿ. ಯುಗದಲ್ಲೂ ಸಕ್ರಿಯಳಾಗಿರುವವಳು. ನನ್ನ ಟಿ.ವಿ. ಪ್ರಯಾಣದ ವಿವಿಧ ಮಜಲುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವ ಕುರಿತು ಗಂಭೀರವಾಗಿ ಯೋಚಿಸಿದ್ದೇನೆ. ಈ ಕುರಿತು ಖಂಡಿತಾ ಒಂದು ಪುಸ್ತಕ ಬರೆಯುತ್ತೇನೆ. 

* ನಿಮ್ಮ ಪತಿ ಬರೆದಿರುವ ಕಥೆಗಲ್ಲಿ ನಿಮಗೆ ತುಂಬಾ ಇಷ್ಟವಾದ ಕಥೆ ಯಾವುವು?
ಅವರ ಮೊದಲ ಕಥಾ ಸಂಕಲನ “ಹಕೂನಾ ಮಟೂಟ’ದ ಎಲ್ಲಾ ಕಥೆಗಳೂ ನನ್ನನ್ನು ತೀವ್ರವಾಗಿ ಕಾಡುತ್ತವೆ. ಅದರ ಎಲ್ಲಾ ಕಥೆಗಳೂ ಮನಸ್ಸಿನಲ್ಲಿ ಕೂತಿವೆ. 

* ನಿಮ್ಮ ಫೇವರಿಟ್‌ ಸಿನಿಮಾಗಳು ಯಾವುವು? ನಿಮ್ಮ ನೆಚ್ಚಿನ ನಟನ ಕುರಿತು ಒಂದೆರಡು ಸಾಲುಗಳನ್ನೂ ಹೇಳಿ?
ಪುಟ್ಟಣ ಕಣಗಾಲ್‌ರ “ರಂಗ ನಾಯಕಿ’ ತುಂಬಾ ಇಷ್ಟ. ಹಿಂದಿ ನಟ ಸಂಜೀವ್‌ ಕುಮಾರ್‌ ನನ್ನ ಫೇವರಿಟ್‌ ನಟ. ಅವರ ಬಹುತೇಕ ಎಲ್ಲಾ ಚಿತ್ರಗಳು ನನಗೆ ಇಷ್ಟವೇ. ನಾನು ಅವರ ನಗುವಿಗೆ ದೊಡ್ಡ ಅಭಿಮಾನಿಯಾಗಿದ್ದೆ. ನನ್ನ ಹುಡುಗನಿಗೆ ಸಂಜೀವ್‌ ಕುಮಾರ್‌ ಥರಾ ಚಂದದ ನಗು ಇರಬೇಕು ಅಂತ ಕನಸು ಕಾಣಾ¤ ಇದ್ದೆ. 

* ನಿಮ್ಮ ಗಂಡನಾಗುವವರ ಬಗ್ಗೆ ನಿಮಗಿದ್ದ ಕನಸುಗಳ ಬಗ್ಗೆ ಹೇಳಿ.
ನನಗೆ ಒಬ್ಬ ರೈತನನ್ನು ಮದುವೆ ಆಗಬೇಕು ಅಂತ ತುಂಬಾ ಆಸೆ ಇತ್ತು. ನನ್ನ ಅಜ್ಜಿಯ ಮನೆಯವರು ರೈತರು. ರಜಾ ದಿನಗಳಲ್ಲಿ ಅಲ್ಲಿ ಹೋಗಿ ಕಾಲ ಕಳೆಯುತ್ತಿದ್ದರಿಂದ ನನಗೆ ವ್ಯವಸಾಯದಲ್ಲಿ ಬಹಳ ಆಸಕ್ತಿ. ರೈತನನ್ನು ಮದುವೆಯಾದರೆ ನಾನೂ ರೈತ ಮಹಿಳೆಯಾಗಿ ಹಳ್ಳಿಯಲ್ಲಿ ಜೀವನ ನಡೆಸಬಹುದು ಅಂತ ಆಸೆ ಪಟ್ಟಿದ್ದೆ. 

* ಅಪರ್ಣ “ಮಸಣದ ಹೂವು’ ಚಿತ್ರದಲ್ಲಿ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ ಎಂದು ತುಂಬಾ ಜನ ಹೇಳ್ತಾರಲ್ಲ?
ನನ್ನ ಕುಟುಂಬದಲ್ಲಿ ಎಲ್ಲರೂ ಹೀಗೇ ಇರುವುದು. ಜೊತೆಗೆ ನಾನು ಅರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ಈ ವಿಷಯದದಲ್ಲಿ ನನಗೆ ಸರಿಯಾದ ಪತಿ ಸಿಕ್ಕಿದ್ದಾರೆ. ನಮಗಿಬ್ಬರಿಗೂ ಹೊರಗಿನ ಊಟ ಇಷ್ಟ ಆಗಲ್ಲ. ಇಬ್ಬರೂ ಜಂಕ್‌ ಫ‌ುಡ್‌ನಿಂದ ತುಂಬಾ ದೂರ.

ಆದಷ್ಟು ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ ನೈಸರ್ಗಿಕವಾದುದನ್ನೇ ಬಳಸುತ್ತೇವೆ. ಚಿಕ್ಕ ಪುಟ್ಟ ಕಾಯಿಲೆಗಳಿಗೆಲ್ಲಾ ಮಾತ್ರೆ ನುಂಗುವ ಅಭ್ಯಾಸ ಇಲ್ಲ. ಜೊತೆಗೆ ಸದಾ ಏನಾದರೊಂದು ಕೆಲಸ ಮಾಡುತ್ತಲೇ ಇರ್ತೇವೆ. ಇವೆಲ್ಲವೂ ನನ್ನನ್ನು ಆರೋಗ್ಯಪೂರ್ಣವಾಗಿ ಇರಿಸಿವೆ.

* ಪಾರ್ವತಮ್ಮ ರಾಜ್‌ಕುಮಾರ್‌ರದ್ದು ಸದಾ ಕಾಡುವ ವ್ಯಕ್ತಿತ್ವ!
ನನ್ನ ದೃಷ್ಟಿಯಲ್ಲಿ ಸಾಧಕಿಯರು ಅಂದರೆ ನನ್ನ ಅಮ್ಮನ ತಲೆಮಾರಿನ ಮಹಿಳೆಯರು. ನಮ್ಮ ಮನೆ ಕೆಲಸದಾಕೆ ಲಕ್ಷ್ಮಮ್ಮನೂ ಸಾಧಕಿಯೇ. ಅವರೆಲ್ಲಾ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದಾರೆ. ತುಂಬು ಸಂಸಾರದಲ್ಲಿ ಅಪಮಾನ, ನಿಂದನೆಗಳಿಗೆ ಗುರಿಯಾಗಿದ್ದಾರೆ.

ಆದರೆ, ಕಷ್ಟಗಳಿಗೆ ಬೆನ್ನು ತೋರಿಸದೇ, ಬಾಳನ್ನು ಬೈಯದೇ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಕುಟುಂಬಗಳನ್ನು ನಿಲ್ಲಿಸಿದ್ದಾರೆ. ಪಾರ್ವತಮ್ಮ ರಾಜಕುಮಾರ್‌ರ ವ್ಯಕ್ತಿತ್ವ, ಸಾಧನೆ ನನನ್ನು ಬಹಳ ಕಾಡುತ್ತದೆ. ಯಾವ ಪದವಿಯನ್ನೂ ಪಡೆಯದ, ಯಾವ ಟಾಕುಠೀಕುಗಳೂ ಇಲ್ಲದ ಅವರು, ರಾಜ್‌ಕುಮಾರ್‌ ಸಾಮ್ರಾಜ್ಯವನ್ನು ಕಟ್ಟಿ,ನಡೆಸಿದ ಬಗೆ ನಿಜಕ್ಕೂ ಅನನ್ಯ.

ಸಿಇಒ,ಎಂಡಿ ಇತ್ಯಾದಿ ಯಾವ ಪದವಿಗಳಿಂದಲೂ ಕರೆಸಿಕೊಳ್ಳದೇ ಉದ್ಯಮಿಯಾಗಿ ಬಹಳಷ್ಟು ಎತ್ತರಕ್ಕೆ ಬೆಳೆದವರು. ಸೂಪರ್‌ ಸ್ಟಾರ್‌ನ ಪತ್ನಿ ಅಲ್ಲದೇ ಸ್ವತಃ ತಾವೇ ಪವರ್‌ಫ‌ುಲ್‌ ಮಹಿಳೆಯಾಗಿದ್ದರೂ ಅವರ ವೇಷ-ಭೂಷಣ, ಮಾತುಗಾರಿಕೆ ಯಾವುದೂ ಕಡೆಯವವರೆಗೂ ಸ್ವಲ್ಪವೂ ಬದಲಾಗಿರಲಿಲ್ಲ. ಜೊತೆಗೆ ದೊಡ್ಡ ಕುಟುಂಬದ ಜವಾಬ್ದಾರಿಯನ್ನೂ ನಿಭಾಯಿಸಿದ ಅಪ್ಪಟ ಗೃಹಿಣಿ ಅವರು. 

* ನನ್ನ ಪತಿಯಷ್ಟು ಚೆನ್ನಾಗಿ ಅಡುಗೆ ಮಾಡಲು ಬರಲ್ಲ!
ನನ್ನ ಗಂಡ ಬಹಳ ಚೆನ್ನಾಗಿ ಅಡುಗೆ ಮಾಡ್ತಾರೆ. ಅದು ನನಗೆ ವರವೂ ಹೌದು, ಶಾಪವೂ ಹೌದು. ವರ ಯಾಕಂದ್ರೆ, ನನಗೆ ಇದುವರೆಗೆ ಅಡುಗೆ ಕೆಲಸ ಹೊರೆಯಾಗಿಲ್ಲ. ಮನೆಗೆ ನೆಂಟರಿಷ್ಟರು ಬಂದಾಗ ಅವರೇ ರುಚಿ ರುಚಿಯಾಗಿ ಅಡುಗೆ ಮಾಡ್ತಾರೆ. ನನಗೆ ಕೆಲಸದ ಒತ್ತಡ ಇದ್ದಾಗ ನಾನು ಅಡುಗೆ ಮನೆ ಕಡೆ ಹೋಗುವುದೇ ಇಲ್ಲ. ನಾನು ಮಾಡುವ ಅಡುಗೆಗಿಂತ ಅವರ ಅಡುಗೆ ರುಚಿಯಾಗಿ ಇರುತ್ತದೆ.

ಅದು ನನಗೆ ಶಾಪವೂ ಹೌದು. ನಾನು ಹೇಗೇ ಅಡುಗೆ ಮಾಡಿದರೂ ಅವರದನ್ನು ಒಪ್ಪುವುದಿಲ್ಲ. ಏನಾದರೊಂದು ಕ್ಯಾತೆ ತೆಗೀತಾರೆ. ಅಬ್ಟಾ… ತುಂಬಾ ಚೆನ್ನಾಗಿ ಅಡುಗೆ ಮಾಡುವವರನ್ನು ಒಪ್ಪಿಸುವುದು ಬಹಳ ಕಷ್ಟ. ಅದಕ್ಕೇ, ಅಡುಗೆ ಮಾಡಿ ಬೈಸಿಕೊಳ್ಳುವುದಕ್ಕಿಂತ ಮಾಡದಿರುವುದೇ ವಾಸಿ ಅಂತ ಸುಮ್ಮನೆ ಇರ್ತೀನಿ.

* ನಿಮ್ಮಿಬ್ಬರ ಮಧ್ಯೆ ಯಾವ ವಿಷಯಕ್ಕೆ ಆಗಾಗ ಜಗಳ ನಡೆಯುತ್ತದೆ?
ನಾವಿಬ್ಬರೂ 2 ದಿನಕ್ಕೊಮ್ಮೆಯಾದರೂ ಜಗಳ ಮಾಡ್ತೀವಿ. ಪ್ರಮುಖವಾಗಿ ಜಗಳ ನಡೆಯುವುದೇ ಕ್ಲೀನಿಂಗ್‌ ವಿಷಯಕ್ಕೆ. ನಾನೆಷ್ಟೇ ಮನೆಯನ್ನು ಒಪ್ಪ-ಓರಣ ಮಾಡಿದರೂ, ಅವರಿಗೆ ಯಾವುದೋ ಮೂಲೆಯಲ್ಲಿರುವ ಸ್ವಲ್ಪವೇ ಧೂಳೂ ಕಣ್ಣಿಗೆ ಬಿದ್ದುಬಿಡುತ್ತೆ.

-ರೈತನನ್ನು ಮದ್ವೆ ಆಗ್ಬೇಕೂಂತ ಆಸೆ ಇತ್ತು…
-ಒಂದು ಪುಸ್ತಕ ಬರೆಯೋ ಆಸೆ ಇದೆ…
-ನಾವು, ಎರಡು ದಿನಕ್ಕೊಮ್ಮೆಯಾದ್ರೂ ಜಗಳ ಆಡ್ತೀವಿ
-ರಂಗನಾಯಕಿ ನನ್ನ ಫೇವರಿಟ್‌ ಸಿನಿಮಾ

* ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next