ಹಾವೇರಿ:ರಾಜ್ಯದ ದಕ್ಷಿಣ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಉತ್ತರದಲ್ಲಂತೂ ಬರ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ. “ದೇವರೇ ಮಳೆ ಸುರಿಸಬೇಕು” ಎಂಬ ಹತಾಶೆಯ ಸ್ಥಿತಿಗೆ ಸರ್ಕಾರ ತಲುಪಿದ್ದು, ಎರಡು ವಾರಗಳ ಕಾಲ ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದೆ.
“ಮುಂಗಾರು ಮಳೆ ಕೈಕೊಟ್ಟಿದೆ. ಭೀಕರ ಬರದ ಮುನ್ಸೂಚನೆ ಕಂಡುಬಂದಿದೆ. ಕುಡಿಯಲು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲೂ ನೀರಿಲ್ಲದ ಪರಿಸ್ಥಿತಿ ಉದ್ಭವಿಸುತ್ತಿದೆ. ಹೀಗಾಗಿ ಈಗ ನಮ್ಮ ಕೈಯಲ್ಲಿ ಏನೂ ಇಲ್ಲ. ಇನ್ನೇನಿದ್ದರೂ ದೇವರೇ ಗತಿ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.
“ಭೀಕರ ಬರದ ಮುನ್ಸೂಚನೆ ಕಾಣುತ್ತಿದೆ. ಹೀಗಾಗಿ, ತಾವು ಕುಟುಂಬ ಸಮೇತ ಕೊಲ್ಲೂರು, ಮುರುಡೇಶ್ವರ, ಮಲೈ ಮಹಾದೇಶ್ವರ ಹಾಗೂ ಚಾಮುಂಡೇಶ್ವರಿ ದೇವಾಲಯಗಳಿಗೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ದೇವಸ್ಥಾನದ ಸ್ವಾಮೀಜಿಯೊಬ್ಬರು ರಾಜ್ಯದ ದೇವಸ್ಥಾನಗಳಲ್ಲಿ ಬೆಳಗ್ಗೆ 5 ಗಂಟೆಯಿಂದ ಎರಡು ವಾರ ಕಾಲ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ” ಎಂದು ಸಲಹೆ ನೀಡಿದ್ದಾರೆ. ಅವರ ಮಾತಿನಂತೆ ಈಗಾಗಲೇ ಮುಜರಾಯಿ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಈ ಕುರಿತು ಅ ಧಿಕೃತ ಆದೇಶ ಹೊರಡಿಸುತ್ತೇನೆ ಎಂದರು.
ಇನ್ನೊಂದೆಡೆ, ರಾಜ್ಯ ಸರ್ಕಾರ ನಾಡಿದ್ದಿನಿಂದ ಮೋಡಬಿತ್ತನೆಗೆ ಮುಂದಾಗಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮುಗಿಸಿಕೊಂಡಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದೆ.
ಸೋಮವಾರ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ದಕ್ಷಿಣ ಒಳನಾಡಿನ ಹಲವೆಡೆ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು (ಸೆಂ.ಮೀ.ಗಳಲ್ಲಿ): ಬೆಂಗಳೂರು ನಗರ, ಮಂಡ್ಯ ತಲಾ 13, ಆಗುಂಬೆ, ಶ್ರೀರಂಗಪಟ್ಟಣ ತಲಾ 11, ಆನೇಕಲ್, ಹುಲಿಯೂರುದುರ್ಗ, ರಾಮನಗರ, ಕನಕಪುರ ತಲಾ 7, ಟಿ.ನರಸೀಪುರ, ಯೆಳಂದೂರು, ಮಳವಳ್ಳಿ ತಲಾ 4, ಬೇಗೂರು, ಕೊಳ್ಳೇಗಾಲ, ಕೆ.ಆರ್.ಸಾಗರ ತಲಾ 3, ಕೊಪ್ಪ, ಹಾಸನ, ಮೈಸೂರು ತಲಾ 2, ವಿಜಯಪುರ, ಕಮಲಾಪುರ, ಎಚ್.ಡಿ.ಕೋಟೆ, ಚಾಮರಾಜನಗರ, ಹೊನಕೆರೆ, ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣ, ಹೊಸ್ಕೋಟೆ, ಮಾಗಡಿ ತಲಾ 1. ಗುರುವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.