Advertisement
ಕರ್ನಾಟಕ ಸರಕಾರ ಎಸ್ಸಿ- ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಕಾನೂನು ರೂಪಿಸಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು ಎಸ್ಸಿ-ಎಸ್ಟಿಯೇತರ ಸಾವಿರಾರು ನೌಕರರಿಗೆ ಆಘಾತ ನೀಡಿದೆ. ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶದಂತೆ ತಾವು ಗಳಿಸಿರುವ ಮೀಸಲಾತಿ ಹೊಸ ಆದೇಶದ ಪರಿಣಾಮ ಉಳಿಯುವುದೋ ಇಲ್ಲವೋ ಎಂಬ ಆತಂಕ ಅವರನ್ನು ಕಾಡುತ್ತಿದೆ.
Related Articles
Advertisement
ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ರಾಜ್ಯದ ನಾಗರಿಕ ಸೇವಾ ವಿಭಾಗದ ನೌಕರರ ನಡುವೆ ಮತ್ತೂಂದು ಸುತ್ತಿನ ಸಂಕ್ಷೋಭೆೆ ಸೃಷ್ಟಿಸುವ ಸಾಧ್ಯತೆಗಳಿವೆ. 2017ರ ಫೆಬ್ರವರಿ 8ರಂದು ಸುಪ್ರೀಂ ಕೋರ್ಟ್ ಆದೇಶ ಅಸಂಖ್ಯಾತ ಎಸ್ಸಿ-ಎಸ್ಟಿ ನೌಕರರ ಹಿಂಬಡ್ತಿಗೆ ಕಾರಣವಾಗಿ ಆಘಾತವನ್ನು ಉಂಟುಮಾಡಿತ್ತು. ಆಗ ಬಡ್ತಿ ಪಡೆದಿದ್ದ ನೌಕರರು ಈಗ ಹಿಂಬಡ್ತಿ ಆತಂಕದಲ್ಲಿದ್ದಾರೆ. ಬಿ.ಕೆ. ಪವಿತ್ರ ಪ್ರಕರಣ ಎಂದು ಕರೆಸಿಕೊಳ್ಳುವ ಈ ಪ್ರಕರಣದ ತೀರ್ಪಿನ ಬಳಿಕ ರಾಜ್ಯ ಸರಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತು. ಬಡ್ತಿಯಲ್ಲಿ ಮೀಸಲಾತಿ ಹಾಗೂ ಪರಿಣಾಮಕಾರಿ ಸೇವಾ ಹಿರಿತನದ ರಕ್ಷಣೆಯ ಫಲವಾಗಿ ಆಗುತ್ತಿರುವ ‘ಹಿನ್ನಡೆ, ಪರ್ಯಾಪ್ತವಿಲ್ಲದ ಪ್ರಾತಿನಿಧಿಕತೆ ಹಾಗೂ ಆಡಳಿತಾತ್ಮಕ ದಕ್ಷತೆ’ಯ ಅಂಶಗಳನ್ನಿಟ್ಟುಕೊಂಡು ಅಧ್ಯಯನ ನಡೆಸಲು ಸೂಚಿಸಲಾಗಿತ್ತು. ಇತ್ತೀಚಿನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ರತ್ನಪ್ರಭಾ ನೇತೃತ್ವದ ಸಮಿತಿ ರಚಿಸಿರುವ ರಾಜ್ಯ ಸರಕಾರದ ಕ್ರಮವನ್ನು ಶ್ಲಾಘಿಸಿತ್ತು.
ಉಲ್ಲೇಖೀಸಬೇಕಾದ ಅಂಶವೆಂದರೆ, ಸುಪ್ರೀಂ ಕೋರ್ಟ್ 2006ರಲ್ಲಿ ನೀಡಿದ ಆದೇಶವೊಂದರಲ್ಲಿ (ಕರ್ನಾಟಕದವರೇ ಆದ ಎಂ. ನಾಗರಾಜ್ ಪ್ರಕರಣ) ಸರಕಾರಿ ಸೇವೆಗಳಲ್ಲಿ ಎಸ್ಸಿ-ಎಸ್ಟಿಗಳ ಪ್ರಾತಿನಿಧಿತ್ವ ಸಾಕಷ್ಟಿದೆಯೇ ಹಾಗೂ ಬಡ್ತಿಯಲ್ಲಿ ಮೀಸಲಾತಿ ನೀಡಿದರೆ ಆಡಳಿತಾತ್ಮಕ ದಕ್ಷತೆಯ ಮೇಲೆ ಪರಿಣಾಮ ಆಗುವುದೇ ಎಂಬುದನ್ನು ಅಧ್ಯಯನ ಮಾಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಬಡ್ತಿಯಲ್ಲಿ ಮೀಸಲಾತಿ ರಕ್ಷಣೆ ಹಾಗೂ ಸೇವಾ ಹಿರಿತನದ ಪರಿಗಣನೆಯ ಅಂಶಗಳನ್ನು ಒಳಗೊಳಿಸಲು ಹಾಗೂ ತೀರ್ಪಿನಿಂದಾದ ಪ್ರತಿಕೂಲ ಪರಿಣಾಮಗಳನ್ನು ಸರಿಪಡಿಸುವ ಉದ್ದೇಶದಿಂದ ಸಂವಿಧಾನಕ್ಕೆ ತಂದಿರುವ 77 (1995), 81 (2000), 82 (2000) ಹಾಗೂ 85 (2001) ಈ ನಾಲ್ಕು ತಿದ್ದುಪಡಿಗಳನ್ನೂ ಎತ್ತಿ ಹಿಡಿದಿತ್ತು.
ಇನ್ನೂ ಒಂದು ಅಂಶವೆಂದರೆ, ಬಹುಚರ್ಚಿತ ಇಂದ್ರ ಸಾಹ್ನಿ ಪ್ರಕರಣದಲ್ಲಿ 1992ರಷ್ಟು ಹಿಂದೆಯೇ ಸುಪ್ರೀಂ ಕೋರ್ಟ್, ಬಡ್ತಿಯಲ್ಲಿ ಮೀಸಲಾತಿ ಅಸಾಂವಿಧಾನಿಕ ಎಂದು ಹೇಳಿ, ಐದು ವರ್ಷಗಳ ಅವಧಿಗೆ ಮಾತ್ರ ಅದನ್ನು ಮುಂದುವರಿಸುವಂತೆ ಸೂಚಿಸಿತ್ತು. ಆದರೆ, ಅಸಂಖ್ಯಾತ ಕಾನೂನಾತ್ಮಕ ತೊಡಕುಗಳಿಗೆ ಕಾರಣವಾದೀತು ಎಂಬ ಆತಂಕದಿಂದ ಕೇಂದ್ರ ಅಥವಾ ರಾಜ್ಯ ಸರಕಾರಗಳು ಈ ಆದೇಶವನ್ನು ಪಾಲಿಸಲು ನಿರಾಸಕ್ತಿ ತೋರಿದವು.
ಆಸಕ್ತಿಯ ವಿಚಾರವೆಂದರೆ, ಬಿ.ಕೆ. ಪವಿತ್ರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿಯೂ ಜಸ್ಟೀಸ್ ಯು.ಯು. ಲಲಿತ್ ಇದ್ದರು. ಈಗ ಹಿಂದಿನ ತೀರ್ಪಿಗೆ ವ್ಯತಿರಿಕ್ತವಾದ ಆದೇಶವನ್ನು ಅವರು ಬರೆಯಬೇಕಾಯಿತು. 1978ರಿಂದ ಈಚೆಗೆ ಎಸ್ಸಿ ಹಾಗೂ ಎಸ್ಟಿ ನೌಕರರಿಗೆ ನೀಡಲಾಗಿದ್ದ ಪರಿಣಾಮಕಾರಿ ಬಡ್ತಿಯನ್ನು ಕೋರ್ಟ್ ರದ್ದುಪಡಿಸಿತ್ತು. ಈ ನೌಕರರಿಗೆ ಹಿಂಬಡ್ತಿ ನೀಡಿ, ಹಲವು ವರ್ಷಗಳಿಂದ ಕೆಳ ಹಂತದ ಹುದ್ದೆಗಳಲ್ಲೇ ಬಾಕಿ ಉಳಿದು ಸೇವಾ ಹಿರಿತನದಿಂದ ವಂಚಿತರಾಗಿದ್ದ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ನೌಕರರಿಗೆ ಮುಂಬಡ್ತಿ ನೀಡಿ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಲು ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಹನ್ನೊಂದು ವರ್ಷಗಳ ಸೇವಾ ಹಿರಿತನವಿದ್ದರೂ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳನ್ನು ಕಡೆಗಣಿಸಿ ಎಸ್ಸಿ ಎಸ್ಟಿ ವರ್ಗದ ಎಂಜಿನಿಯರ್‌ಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರನ್ನಾಗಿ ಪದೋನ್ನತಿ ನೀಡಲಾಗಿತ್ತು. ಬಡ್ತಿ ಮೀಸಲಾತಿ ಹಾಗೂ ಪರಿಣಾಮಕಾರಿ ಬಡ್ತಿಗಳ ವಿಚಾರದಲ್ಲಿ ಗೊಂದಲ ಹಾಗೂ ಅನ್ಯಾಯಕ್ಕೆ ಒಳಗಾಗಿದ್ದ ಓರ್ವ ಸರಕಾರಿ ಎಂಜಿನಿಯರ್ (ಬಿ.ಕೆ. ಪವಿತ್ರ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ಆದೇಶ ಏನೇ ಇದ್ದರೂ, ಅದು ಬಡ್ತಿಯಲ್ಲಿ ಮೀಸಲಾತಿ ನೀತಿಯು ಈಗಾಗಲೇ ಸೇವೆಯಲ್ಲಿರುವವರಿಗೆ ಹಾಗೂ ಸರಕಾರಿ ಉದ್ಯೋಗದ ಆಕಾಂಕ್ಷಿಗಳ ಆಸಕ್ತಿಯನ್ನು ಕಸಿಯಬಲ್ಲದು ಎಂಬುದನ್ನು ವಿನಯದಿಂದಲೇ ಅರಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ನೀತಿಗಳು ಭಾರತ ಸರಕಾರದ ಉನ್ನತ ಸೇವೆಗಳಾದ ಐಎಎಸ್, ಐಪಿಎಲ್ ಹಾಗೂ ಐಎಫ್ಎಸ್‌ಗಳಿಗೆ ಅನ್ವಯವಾಗುವುದಿಲ್ಲ. ತಮಗೆ ಅರ್ಹತೆ ಇದ್ದರೂ ಸಾವಿರಾರು ಎಸ್ಸಿ-ಎಸ್ಟಿಯೇತರ ನೌಕರರಿಗೆ ಬಡ್ತಿಯನ್ನು ನಿರಾಕರಿಸಲಾಗಿದೆ. ಈ ಹಿಂದೆ ತಮ್ಮ ಕೈಕೆಳಗೇ ಕೆಲಸ ಮಾಡುತ್ತಿದ್ದ ಎಸ್ಸಿ ಹಾಗೂ ಎಸ್ಟಿ ಪ್ರವರ್ಗಗಗಳ ನೌಕರರ ಆದೇಶಾನುಸಾರ ಈಗ ಕೆಲಸ ಮಾಡಬೇಕಾದ ಅನಿವಾರ್ಯತೆ ಅವರಿಗೆ ಸೃಷ್ಟಿಯಾಗಿದೆ.
ಅರ್ಹ ಸರಕಾರಿ ನೌಕರರಿಗೆ ಪದೋನ್ನತಿ ನಿರಾಕರಣೆ ಹಾಗೂ ತಮಗಿಂತ ಕಿರಿಯರು ಅಧಿಕಾರ ಸ್ಥಾನಕ್ಕೇರುವುದರಿಂದ ಆಗುವ ಪರಿಣಾಮಗಳನ್ನು ಈ ಇಬ್ಬರೂ ನ್ಯಾಯಮೂರ್ತಿಗಳು ಪರಿಗಣಿಸಬೇಕು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕದ ವಿಚಾರದಲ್ಲಿ ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೇ ಪ್ರತಿಭಟನೆ ಮಾಡಿದ್ದಾರೆ. 1973ರ ಏಪ್ರಿಲ್ನಲ್ಲಿ ಇಂದಿರಾ ಗಾಂಧಿ ಸರಕಾರ ತಮಗಿಂತ ಕಿರಿಯರಾದ ಎ.ಎನ್. ರಾಯ್ ಅವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದಾಗ, ಮೂವರು ನ್ಯಾಯಮೂರ್ತಿಗಳಾದ ಜೆ.ಎಂ. ಶೇಲಟ್, ಕೆ.ಎಸ್. ಹೆಗ್ಡೆ ಹಾಗೂ ಎ.ಎನ್. ಗ್ರೋವರ್ ರಾಜೀನಾಮೆ ನೀಡಿರುವ ಪ್ರಕರಣವೇ ಇದೆಯಲ್ಲ! ಆ ಬಳಿಕ ಜನವರಿ 1977ರಲ್ಲಿ ಎಂ.ಎಚ್. ಬೇಗ್ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿದ್ದನ್ನು ವಿರೋಧಿಸಿ ಜಸ್ಟೀಸ್ ಎಚ್.ಆರ್. ಖನ್ನಾ ಪದತ್ಯಾಗ ಮಾಡಿದರು. ಹೇಬಿಯಸ್ ಕಾರ್ಪಸ್ ಕೇಸ್ ವಿಚಾರದಲ್ಲಿ ನೀಡಿದ ತೀರ್ಪಿನ ಬಳಿಕ ಜಸ್ಟಿಸ್ ವೈ.ವಿ. ಚಂದ್ರಚೂಡ್ (ಈಗಿನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ತಂದೆ) ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬಾರದು ಎಂಬ ಒತ್ತಡ ಮೊರಾರ್ಜಿ ದೇಸಾಯಿ ಅವರ ಸರಕಾರದ ಮೇಲಿತ್ತು. ಆದರೆ, ಅವರ ನೇಮಕವೂ ಆಯಿತು. ದಾಖಲೆಯ ಏಳುವರೆ ವರ್ಷಗಳಷ್ಟು ದೀರ್ಘಾವಧಿ ಅವರು ಆ ಹುದ್ದೆಯನ್ನು ನಿಭಾಯಿಸಿದರು.
ಈಗಲೂ ನರೇಂದ್ರ ಮೋದಿ ಸರಕಾರ ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅನಿರುದ್ಧ ಬೋಸ್ ಹಾಗೂ ಆಸ್ಸಾಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸುವ ಕೊಲಿಜಿಯಂ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದೆ. ಇವರಿಬ್ಬರಿಗಿಂತಲೂ ಹಿರಿಯರಾದ ಹೈಕೋರ್ಟ್ ನ್ಯಾಯಮೂರ್ತಿಗಳು ಇದ್ದಾರೆ ಹಾಗೂ ಸೂಚಿತ ಎರಡೂ ರಾಜ್ಯಗಳಿಗೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯ ನೀಡಲಾಗಿದೆ ಎಂಬುದು ಪ್ರಸ್ತಾವನೆ ತಿರಸ್ಕರಿಸಲು ಸರಕಾರ ನೀಡಿರುವ ಕಾರಣಗಳು.
ಪರೀಕ್ಷೆಯಲ್ಲಿ ಗಳಿಸಿದ ರ್‍ಯಾಂಕ್ ಸಹಿತ ಅರ್ಹತೆಯ ವಿಚಾರದಲ್ಲಿ ಜಸ್ಟೀಸ್ ಡಿ.ವೈ. ಚಂದ್ರಚೂಡ್ ಅವರ ಅಭಿಪ್ರಾಯಗಳನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ. ಬಡ್ತಿ ಮೇಲಿನ ಮಸೂದೆ ಕುರಿತು ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಹೇಳಿರುವುದೂ ಉಲ್ಲೇಖನೀಯ: ಎಸ್ಸಿ-ಎಸ್ಟಿಗಳಿಗೆ ಸಾಮಾಜಿಕ ನ್ಯಾಯವೂ ಸಿಗಬೇಕು, ಉಳಿದವರಿಗೆ ನೈಸರ್ಗಿಕ ನ್ಯಾಯವೂ ಅನ್ವಯವಾಗಬೇಕು. ಇವೆರಡರ ಮಧ್ಯೆ ಒಂದು ಸಮತೋಲನ ಸಾಧಿಸಬೇಕು.