Advertisement

ವಲಸೆ ಕಾರ್ಮಿಕರಲ್ಲಿ ಆತಂಕ

02:38 PM Apr 13, 2020 | mahesh |

ಬೆಂಗಳೂರು: ಕೋವಿಡ್-19 ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್‌ ಡೌನ್‌ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಆಶ್ರಯ ಕೇಂದ್ರಗಳಲ್ಲಿ ವಾಸ ಮಾಡುತ್ತಿರುವ ಸಾವಿರಾರು ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ. ಪ್ರಧಾನಿ ಮೋದಿಯವರು ಮಾ.23ರಂದು ಘೋಷಿಸಿದ್ದ 21 ದಿನಗಳ ಲಾಕ್‌ ಡೌನ್‌ ಏ.14ಕ್ಕೆ ಮುಗಿಯಲಿದ್ದು, ತಮ್ಮ ವನವಾಸ ಕೊನೆಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ವಲಸೆ ಮತ್ತು ಕಟ್ಟಡ ಕಾರ್ಮಿಕರಿಗೆ ಲಾಕ್‌ಡೌನ್‌ ಏ.30 ರವರೆಗೆ ಮುಂದುವರಿಯಲಿದೆ ಎಂಬ ಸುದ್ದಿ ಆತಂಕಕ್ಕೆ ಕಾರಣವಾಗಿದೆ.

Advertisement

ಹೀಗಾಗಿ, ರಾಜ್ಯದ 30 ಜಿಲ್ಲೆಗಳಲ್ಲಿ ತೆರೆಯಲಾಗಿರುವ 230ಕ್ಕೂ ಹೆಚ್ಚು ಪರಿಹಾರ ಶಿಬಿರ ಹಾಗೂ ಶೆಲ್ಟರ್‌ (ಆಶ್ರಯ ಕೇಂದ್ರ)ಗಳಲ್ಲಿ ವಾಸ ಮಾಡುತ್ತಿರುವ ಅಂದಾಜು 14 ಸಾವಿರ ವಲಸೆ ಮತ್ತು ಕಟ್ಟಡ ಕಾರ್ಮಿಕರು ಎರಡನೇ ಹಂತದ ಲಾಕ್‌ ಡೌನ್‌ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಲಿರುವ ಮಾರ್ಗಸೂಚಿ ಮತ್ತು ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಮೇಲೆ ಆಸೆಗಣ್ಣು  ನೆಟ್ಟಿದ್ದಾರೆ. ಈ ಮಧ್ಯೆ, ಒಂದೊಮ್ಮೆ ಲಾಕ್‌ಡೌನ್‌ ಮುಂದುವರಿದರೆ ಆಶ್ರಯ ಕೇಂದ್ರಗಳೂ ಯಥಾರೀತಿಯಲ್ಲಿ ಮುಂದುವರಿಯಲಿವೆ ಎಂದು ಕಂದಾಯ ಇಲಾಖೆ ಹೇಳುತ್ತಿದೆ. ಈ ಕೇಂದ್ರಗಳಲ್ಲಿ ಒದಗಿಸಲಾಗುತ್ತಿರುವ ಮೂಲಸೌಕರ್ಯಗಳ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಆಶ್ರಯ ಕೇಂದ್ರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ಅಂತರ ಜಿಲ್ಲಾ ಮತ್ತು ಹೊರ ರಾಜ್ಯಗಳಿಗೆ ಸಾರಿಗೆ ಸಂಚಾರ ಬಂದ್‌ ಆದ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳಲಾಗದ ಸಾವಿರಾರು ವಲಸೆ, ಕಟ್ಟಡ ಕಾರ್ಮಿಕರಿಗೆ ರಾಜ್ಯದ ವಿವಿಧ ಕಡೆ ಆಶ್ರಯ ಕೇಂದ್ರಗಳನ್ನು ತೆರೆಯಲಾಯಿತು. ಅದರಂತೆ, ಕಂದಾಯ ಇಲಾಖೆ ಹೈಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿ ಪ್ರಕಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗಳೂರು ನಗರ ಜಿಲ್ಲೆ ಸೇರಿ
ರಾಜ್ಯದ 30 ಜಿಲ್ಲೆಗಳಲ್ಲಿ 227 ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನೆರವಿಂದ 10 ಆಶ್ರಯ ಕೇಂದ್ರಗಳು ಸೇರಿೆ ಒಟ್ಟು 237 ಕೇಂದ್ರಗಳನ್ನು ತೆರೆಯಲಾಯಿತು. ಸರ್ಕಾರದ 227 ಕೇಂದ್ರಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಮತ್ತು ಹೊರರಾಜ್ಯದ 13,528 ಹಾಗೂ ಸ್ವಯಂ ಸೇವಾ ಸಂಸ್ಥೆಗಳ 10 ಕೇಂದ್ರಗಳಲ್ಲಿ 171 ಜನ ವಾಸವಾಗಿದ್ದಾರೆ

ಲಾಕ್‌ ಡೌನ್‌ ಮುಂದುವರಿದರೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ತೆರೆಯಲಾಗಿರುವ ಆಶ್ರಯ ಕೇಂದ್ರಗಳು ಈಗ ಯಾವ ರೀತಿ
ನಡೆದುಕೊಂಡು ಹೋಗುತ್ತಿವೆಯೋ ಅದೇ ರೀತಿ ಮುಂದುವರಿಯಲಿದೆ. ಈಗ ಅಲ್ಲಿದ್ದವರು, ಅಲ್ಲಿಯೇ ಇರಬೇಕಾಗುತ್ತದೆ.
ಮಂಜುನಾಥ ಪ್ರಸಾದ್‌, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ

ಹೈಕೋರ್ಟ್‌ ಆದೇಶದಂತೆ ರಾಜ್ಯದ ಎಲ್ಲಾ ಕಡೆ ಆಶ್ರಯ ಕೇಂದ್ರಗಳಿಗೆ ಭೇಟಿ ಕೊಟ್ಟು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಶೀಲನೆ ನಡೆಸಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ವ್ಯವಸ್ಥೆ ಸಮಾಧಾನಕರವಾಗಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬಿಬಿಎಂಪಿಯಲ್ಲಿ ಈವರೆಗೆ ನಾಲ್ಕು ಕೇಂದ್ರಗಳನ್ನು ತೆರೆಯಲಾಗಿದೆ. ಈ ವಿಚಾರವನ್ನು ಕೋರ್ಟ್‌ ಗಮನಕ್ಕೆ ತರಲಾಗಿದೆ.
ಬಿ.ವಿ. ವಿದ್ಯುಲ್ಲತಾ, ಕಾನೂನು ಸೇವಾ ಪ್ರಾಧಿಕಾರದ ವಕೀಲೆ.

Advertisement

●ರಫಿಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next