Advertisement

ವಿಜಯಪುರ ರೈಲಿಗೆ ಅನಿಶ್ಚಿತತೆಯ ಆತಂಕ

01:39 AM Feb 15, 2020 | Sriram |

ಮಂಗಳೂರು: ಮಂಗಳೂರು ಜಂಕ್ಷನ್‌-ವಿಜಯಪುರ ನಡುವೆ ತಾತ್ಕಾಲಿಕ ನೆಲೆಯಲ್ಲಿ ಸಂಚರಿಸುತ್ತಿರುವ ರೈಲು ಇಲಾಖೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ನೀಡುತ್ತಿಲ್ಲ. ಆದರೂ 6 ತಿಂಗಳು ವಿಸ್ತರಣೆ ಮಾಡಲಾಗಿದ್ದು ಜೂನ್‌ ಅಂತ್ಯಕ್ಕೆ ಮುಕ್ತಾಯ ವಾಗಲಿದೆ. ವಿಸ್ತರಣೆ ಅವಧಿಯಲ್ಲಿ ಆದಾಯದಲ್ಲಿ ಸುಧಾರಣೆ ಕಾಣದಿದ್ದರೆ ಮುಂದುವರಿಕೆ ಅನಿಶ್ಚಿತವಾಗುವ ಸಾಧ್ಯತೆಯಿದೆ.

Advertisement

ಪ್ರಸ್ತುತ ಇಲಾಖೆಯ ಮಾಹಿತಿ ಯಂತೆ ನ. 11ರಿಂದ ಜ. 10ರ ವರೆಗೆ ಈ ಮಾರ್ಗದಲ್ಲಿ 3.89 ಕೋ.ರೂ. ಆದಾಯ ನಿರೀಕ್ಷಿಸಲಾಗಿತ್ತು. ಆದರೆ 1.37 ಕೋ.ರೂ. ಮಾತ್ರ ಗಳಿಕೆ ಯಾಗಿದೆ. 65,582 ಪ್ರಯಾಣಿಕರನ್ನು ಇಲಾಖೆ ನಿರೀಕ್ಷಿಸಿ ದ್ದರೂ ಈ ವರೆಗೆ ಸಂಚರಿಸಿದ ಪ್ರಯಾಣಿಕರ ಸಂಖ್ಯೆ 29,308ರಲ್ಲೇ ಇದೆ.

ರೈಲಿನಲ್ಲಿ 1 ಎಸಿ ಟು-ಟೈರ್‌, 1 ಎಸಿ ತ್ರಿ ಟೈರ್‌, 6 ದ್ವಿತೀಯ ದರ್ಜೆ ಸ್ಲಿàಪರ್‌ ಮತ್ತು 4 ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಸಿ ಟು ಟೈರ್‌ ಮತ್ತು ಎಸಿ ತ್ರಿ ಟೈರ್‌ ಬೋಗಿಗಳಿಗೆ ಪ್ರಸ್ತುತ ಪ್ರಯಾಣಿಕರಿಂದ ಹೆಚ್ಚಿನ ಸ್ಪಂದನೆ ಕಂಡುಬಂದಿಲ್ಲ. ಈ ಬೋಗಿಗಳು ಶೇ. 35ರಿಂದ 40ರಷ್ಟು ಮಾತ್ರ ಭರ್ತಿಯಾಗುತ್ತಿವೆ. ದ್ವಿತೀಯ ದರ್ಜೆ ಸ್ಲಿàಪರ್‌ ಬೋಗಿಗಳಿಗೆ ಸ್ಪಂದನೆ ಸಾಮಾನ್ಯವಾಗಿದೆ. ಆದರೆ ನಾಲ್ಕು ಜನರಲ್‌ ಬೋಗಿಗಳು ಭರ್ತಿಯಾಗುತ್ತಿವೆ.

ಪೂರಕ ಕ್ರಮಗಳು ಅಗತ್ಯ
ಈ ರೈಲನ್ನು ಉಳಿಸಿಕೊಳ್ಳಲು ಪೂರಕ ಕ್ರಮಗಳು ಅವಶ್ಯ. ರೈಲು ಪ್ರಸ್ತುತ ಮಂಗಳೂರು ಜಂಕ್ಷನ್‌ ವರೆಗೆ ಮಾತ್ರ ಇದೆ. ಇದನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು ಮತ್ತು ಸಂಚಾರ ವೇಳಾಪಟ್ಟಿಯನ್ನು ಬದಲಾಯಿಸಬೇಕು, ಅವಧಿಯನ್ನು ಕಡಿಮೆಗೊಳಿಸಬೇಕು ಎಂದು ರೈಲ್ವೇ ಹೋರಾಟಗಾರ ಜಿ.ಕೆ. ಭಟ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ರೈಲು ಸಂಜೆ 6.40ಕ್ಕೆ ವಿಜಯಪುರದಿಂದ ಹೊರಟು ರಾತ್ರಿ 12.30ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಮರು ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್‌ಗೆ ಬರುತ್ತದೆ. ಮಧ್ಯಾಹ್ನ 1ಕ್ಕೆ ವಿಜಯಪುರದಿಂದ ಹೊರಟು ರಾತ್ರಿ 7ಕ್ಕೆ ಹುಬ್ಬಳ್ಳಿಗೆ ಬಂದು, ಮರು ಬೆಳಗ್ಗೆ 8.30ಕ್ಕೆ ಮಂಗಳೂರು ತಲುಪುವಂತಾದರೆ ಹಾಗೂ ಮಂಗಳೂರಿನಿಂದ ಸಂಜೆ 4.30ರ ಬದಲು ರಾತ್ರಿ 7 ಗಂಟೆಗೆ ಹೊರಟು ಮರು 8 ಗಂಟೆಗೆ ಹುಬ್ಬಳ್ಳಿಗೆ ತಲುಪುವಂತೆ ಆದರೆ ಹೆಚ್ಚು ಅನುಕೂಲ.

Advertisement

ಸಾಮಾನ್ಯ ಬೋಗಿ ಹೆಚ್ಚಿಸಿದರೆ ಆದಾಯ ವೃದ್ಧಿ ಸಾಧ್ಯ
ಉತ್ತರ ಕರ್ನಾಟಕದಿಂದ ಕರಾವಳಿಗೆ ಗಣನೀಯ ಸಂಖ್ಯೆಯಲ್ಲಿ ಬರುವವರು ವಿದ್ಯಾರ್ಥಿಗಳು, ಕಾರ್ಮಿಕರು. ಮುಖ್ಯವಾಗಿ ಬಾಗಲಕೋಟೆ, ಬಾದಾಮಿ, ಗದಗ, ಹಾವೇರಿ, ರಾಣೆಬೆನ್ನೂರು, ಬನವಾಸಿ, ಬಾಗೇವಾಡಿ, ಆಲಮಟ್ಟಿ ಮುಂತಾದೆಡೆಗಳ ಕಾರ್ಮಿಕರ ಸಂಖ್ಯೆಯೇ ಹೆಚ್ಚು. ಅವರಿಗೆ ಈ ರೈಲು ಅತಿ ಉಪಯುಕ್ತ. ಈ ಸಾಮಾನ್ಯ ವರ್ಗದ ಜನತೆ ಜನರಲ್‌ ಅಥವಾ ದ್ವಿತೀಯ ದರ್ಜೆ ಸ್ಲಿàಪರ್‌ ಬೋಗಿಗಳಲ್ಲಿಯೇ ಪ್ರಯಾಣಿಸುತ್ತಾರೆ. ಸಾಮಾನ್ಯ ಬೋಗಿಗಳ ಸಂಖ್ಯೆಯನ್ನು ಜಾಸ್ತಿ ಮಾಡುವುದರಿಂದ ಇಲಾಖೆಗೆ ಹೆಚ್ಚಿನ ಆದಾಯ ಬರಲಿದೆ.

ಲಭ್ಯ ಮಾಹಿತಿ ಪ್ರಕಾರ ಈ ರೈಲಿಗೆ ನಿರೀಕ್ಷಿತ ಆದಾಯ ಬರುತ್ತಿಲ್ಲವಾದರೂ ನಷ್ಟವಾಗುತ್ತಿಲ್ಲ. ಅದುದರಿಂದ ಈ ರೈಲನ್ನು ಖಾಯಂ ನೆಲೆಯಲ್ಲಿ ಓಡಿಸಬೇಕು. ನಿರೀಕ್ಷಿತ ಆದಾಯ ಬರುತ್ತಿಲ್ಲ ಎಂಬ ಕಾರಣ ನೀಡಿ ಇದನ್ನು ಕೈಬಿಡುವ ಪ್ರಯತ್ನ ನಡೆದರೆ ಪ್ರಬಲ ಹೋರಾಟ ನಡೆಸುತ್ತೇವೆ ಮತ್ತು ಈ ರೈಲನ್ನು ಉಳಿಸಿಕೊಳ್ಳುತ್ತೇವೆ.
– ಕುತುದ್ದೀನ್‌ ಖಾಜಿ,
ಅಧ್ಯಕ್ಷರು ಕರ್ನಾಟಕ ರಾಜ್ಯ
ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿ.

Advertisement

Udayavani is now on Telegram. Click here to join our channel and stay updated with the latest news.

Next