ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧೆಗಾಗಿ ಕೊನೆ ಕ್ಷಣದವರೆಗೂ ಕಾಂಗ್ರೆಸ್ ಟಿಕೆಟ್‌ಗಾಗಿ ಕಾಯುತ್ತೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು. ಚುನಾವಣೆ ಸ್ಪರ್ಧೆ ಹಿನ್ನೆಲೆಯಲ್ಲಿ ಟೆಂಪಲ್ ರನ್ ನಡೆಸಿರುವ ಅವರು ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳಿ, ಶ್ರೀಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಅರಮನೆ ಕೋಟೆ ಆಂಜನೇಯ ಸ್ವಾಮಿ ಹಾಗೂ ವಿನಾಯಕ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಟಿಕೆಟ್ ವಿಚಾರವಾಗಿ ಯಾರನ್ನೂ ಭೇಟಿ ಮಾಡಿಲ್ಲ. ಆದರೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಆದಕ್ಕಾಗಿ ಕೊನೆ ಕ್ಷಣದವರೆಗೂ ಕಾಂಗ್ರೆಸ್ ಟಿಕೆಟ್‌ಗಾಗಿ ಕಾದು ನೋಡುತ್ತೇನೆ. ಒಂದೊಂದೇ ಹೆಜ್ಜೆಗಳನ್ನು ಇಟ್ಟು ರಾಜಕೀಯಕ್ಕೆ ಬರುತ್ತಿದ್ದೇನೆ. ಹೀಗಾಗಿ ಎಚ್ಚರಿಕೆಯಿಂದಲೇ ಹೆಜ್ಜೆಗಳನ್ನು ಇಡುತ್ತೇನೆ ಎಂದು ಹೇಳಿದರು.
ಬ್ಯಾಕ್ ನಿಖೀಲ್: ಸೋಷಿಯಲ್ ಮೀಡಿಯಾಗಳಲ್ಲಿ ಗೋ ಬ್ಯಾಕ್ ನಿಖೀಲ್ ಕುಮಾರಸ್ವಾಮಿ ಅಭಿಯಾನ ಆರಂಭವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಬರುವುದನ್ನು ನಾನು ತಡೆಯೋಕೆ ಆಗೋಲ್ಲ. ಯಾರಿಗೂ ನೋವಾಗುವಂತಹ ಮಾತುಗಳು ಬೇಡ.
ಯಾರ ಬಗ್ಗೆಯೂ ಅವಮಾನಕರವಾದ ಮಾತುಗಳನ್ನ ಆಡಬೇಡಿ ಎಂದು ಮನವಿ ಮಾಡಿದರು. ವಿಶ್ವ ಮಹಿಳೆಯರ ದಿನದ ಶುಭಾಶಯ ಕೋರಿದ ಸಮಲತಾ ಅಂಬರೀಶ್, ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡದು ಯಾವುದು ಇಲ್ಲ. ತಾಯಿಗೆ ನೋವಾಗುವಂತಹ ಮಾತುಗಳು ಬೇಡ ಎಂದರು.
ವೈಯಕ್ತಿಕ ಟೀಕೆ ಬೇಡ: ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದೆ. ಅಭಿಮಾನಿಗಳೇ ವೈಯಕ್ತಿಕ ಟೀಕೆ ಬೇಡ, ಅಲ್ಲೂ ಒಬ್ಬರು ತಾಯಿ ಇದ್ದಾರೆ. ಅವರಿಗೂ ನೋವಾಗುತ್ತೆ. ನಿಖೀಲ್ ಜಾಗದಲ್ಲಿ ನನ್ನ ಮಗನನ್ನು ನಿಲ್ಲಿಸಿ ನೋಡುತ್ತೇನೆ. ನನ್ನ ಮಗನಿಗೆ ಬೈದಾಗ ನನಗೆಷ್ಟು ನೋವಾಗುತ್ತೋ ಅಷ್ಟೇ ನೋವು ಆ ತಾಯಿಗೂ ಆಗುತ್ತೆ ಎಂದು ಮನವಿ ಮಾಡಿದರು.
ಮಂಡ್ಯದಲ್ಲಿ ಮನೆ ಸೊಸೆಯಂತೆ ನನ್ನನ್ನು° ಕಾಣುತ್ತಿದ್ದಾರೆ. ಈವರೆಗೆ ನಾನು ಜನರನ್ನು ಚುನಾವಣೆ ದೃಷ್ಟಿಯಿಂದ ಭೇಟಿ ಮಾಡಿಲ್ಲ. ಸ್ವಯಂಪ್ರೇರಿತವಾಗಿ ಜನ ಬರುತ್ತಿರುವುದು ಖುಷಿ ಆಗುತ್ತಿದೆ ಎಂದು ತಿಳಿಸಿದರು. ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನನ್ನು ಇದುವರೆಗೂ ಯಾರು ಭೇಟಿ ಮಾಡಿಲ್ಲ. ನಾನು ಜನರ ಬಳಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದ್ದರಿಂದ ನೆಮ್ಮದಿ ಸಿಕ್ಕಿದೆ. ಚಿಕ್ಕ ವಯಸ್ಸಿನಿಂದಲೂ ಬೆಟ್ಟಕ್ಕೆ ಬರುತ್ತಿದ್ದೇನೆ. ಇಂದು ತಾಯಿಯ ದರ್ಶನ ಮಾಡಿದ್ದು ಮನಸ್ಸಿಗೆ ಸಮಾಧಾನ ತಂದಿದೆ ಎಂದು ಸುಮಲತಾ ಹೇಳಿದರು.