Advertisement

ರಾಗಿಗುಡ್ಡದಲ್ಲಿ ಸ್ಪೋಟ: ಬೆಚ್ಚಿ ಬಿದ್ದ ಜನ

03:22 PM Jun 03, 2022 | Team Udayavani |

 ಶಿವಮೊಗ್ಗ: ನಗರಕ್ಕೆ ಹೊಂದಿಕೊಂಡಿರುವ ನೈಸರ್ಗಿಕ ತಾಣ ರಾಗಿಗುಡ್ಡದಲ್ಲಿ ಬುಧವಾರ ಮಧ್ಯಾಹ್ನದಿಂದ ಸಂಜೆವರೆಗೂ ಎಂಟು ಬಾರಿ ಸ್ಫೋಟಗಳಾಗಿದ್ದು ಸುತ್ತಮುತ್ತಲ ನಿವಾಸಿಗಳು ಆತಂಕ ವ್ಯಕ್ತಪಡಿದ್ದಾರೆ. ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದು ಆರೋಪಿಸಿದ್ದಾರೆ. ರಾಗಿಗುಡ್ಡದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು ಕಾಮಗಾರಿ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

ಕಾಮಗಾರಿ ಬೇಗ ಮುಗಿಸುವ ಸಲುವಾಗಿ ಬಂಡೆಗಳನ್ನು ಒಡೆಯಲು ಸ್ಫೋಟಕ ಬಳಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಪ್ರತಿ ಭಾರಿ ಸ್ಫೋಟ ಸಂಭವಿಸಿದಾಗಲೂ ರಾಗಿಗುಡ್ಡ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ದಿಢೀರ್‌ ಸ್ಫೋಟಗಳು ಸಂಭವಿಸಿದ್ದರಿಂದ ಜನ ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದರು. ಆನಂತರ ಪ್ರತಿ ಸ್ಫೋಟದ ಸಂದರ್ಭದಲ್ಲೂ ಜನ ಆತಂಕಗೊಂಡರು. ಕುವೆಂಪು ನಗರದ ಮ್ಯಾಕ್ಸ್‌ ಪೂರ್ಣೋದಯ ಬಡಾವಣೆಯಲ್ಲಿ ಕಂಪನದ ಅನುಭವವಾಗಿದೆ. ಮನೆಗಳು ಕೂಡ ಬಿರುಕು ಬಿಟ್ಟಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಎಸ್‌ಐ ಆಸ್ಪತ್ರೆ ನಿರ್ಮಾಣ ಕಾಮಗಾರಿಗಾಗಿ ರಾಗಿಗುಡ್ಡದಲ್ಲಿ ಸ್ಫೋಟ ನಡೆಸಲು ಈ ಮೊದಲು ಪ್ರಯತ್ನ ನಡೆದಿತ್ತು. ಆದರೆ ಹುಣಸೋಡು ಸ್ಫೋಟದ ಅನಾಹುತದ ಪರಿಣಾಮ ಹಿಂದಿನ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಅನುಮತಿ ನಿರಾಕರಿಸಿದ್ದರು. ಸ್ಥಳೀಯರಿಗೆ ಸಮಸ್ಯೆ ಆಗಲಿದೆ, ಗುಡ್ಡಕ್ಕೂ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಸ್ಫೋಟಕ್ಕೆ ಅನುಮತಿ ನೀಡಿರಲಿಲ್ಲ. ಜಿಲ್ಲಾಧಿಕಾರಿ ಬದಲಾಗುತ್ತಿದ್ದ ಹಾಗೆ ಸ್ಫೋಟಕ ಸ್ಫೋಟಿಸಲಾಗಿದೆ. ಇದಕ್ಕೆ ಅನುಮತಿ ಇತ್ತೋ ಇಲ್ಲವೋ ಅನ್ನುವುದೆ ಅನುಮಾನವಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಳೆದ ಎರಡು ವರ್ಷದಿಂದ ಇಎಸ್‌ಐ ಆಸ್ಪತ್ರೆ ಕಾಮಗಾರಿ ನಡೆಯುತ್ತಿದೆ. ಮೊದಲೇ ಇಲ್ಲಿ ಸ್ಫೋಟಕ ಬಳಕೆ ಮಾಡುವ ಕುರಿತು ಮಾಹಿತಿ ಲಭ್ಯವಾಗಿತ್ತು. ಮ್ಯಾಕ್ಸ್‌ ಬಡಾವಣೆಯ ನಿವಾಸಿಗಳು ಹಿಂದಿನ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸ್ಫೋಟಕ ಬಳಕೆಗೆ ಅನುಮತಿ ನೀಡದಂತೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಬಡಾವಣೆ ನಿವಾಸಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಸ್ಫೋಟಕ್ಕೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಬೇರೆ ಮಾದರಿಯಲ್ಲಿ ಕಾಮಗಾರಿ ನಡೆಸುವುದಾಗಿ ಹೇಳಲಾಗಿತ್ತು. ಆದರೆ ದಿಢೀರ್‌ ಎಂದು ಬ್ಲಾಸ್ಟ್‌ ಮಾಡಲಾಗುತ್ತಿದೆ. ನಾಲ್ಕು ಕಡಿಮೆ ತೀವ್ರತೆಯ ಸ್ಫೋಟ, ಇನ್ನು ನಾಲ್ಕು ತೀವ್ರ ಸ್ವರೂಪದ ಸ್ಫೋಟ ಸಂಭವಿಸಿದೆ. ಅದರಿಂದ ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಹುಣಸೋಡು ಸ್ಫೋಟದ ಹಾಗೆ ಅನುಭವವಾಗಿದೆ. ಭೂಕಂಪ ಸಂಭವಿಸಿದಂತಾಗಿ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದರು. ಇನ್ಮುಂದೆ ಅಲ್ಲಿ ಸ್ಫೋಟಕ ಬಳಕೆಗೆ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ರವಿ ಕುಲಕರ್ಣಿ, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next