Advertisement

ಉಪಯುಕ್ತ ಯೋಜನೆಗಳು ನಿಲ್ಲುವ ಆತಂಕ

01:24 AM Aug 13, 2019 | Team Udayavani |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 13 ಅಕಾಡೆಮಿಗಳು ಮತ್ತು ಮೂರು ಪ್ರಾಧಿಕಾರಗಳು ಈಗಾಗಲೇ ಆರಂಭಿಸಿರುವ ಯೋಜನೆಗಳನ್ನು ಹಾಗೇ ಮುಂದುವರಿಸಿಕೊಂಡು ಹೋಗಬೇಕು ಎಂಬ ಮಾತುಗಳು ಸಾಂಸ್ಕೃತಿಕ ವಲಯದಲ್ಲಿ ಬಲವಾಗಿ ಕೇಳಿ ಬಂದಿದೆ.

Advertisement

ಹೊಸ ಸರ್ಕಾರ ರಚನೆಯಾದ ನಂತರ ಪ್ರಾಧಿಕಾರ ಮತ್ತು ವಿವಿಧ ಅಕಾಡೆಗಳ ಅಧ್ಯಕ್ಷರು ರಾಜೀನಾಮೆ ನೀಡಿದ್ದು ಇದರಿಂದಾಗಿ ನಿರ್ಗಮಿತ ಅಧ್ಯಕ್ಷರು ಈಗಾಗಲೇ ರೂಪಿಸಿರುವ ಉತ್ತಮ ಯೋಜನೆಗಳು ಅರ್ಧಕ್ಕೆ ನಿಲ್ಲುವ ಆತಂಕ ಎದುರಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ನಾಟಕ ಅಕಾಡೆಮಿ ರೂಪಿಸಿರುವ ದೂರದೃಷ್ಟಿ ಯೋಜನೆಗಳಲ್ಲಿ “ರಂಗ ಚಟುವಟಿಕೆಗಳ ದಾಖಲೀಕರಣ’, “ಭರತನಾಟ್ಯ ಶಾಸ್ತ್ರದ ಕನ್ನಡ ಲಿಪೀಕರಣ’ ಕೂಡ ಸೇರಿದೆ. ಯಕ್ಷಗಾನ ಅಕಾಡೆಮಿ ತಾಲೂಕು ಕೇಂದ್ರಗಳಲ್ಲಿ “ಮನೆಯಂಗಳದಲ್ಲಿ ಮಾತುಕತೆ’ಎಂಬ ಕಾರ್ಯಕ್ರಮ ರೂಪಿಸಲು ತಯಾರಿ ನಡೆಸಿತ್ತು. ಯಕ್ಷಗಾನ ಕಲೆಯನ್ನು ಮತ್ತಷ್ಟು ಜೀವಂತವಾಗಿಸಲು ಮಕ್ಕಳಿಗೆ “ಯಕ್ಷಗಾನ ತರಬೇತಿ’ ಸೇರಿದಂತೆ ಹಲವು ಅನುಪಮ ಯೋಜನೆಗಳು ರೂಪಿಸಿತ್ತು.

ಹಾಗೆಯೇ ಕನ್ನಡ ಪುಸ್ತಕ ಪ್ರಾಧಿಕಾರ “ಪ್ರಕಾಶಕರ ಸಮ್ಮೇಳನಕ್ಕೆ ಅಣಿಯಾಗಿತ್ತು. ಹೊರ ರಾಜ್ಯದ ಪ್ರಕಾಶಕರನ್ನು ಬೆಂಗಳೂರಿಗೆ ಆಹ್ವಾನಿಸಿ ಕಾರ್ಯಕ್ರಮ ಮಾಡುವ ಆಲೋಚನೆಯಲ್ಲಿತ್ತು. ಗಡಿ ಪ್ರದೇಶದಲ್ಲಿರುವ ಕನ್ನಡ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವ ಯೋಜನೆ ಕೈಗೊಂಡಿತ್ತು. ಜತೆಗೆ ಗ್ರಾಮೀಣ ಪ್ರದೇಶಗಳಿಗೆ ಪುಸ್ತಕಗಳನ್ನು ಕೊಂಡೊಯ್ಯುವ ಆಲೋಚನೆ ಮಾಡಿತ್ತು.

ಈಗಾಗಲೇ ನಾಟಕ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರು ಉತ್ತಮ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಮುಂದುವರಿಸುವ ಅಗತ್ಯವಿದೆ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ್‌ ಜಿ.ಕಪ್ಪಣ್ಣ ಹೇಳಿದ್ದಾರೆ.

Advertisement

“ಉದಯವಾಣಿ’ ಜತೆ ಮಾತನಾಡಿದ ಅವರು, ನಾಟಕ ಅಕಾಡೆಮಿ ಆರಂಭಿಸಿರುವ ರಂಗ ಚಟುವಟಿಕೆಗಳ ದಾಖಲೀಕರಣ ಅದ್ಭುತ ಯೋಜನೆ. ಜಾನಪದ, ಯಕ್ಷಗಾನ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿಗಳು ಕೂಡ ಅತ್ಯುತ್ತಮ ಕಾರ್ಯಕ್ರಗಳನ್ನು ರೂಪಿಸಿದ್ದು, ನಾಡಿನ ಸಾಂಸ್ಕೃತಿಕ ಚಟುವಟಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆಗಳನ್ನು ಮುಂದುವರಿಸುವುದು ಒಳಿತು ಎಂದರು.

ಕನ್ನಡ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಅರವಿಂದ ಮಾಲಗತ್ತಿ ಪ್ರತಿಕ್ರಿಯಿಸಿ, ಸಾಹಿತ್ಯಅಕಾಡೆಮಿ ಈಗಾಗಲೇ “ಸೀಮಾತೀತ ಸಾಹಿತ್ಯ ಪರ್ಬ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ರೂಪಿಸಿತ್ತು. ಅದನ್ನು ಇಲಾಖೆ ಮುಂದಿನ ದಿನಗಳಲ್ಲಿ ಆಯೋಜಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯಕ್ಷಗಾನ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಮಾತನಾಡಿ, ಯಕ್ಷಗಾನ ಲೋಕಕ್ಕೆ ಹಲವರು ಅನುಪಮ ಕೊಡುಗೆ ನೀಡಿದ್ದಾರೆ. ಅಂತವರನ್ನು ಅವರ ಹುಟ್ಟೂರಿನಲ್ಲೇ ನೆನೆಯುವ ಕಾರ್ಯಕ್ರಮ ರೂಪಿಸಲಾಗಿತ್ತು ಎಂದರು.

ಮುಂದುವರಿಕೆಗೆ ಪತ್ರ: ವಿವಿಧ ಅಕಾಡೆಮಿಗಳು ಪ್ರಾರಂಭಿಸಿರುವ ಯೋಜನೆಗಳನ್ನು ಮುಂದುವರಿಸಲು ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜೆ.ಲೋಕೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್‌.ಆರ್‌.ಜನ್ನು ಅವರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ಅವರು, ಇಲಾಖೆ ಯಾವುದೇ ಹಸ್ತಕ್ಷೇಪ ಮಾಡದೆ, ಹಾಲಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದ್ದಾರೆ.

ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳು ಅತ್ಯುತ್ತಮ ಯೋಜನೆಗಳನ್ನು ರೂಪಿಸಿದ್ದು ಈ ಎಲ್ಲಾ ಕಾರ್ಯಕ್ರಮಗಳನ್ನು ಮುಂದೆ ಬರುವವರು ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ.
-ಡಾ.ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next