ಕಿಕ್ಕಿರಿದ ಕಲಾಭಿಮಾನಿಗಳ ಮುಂದೆ ಸುಮಧುರ ಸಂಗೀತ ನಾದ ಹೊಮ್ಮುತ್ತಿತ್ತು. ರಂಗುರಂಗಿನ ಮಂದ ಬೆಳಕಲ್ಲಿ ಸುಶ್ರಾವ್ಯ ಗಾನ ಸುಧೆ ಹರಿಯುತ್ತಿತ್ತು. ಚಿತ್ರ ಕಲಾವಿದರ ವೇಗದ ಕೈಚಳಕವಿತ್ತು. ಮನಸೂರೆಗೊಳಿಸುವ ಯಕ್ಷಗಾನ ನೃತ್ಯವಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಸಾಮಾಜಿಕ ಕಳಕಳಿ ತೋರುವ ಮನಸ್ಸುಗಳ ತಂಡ ಅಲ್ಲಿತ್ತು ಎನ್ನಬಹುದು. ಅದುವೇ ಟಿವಿ ಮತ್ತು ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದ ಕರಾವಳಿಯ 8 ಯುವ ಪ್ರತಿಭೆಗಳ ಮೂಲಕ ಬಗೆಬಗೆಯ ಕಲಾಪ್ರಕಾರಗಳನ್ನು ಒಂದೆಡೆ ಕಲೆ ಹಾಕಿ ಪ್ರಸ್ತುತ ಪಡಿಸಿದ ಅಪೂರ್ವ ಲೈವ್ ಕಾರ್ಯಕ್ರಮ ಅಪರಂಜಿ.
ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಅಪಘಾತದಲ್ಲಿ ಬಲಗೈ ಕಳೆದುಕೊಂಡ ಅದೇ ಕಾಲೇಜಿನ ಅಜಿತ್ ಎಂಬ ವಿದ್ಯಾರ್ಥಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆಯೋಜಿಸಿದ ಸಮಾಜಮುಖಿ ಕಾರ್ಯಕ್ರಮ ಎಂಬುದೇ ಇದರ ಹೆಗ್ಗಳಿಕೆ. ಕರಾವಳಿ ಪ್ರತಿಭೆಗಳ ಕಾರಂಜಿ ಎಂದೇ ಕರೆದ ಕಾರ್ಯಕ್ರಮ ಪ್ರೇಕ್ಷಕರ ಮೈಮನಕ್ಕೆ ಸಂತಸದ ಸಿಂಚನ ಚಿಮ್ಮಿಸಿತು.
ಝೀ ಕನ್ನಡದ ಸರಿಗಮಪ ಸೀಸನ್-15ರ ಸೆಮಿಫೈನಲಿಸ್ಟ್ ಡಾ| ಅಭಿಷೇಕ್ ರಾವ್, ಇನ್ನೊರ್ವ ಸೆಮಿಫೈನಲಿಸ್ಟ್ ರಜತ್ ಮೈಯ್ಯ, ಕೆಜಿಎಫ್ ಖ್ಯಾತಿಯ ಹಿನ್ನೆಲೆ ಗಾಯಕಿ ಆಯಿರಾ ಆಚಾರ್ಯ, ರುಬಿಕ್ ಕ್ಯೂಬ್ ಪರಿಣತ ಪ್ರಥ್ವೀಶ್, ಕಲಾವಿದ ಪ್ರದೀಶ್, ಯೋಗಾಸನಗಳಲ್ಲಿ ದಾಖಲೆ ನಿರ್ಮಿಸಿದ ಬಾಲೆ ತನುಶ್ರೀ, ಸ್ಯಾಕ್ಸೋಫೋನ್ ವಾದಕಿ ಅಂಜಲಿ ಶ್ಯಾನುಭೋಗ್ ಮತ್ತು ಹಿನ್ನೆಲೆ ಗಾಯಕಿ ವೈಷ್ಣವಿ ರವಿ ವೇದಿಕೆಯಲ್ಲಿ ಮಿಂಚಿದ ಆ ಎಂಟು ಅಪ್ಪಟ ಅಪರಂಜಿಗಳು.
ಅಂಜಲಿ ಚೂಕರ್ ಮೆರೆ ಮನ್ ಕೊ… ರಾಗವನ್ನು ಸುಶ್ರಾವ್ಯವಾಗಿ ನುಡಿಸಿದರು. ರಜತ್ ಹಲವಾರು ಬಾರಿ ಗೋಲ್ದನ್ ಬಝರ್ ಪಡೆದ ಹಾಡುಗಳಿಗೆ ಮತ್ತೆ ಕಂಠದಾನ ನೀಡಿ ಮೆಚ್ಚುಗೆ ಗಳಿಸಿದರು. ಆಯಿರಾ ಹಾಡಿದ ಹಾಡುಗಳ ತ್ರೋ ಭವಿಷ್ಯದ ಉತ್ರಮ ಹಿನ್ನೆಲೆ ಗಾಯಕಿಯಾಗುವ ಭರವಸೆ ಮೂಡಿಸಿತು. ಆಂಧಿ ಚಿತ್ರದ ತೆರೆ ಬಿನಾ ಝಿಂದಗಿ ಕೊ ಕೋಯಿ… ಯುಗಳ ಗೀತೆಗೆ ಅಭಿಷೇಕ್ ಮತ್ತು ವೈಷ್ಣವಿಯವರು ಮೂಲ ಹಾಡಿನಷ್ಟೇ ನ್ಯಾಯ ಒದಗಿಸಿದರು. ಅಲ್ಲದೆ ಅವರು ಹಾಡಿದ ಕನ್ನಡದ ರೊಮ್ಯಾಂಟಿಕ್ ರಿಮಿಕ್ಸ್ ಗೀತೆಗಳ ಗುಚ್ಚಕ್ಕೆ ಕಲಾವಿದ ಪ್ರದೀಶ್ ಅವರು ಜಯಂತ್ ಕಾಯ್ಕಿಣಿಯವರ ಮುಖ ಬರೆದು ಥ್ರಿಲ್ ಕೊಟ್ಟರು. ಪ್ರದೀಶ್ ಅವರು ಚಂಡೆ ಹಿಮ್ಮೇಳದಲ್ಲಿ ಚಿತ್ರಿಸಿದ ಯಕ್ಷನ ದಾರ ಚಿತ್ರಣಕ್ಕೂ (ಥ್ರೆಡ್ ಆರ್ಟ್) ಚಪ್ಪಾಳೆ ಗಿಟ್ಟಿಸಿಕೊಂಡರು. ಪ್ರದೀಶ್ ಸಹೋದರ ಪ್ರಥ್ವೀಶ್ ರುಬಿಕ್ ಕ್ಯೂಬ್ ಜೋಡಿಸುತ್ತಾ ಹಾಜಿ ಅಬ್ದುಲ್ಲಾ ಅವರನ್ನು ಮೂಡಿಸಿ ನೋಡುಗರನ್ನು ಬೆರಗುಗೊಳಿಸಿದರು. ತನುಶ್ರೀ ಉತ್ತಮ ಪ್ರದರ್ಶನ ನೀಡಿದರು.
ಜೀವನ್ ಶೆಟ್ಟಿ