Advertisement

ಅವಘಡಕ್ಕೀಡಾದ ಬೋಟ್‌ನಿಂದಲೇ ಆತಂಕ!

11:10 AM Jun 28, 2019 | keerthan |

ಮಹಾನಗರ: ಮೀನುಗಾರಿಕಾ ಬೋಟೊಂದು ಫಲ್ಗುಣಿ ನದಿಯ ತೋಟ ಬೆಂಗ್ರೆಯಲ್ಲಿ ಮುಳುಗಡೆಯಾಗಿ ಹಲವು ದಿನವಾದರೂ ತೆರವುಗೊಳಿಸದ ಪರಿಣಾಮ ಬೆಂಗ್ರೆ ವ್ಯಾಪ್ತಿಗೆ ನಿತ್ಯ ಸಂಚರಿಸುವ ಸಾವಿರಾರು ಜನರು, ಫೆರಿ ಬೋಟು, ನಾಡದೋಣಿಗಳಿಗೆ ತೊಡಕಾಗಿದೆ.

Advertisement

ಸದ್ಯ ಮುಳುಗಿರುವ ಬೋಟ್‌ನ ಕೆಲವು ಭಾಗ ನೀರಿನಲ್ಲಿ ಕಾಣಿಸುತ್ತಿದ್ದು, ಫೆರಿ ಬೋಟ್‌ನವರು ಈ ಸ್ಥಳವನ್ನು ತಪ್ಪಿಸಿಕೊಂಡು ಸಂಚರಿಸುತ್ತಿದ್ದಾರೆ. ಆದರೆ, ಬೋಟ್‌ನ ಅವಶೇಷ ನೀರಿನಲ್ಲಿ ಇನ್ನಷ್ಟು ಆಳಕ್ಕೆ ಹೋದರೆ ಫೆರಿ ಸಂಚಾರಕ್ಕೆ ಬಹುದೊಡ್ಡ ಸಮಸ್ಯೆಯಾಗಬಹುದು.

ಆಗಿದ್ದೇನು?
ಕಳೆದ ವರ್ಷ ಮೀನುಗಾರಿಕಾ ಬೋಟೊಂದು ಮಂಜೇಶ್ವರ ವ್ಯಾಪ್ತಿಯ ಕಡಲಿನಲ್ಲಿ ಭಾಗಶಃ ಮುಳುಗಡೆಯಾಗಿತ್ತು. ಅಪಾಯದಲ್ಲಿದ್ದ ಈ ಬೋಟನ್ನು ಇತರ ಬೋಟ್‌ನವರು ಎಳೆದುಕೊಂಡು ಮಂಗಳೂರಿನ ಅಳಿವೆ ಬಾಗಿಲು ಮೂಲಕ ತೀರಕ್ಕೆ ತರುವಾಗ ತಾಂತ್ರಿಕ ಕಾರಣದಿಂದ ತೋಟ ಬೆಂಗ್ರೆ ಕಡವು ಪ್ರದೇಶದ ಫಲ್ಗುಣಿ ನದಿಯಲ್ಲಿ ಬಾಕಿಯಾಗಿತ್ತು. ಆದರೆ, ಆ ಬಳಿಕ ಅದನ್ನು ತೆರವು ಮಾಡಲು ಸಾಧ್ಯವಾಗಿರಲಿಲ್ಲ.

ಅದನ್ನು ತೆರವು ಮಾಡುವ ಬಗ್ಗೆ ಮಹಾಜನ ಸಭಾ ಬೆಂಗ್ರೆ ಫೆರಿ ಸರ್ವಿಸ್‌ ವತಿಯಿಂದ ಮೀನುಗಾರಿಕಾ ಇಲಾಖೆ ಮನವಿ ಮಾಡಲಾಗಿತ್ತು. ಇದರಂತೆ ದೋಣಿಯ ಅವಶೇಷವನ್ನು ಭಾಗಶಃ ತೆರವುಗೊಳಿಸಲಾಗಿತ್ತು. ಉಳಿದವುಗಳನ್ನು ನದಿಯಲ್ಲೇ ಬಿಡಲಾಗಿತ್ತು. ಆದರೆ, ಇತ್ತೀಚಿನ ಮಳೆ ಕಾರಣದಿಂದ ನೀರಿನ ರಭಸ ಹೆಚ್ಚಾಗಿ ಈ ದೋಣಿಯ ಅವಶೇಷಗಳು ತೋಟಾ ಬೆಂಗ್ರೆ ಕಡವು ಭಾಗಕ್ಕೆ ಬಂದಿವೆ. ಹೀಗಾಗಿ ಈ ಹಾದಿಯಲ್ಲಿ ಸಂಚರಿಸುವ ಫೆರಿ ಬೋಟುಗಳಿಗೆ ಸಮಸ್ಯೆಯಾಗಿದೆ.  ತೋಟಾ ಬೆಂಗ್ರೆ ಪ್ರದೇಶದಿಂದ ಮಂಗಳೂರಿಗೆ ಬರಲು ಇದು ಒಂದೇ ಹತ್ತಿರದ ಮಾರ್ಗ.

ಈ ಹಿನ್ನೆಲೆಯಲ್ಲಿ ದಿನನಿತ್ಯ ಸಾವಿರಾರು ಜನರು ಫೆರಿ ಬೋಟ್‌ ಸೇವೆಯನ್ನು ನೆಚ್ಚಿಕೊಂಡಿದ್ದಾರೆ. ಶಾಲಾ ಮಕ್ಕಳು, ಉದ್ಯೋಗಿಗಳು, ಮೀನುಗಾರಿಕೆ ಸಂಬಂಧ ವ್ಯವಹಾರ ಮಾಡಲು ಜನರು ಫೆರಿ ಮೂಲಕವೇ ಆಗಮಿಸುತ್ತಿದ್ದಾರೆ. ಆದರೆ, ಹೀಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮುಳುಗಿರುವ ಬೋಟು ಆತಂಕ ಉಂಟುಮಾಡುತ್ತಿದೆ.

Advertisement

ತೆರವು ಮಾಡುವುದು ಮೀನುಗಾರಿಕೆಯ ಎಂಎಸ್‌ ನಿಯಮ ಪ್ರಕಾರ ಬೋಟ್‌ ಮಾಲಕರ ಕರ್ತವ್ಯ. ಮೀನುಗಾರಿಕಾ ಬೋಟುಗಳಿಗೆ ಹಾನಿಯಾದರೆ ಅದರ ನಿರ್ವಹಣೆಗಾಗಿ ವಿಮೆ ಮಾಡಲಾಗುತ್ತದೆ. ಆದರೆ, ಕೆಲವೊಂದು ಕಾರಣಗಳನ್ನು ನೀಡಿ ವಿಮಾದಾರರು- ಬೋಟು ಮಾಲಕರ ಮಧ್ಯೆ ಸಮಸ್ಯೆ ಉಂಟಾಗುತ್ತಲೇ ಇರುತ್ತದೆ. ಹೀಗಾಗಿ ಹಣ ದೊರೆಯದೆ ಮಾಲಕರಿಗೆ ಮುಳುಗಡೆಯಾಗದ ಬೋಟ್‌ ಅನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ.

ಅಳಿವೆಯಲ್ಲಿಯೇ ಇದೆ
ಅಳಿವೆ ಅತ್ಯಂತ ಅಪಾಯಕಾರಿ ಪ್ರದೇಶ. ಇಲ್ಲಿ ನೀರಿನ ತೀವ್ರತೆಯನ್ನು ಗಮನಿಸಿ ಬೋಟ್‌ಗಳು ಸಂಚಾರ ನಡೆಸುತ್ತವೆ. ಆದರೆ, ಅಳಿವೆ ಮಧ್ಯ ಭಾಗದಲ್ಲಿಯೇ ಕೆಲವು ವರ್ಷಗಳ ಹಿಂದೆ ಬೋಟ್‌ ಒಂದು ಮುಳುಗಡೆಯಾಗಿ ಇಲ್ಲಿ ಇತರ ಬೋಟುಗಳು ಸುಗಮವಾಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ರಾತ್ರಿ ವೇಳೆಗೆ ಬೋಟ್‌ಗಳು ಇಲ್ಲಿ ಸಂಚರಿಸುವುದರಿಂದ ಮುಳುಗಿರುವ ಬೋಟ್‌ ಗೊತ್ತಾಗುತ್ತಿಲ್ಲ. ಈ ಸಮಸ್ಯೆಗೂ ಪರಿಹಾರ ದೊರಕಿಲ್ಲ.

3 ಫೆರಿ ಮೂಲಕ ನಿತ್ಯ  ಸಾವಿರಾರು ಜನ ಸಂಚಾರ
ಪ್ರಸ್ತುತ ಮಂಗಳೂರು ವ್ಯಾಪ್ತಿಯಿಂದ ಮೂರು ಫೆರಿಗಳ (ಬೋಟು) ಮೂಲಕ ನಿತ್ಯ ಸಾವಿರಕ್ಕೂ ಅಧಿಕ ಮಂದಿಯನ್ನು ಕರೆದುಕೊಂಡು ಹೋಗಲಾಗುತ್ತಿದೆ. ಇದರಂತೆ, ಮೀನುಗಾರಿಕಾ ಬಂದರ್‌ನಿಂದ ಸ್ಯಾಂಡ್ಸ್‌ ಪಿಟ್‌ ಬೆಂಗ್ರೆಗೆ, ಹಳೆಯ ಬಂದರ್‌ನಿಂದ ಕಸ್ಬಾ ಬೆಂಗ್ರೆ, ಸುಲ್ತಾನ್‌ಬತ್ತೇರಿಯಿಂದ ತಣ್ಣೀರುಬಾವಿಗೆ ಫೆರಿ ಸೇವೆ ಇದೆ. ಬೆಂಗ್ರೆ ವ್ಯಾಪ್ತಿಯ ಬಹುತೇಕ ಜನರು ಫೆರಿ ಮೂಲಕವೇ ಬಂದರಿಗೆ ಆಗಮಿಸಿ, ಸಿಟಿಗೆ ಬರುತ್ತಾರೆ. ಶಾಲಾ ವಿದ್ಯಾರ್ಥಿಗಳು ಕೂಡ ಇದೇ ಫೆರಿಯನ್ನು ನಂಬಿಕೊಂಡಿದ್ದಾರೆ.

 ಪರಿಶೀಲಿಸಿ ಕ್ರಮ
ತೋಟಬೆಂಗ್ರೆಯಲ್ಲಿ ಮುಳುಗಿರುವ ಮೀನುಗಾರಿಕಾ ಬೋಟ್‌ನ ಅವಶೇಷಗಳನ್ನು ತೆಗೆಯುವಂತೆ ಸಂಬಂಧಪಟ್ಟ ಬೋಟ್‌ ಮಾಲಕರಿಗೆ ತಿಳಿಸಲಾಗಿದೆ. ಇನ್ನೂ ಅವಶೇಷ ನೀರಿನಲ್ಲಿ ಇರುವುದಾದರೆ ಪರಿಶೀಲಿಸಿ, ತೆಗೆಯುವುದಕ್ಕೆ ಕ್ರಮಕೈಗೊಳ್ಳ ಲಾಗುವುದು.
ಮಂಜುಳಾ ಶ್ರೀ, ಸಹಾಯಕ ನಿರ್ದೇಶಕರು,  ಮೀನುಗಾರಿಕಾ ಇಲಾಖೆ-ಮಂಗಳೂರು

ಇಲಾಖೆ ತೆರವು ಮಾಡಲಿ
ಮೀನುಗಾರಿಕಾ ಬೋಟ್‌ನ ಅವಶೇಷವೊಂದು ನೀರಲ್ಲಿಯೇ ಬಾಕಿಯಾಗಿರುವ ಕಾರಣದಿಂದ ನಿತ್ಯ ಸಾವಿರಾರು ಜನರನ್ನು ತೋಟ ಬೆಂಗ್ರೆ ವ್ಯಾಪ್ತಿಗೆ ಕರೆದುಕೊಂಡು ಹೋಗುತ್ತಿರುವ ಫೆರಿ ಬೋಟ್‌ ಸಂಚಾರಕ್ಕೆ ಸಮಸ್ಯೆಯಾಗಿದೆ. ಅದರ ಯಾವುದಾದರೂ ಒಂದು ಭಾಗ ಜನರಿರುವ ಫೆರಿ ಬೋಟ್‌ಗೆ ತಾಗಿದರೆ ಅನಾಹುತ ಆಗುವ ಸಾಧ್ಯತೆಯಿದೆ. ಹೀಗಾಗಿ ಮುಳುಗಡೆಯಾದ ಬೋಟನ್ನು ಮೀನುಗಾರಿಕಾ ಇಲಾಖೆ ತತ್‌ಕ್ಷಣವೇ ತೆರವು ಮಾಡಬೇಕು.
 - ಮೋಹನ್‌ ಬೆಂಗ್ರೆ, ಅಧ್ಯಕ್ಷರು, ಬೆಂಗ್ರೆ ಮಹಾಜನ ಸಭಾ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next