Advertisement
ಕಳೆದ ಜನವರಿ 12ರಂದು ಸಂಕಲಕರಿಯ ಶಾಂಭವಿ ನದಿ ಸೇತುವೆಯ ಬದಿಗೆ ಡಿಕ್ಕಿಹೊಡೆದು ಬೊಲೆರೋ ಜೀಪು ಪಲ್ಟಿಯಾಗಿ ನದಿಗೆ ಬಿದ್ದು ಜೀವ ಹಾನಿಯಾಗಿ ಮೂರು ತಿಂಗಳಾಗಿದ್ದರೂ ಎಚ್ಚೆತ್ತುಕೊಳ್ಳದ ಲೋಕೋಪಯೋಗಿ ಇಲಾಖೆ ಸೇತುವೆಗೆ ಕೇವಲ ಸುಣ್ಣ ಬಣ್ಣ ಬಳಿದಿದ್ದು ಬಿಟ್ಟರೆ ಇನ್ನೂ ಇಕ್ಕೆಲಗಳಿಗೆ ತಡೆಗೋಡೆ ನಿರ್ಮಿಸಿರಲಿಲ್ಲ. ಈ ಬಗ್ಗೆ ಉದಯವಾಣಿ ಕಳೆದ ವಾರ ಜನಪರ ಕಾಳಜಿ ವಿಭಾಗದಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.
ಸುಮಾರು 65 ವರ್ಷಗಳ ಹಿಂದಿನ ಈ ಹಳೇ ಸೇತುವೆಗೆ ಈ ಹಿಂದೆಯೂ ತಡೆಗೋಡೆ ಇರಲಿಲ್ಲ. ಇದೀಗ ಈ ಹಳೆಯ ಸೇತುವೆ ಬಿರುಕು ಬಿಟ್ಟಿದ್ದು ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ. ಈಗಾಗಲೇ ಉಡುಪಿನ ಕಡೆಯಿಂದ ಎಚ್ಚರಿಕೆಯ ತಡೆಬೇಲಿ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದುಮುಂದೆ ಮಂಗಳೂರು ಕಡೆಯಿಂದಲೂ ಈ ಪ್ರಕ್ರಿಯೆ ನಡೆಯಲಿ ಎಂದು ಈ ಭಾಗದ ಜನರ ಆಗ್ರಹ. ಈವರೆಗೆ ಅರೆಬರೆ ವ್ಯವಸ್ಥೆಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಸರಿ ಹೋದೀತೆಂಬ ನಿರೀಕ್ಷೆ ಈ ಭಾಗದ ಜನರದ್ದು.
Related Articles
ಈ ಸೇತುವೆ ಮಂಗಳೂರು ಮತ್ತು ಉಡುಪಿಯನ್ನು ಬೇರ್ಪಡಿಸುವ ಗಡಿಯಾದ್ದರಿಂದ ಇಲಾಖೆಗಳ ನಡುವೆ ಒಂದಿಷ್ಟು ಗಡಿಯ ಬಗ್ಗೆ ಗಡಿಬಿಡಿಯೂ ಇದೆ. ಜನವರಿಯ ದುರಂತದಲ್ಲಿ ಕಂದಾಯ ಇಲಾಖೆಯ ಸಹಕಾರದಿಂದ ಸೇತುವೆಯನ್ನು ಅಳೆದ ಬಳಿಕ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯವರು ಕೇಸು ಸ್ವೀಕರಿಸಿದ್ದರು. ದುರಂತದಲ್ಲಿ ಮಡಿದವರಿಗೆ ವಿಮಾ ಯೋಜನೆ ಪಡೆಯುವಲ್ಲಿ ತೊಂದರೆಯಾಗುವುದು ಬೇಡ ಎನ್ನುವ ಉದ್ದೇಶವೂ ಪೊಲೀಸರಲ್ಲಿದ್ದುದರಿಂದ ಈ ಚರ್ಚೆ ಸಹಜವಾಗಿಯೇ ನಡೆದು ಅಂದು ತಾರ್ಕಿಕ ಅಂತ್ಯ ಕಂಡಿತ್ತು. ಆದರೆ ಇದೀಗ ಬಿರುಕು ಬಿಟ್ಟ ಈ ಸೇತುವೆಗೆ ಕಾಯಕಲ್ಪ ಒದಗಿಸಬೇಕಾಗಿದೆ. ಸೇತುವೆಯ ತಡೆ ಕಂಬ ಮುರಿದ ಬಗ್ಗೆ ದುರಸ್ಥಿಗಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಿಂದಲೂ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಲಾಗಿತ್ತು.
Advertisement