Advertisement

ಉಮ್ರಾ ಯಾತ್ರೆಯಿಂದ ಹಿಂದಿರುಗಿದವರಲ್ಲಿ ಆತಂಕ

01:16 PM Mar 22, 2020 | Suhan S |

ಬೆಂಗಳೂರು: ದೇಶದ ಮೊದಲ ಕೋವಿಡ್ 19 ಸಾವು ಸಂಭವಿಸಿದ್ದು ಕಲಬುರಗಿಯಲ್ಲಿ. ಮೆಕ್ಕಾ ಯಾತ್ರೆಯಿಂದ (ಉಮ್ರಾ) ಹಿಂದಿರುಗಿದ್ದ ವೃದ್ಧರೊಬ್ಬರಲ್ಲಿ ಸೋಂಕು ಕಾಣಿಸಿ ಕೊಂಡಿದ್ದರಿಂದ ಅವರು ಸಾವಿಗೀಡಾಗಿದ್ದರು. ಕೋವಿಡ್ 19 ಸೋಂಕು ದೃಢಪಟ್ಟ ರಾಜ್ಯದ 6ನೇ ಪ್ರಕರಣ ಇದಾಗಿತ್ತು.

Advertisement

ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 20ಕ್ಕೆ ಏರಿದೆ. ಈ ಪೈಕಿ ಕಲಬುರಗಿ ಹಾಗೂ ಗೌರಿಬಿದನೂರಿನ ತಲಾ ಒಬ್ಬರು ಸೋಂಕಿತರು ಮೆಕ್ಕಾ ಯಾತ್ರೆಗೆ ಹೋಗಿ, ಸೌದಿ ಅರೇಬಿಯಾ ದಿಂದ ಭಾರತಕ್ಕೆ ವಾಪಸ್‌ ಆಗಿದ್ದಾರೆ. ಆದರೆ, ದುಬೈನಿಂದ ಬಂದ ಕೊಡಗು ಜಿಲ್ಲೆಯ ಸೋಂಕಿತರು ಮೆಕ್ಕಾ ಯಾತ್ರೆಗೆ ಹೋಗಿದ್ದರ ಬಗ್ಗೆ ಖಾತರಿಯಿಲ್ಲ, ಆದಾಗ್ಯೂ, ಉಮ್ರಾ ಯಾತ್ರೆಗೆ ತೆರಳಿದ್ದ ರಾಜ್ಯದ ತಂಡಗಳು ಮತ್ತು ವ್ಯಕ್ತಿಗಳ ವಿಚಾರವಾಗಿ ಒಂದಿಷ್ಟು ಆತಂಕ ಮನೆ ಮಾಡಿದೆ.

ಕರ್ನಾಟಕ ರಾಜ್ಯ ಹಜ್‌ ಆರ್ಗನೈಜರ್‌ ಅಸೋಸಿಯೇಷನ್‌ ಈ ಆತಂಕಕ್ಕೆ ಸ್ಪಷ್ಟನೆ ನೀಡಿದೆ. ಯಾವುದೇ ರೀತಿಯ ಆತಂಕ ಪಡುವ ಯಾವುದೇ ಸನ್ನಿವೇಶವಿಲ್ಲ. ಏಕೆಂದರೆ, ಈ ಬಾರಿ ಉಮ್ರಾ ಯಾತ್ರೆಗೆಂದು ಮೆಕ್ಕಾಗೆ ತೆರಳಿದ್ದ ರಾಜ್ಯದ ತಂಡಗಳ ಪೈಕಿ ಈಗಾಗಲೇ ಬಹುತೇಕ ತಂಡಗಳು ಸುರಕ್ಷಿತವಾಗಿ ವಾಪಸ್ಸಾಗಿವೆ. ಕೊನೆಯ ತಂಡ ಮಾ.19ಕ್ಕೆ ಭಾರತಕ್ಕೆ ಮರಳಿದೆ ಎಂದು ಅಸೋಸಿಯೇಷನ್‌ ಹೇಳಿದೆ.

ಕಟ್ಟುನಿಟ್ಟಿನ ಸೂಚನೆ: ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೇರೆ ದೇಶಗಳಿಂದ ಉಮ್ರಾ ಯಾತ್ರೆಗೆ ಬರುವವರ ಪ್ರವೇಶವನ್ನು ಫೆ.27ರಿಂದ ಸೌದಿ ಸರ್ಕಾರ ನಿರ್ಬಂಧಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಖಾಸಗಿ ಹಜ್‌ ಮತ್ತು ಉಮ್ರಾ ಟೂರ್ ಆಪರೇಟರ್‌ಗಳ ಸಭೆ ಕರೆದು, ಸೌದಿ ಸರ್ಕಾರದ ಮುಂದಿನ ಆದೇಶದವರೆಗೆ ಹಾಗೂ ಭಾರತ ಸರ್ಕಾರದ ಮುಂದಿನ ನಿರ್ದೇಶನದವರೆಗೆ ಉಮ್ರಾ ಯಾತ್ರೆಗೆ ಬುಕ್ಕಿಂಗ್‌ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಇಮ್ಮಿಗ್ರೇಷನ್‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಕರ್ನಾಟಕ ರಾಜ್ಯ ಹಜ್‌ ಆರ್ಗನೈಜರ್‌ ಅಸೋಸಿಯೇಷನ್‌ ಅಧ್ಯಕ್ಷ ಶೌಕತ್‌ ಅಲಿ ಸುಲ್ತಾನ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ವರ್ಷಕ್ಕೆ 30 ಸಾವಿರ ಮಂದಿ ಉಮ್ರಾಗೆ :  ರಾಜ್ಯದ ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ನೋಂದಾಯಿತ 46 ಆಪರೇಟರ್‌ಗಳು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಖಾಸಗಿ ಹಜ್‌ ಮತ್ತು ಉಮ್ರಾ ಟೂರ್ ಆಪರೇಟರ್‌ ಸಂಸ್ಥೆಗಳಿವೆ. ಇವುಗಳ ಮೂಲಕ ಪ್ರತಿ ವರ್ಷ ರಾಜ್ಯದಿಂದ ಸುಮಾರು 25ರಿಂದ 30 ಸಾವಿರ ಮಂದಿ ಉಮ್ರಾ ಯಾತ್ರೆಗೆಂದು ಮೆಕ್ಕಾಗೆ ತೆರಳುತ್ತಾರೆ. ಪ್ರತಿ ವರ್ಷ ಸೆಪ್ಟೆಂಬರ್‌ನಿಂದ ಮೇ ತಿಂಗಳವರೆಗೆ ಉಮ್ರಾ ಯಾತ್ರೆ ಕೈಗೊಳ್ಳಲಾಗುತ್ತದೆ. ಬೇಸಿಗೆ ರಜೆ ಮತ್ತಿತರ ಕಾರಣಗಳಿಗೆ ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಉಮ್ರಾ ಯಾತ್ರಿಕರ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಶೌಕತ್‌ ಅಲಿ ಸುಲ್ತಾನ್‌ ಹೇಳುತ್ತಾರೆ.

ಉಮ್ರಾ ಯಾತ್ರೆಯನ್ನು ಸೌದಿ ಸರ್ಕಾರ ನಿರ್ಬಂಧಿಸಿದೆ. ಹಾಗಾಗಿ, ಈಗ ಯಾರೂ ಉಮ್ರಾ ಯಾತ್ರೆಗೆ ಹೋಗುತ್ತಿಲ್ಲ. ಖಾಸಗಿ ಹಜ್‌ ಮತ್ತು ಉಮ್ರಾ ಟೂರ್ ಆಪರೇಟರ್‌ಗಳು ನಮ್ಮ ನಿಯಂತ್ರಣದಲ್ಲಿ ಇಲ್ಲ. ಆದ್ದರಿಂದ ಅವರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡುವ ಅಧಿಕಾರ ನಮಗಿಲ್ಲ. ಏಜಾಜ್‌ ಅಹ್ಮದ್‌, ನೋಡಲ್‌ ಅಧಿಕಾರಿ, ರಾಜ್ಯ ಹಜ್‌ ಸಮಿತಿ

 

 ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next