ಕಳೆದ ಡಿಸೆಂಬರ್‌ನಲ್ಲಿ ತೆರೆಕಂಡ ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರದ ಬಳಿಕ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ. ಅಲ್ಲದೆ, ಝೀರೋ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಭಾರೀ ಸೋಲುಂಡ ಕಾರಣ, ಅನುಷ್ಕಾ ಅಭಿನಯಿಸಲಿರುವ ಮುಂಬರುವ ಚಿತ್ರಗಳ ಬಗ್ಗೆಯೂ ಹೆಚ್ಚು ಮಾಹಿತಿಯಿಲ್ಲ. ಹಾಗಾದರೆ, ನಿಧಾನವಾಗಿ ಚಿತ್ರರಂಗದಿಂದ ದೂರ ಸರಿಯುವ ಯೋಚನೆಯನ್ನು ಏನಾದರೂ ಮಾಡುತ್ತಿದ್ದಾರಾ? ಇಂಥಾದ್ದೊಂದು ಅನುಮಾನ ಅನುಷ್ಕಾ ಅಭಿಮಾನಿಗಳನ್ನು ಕಾಡುತ್ತಿರುವುದಂತೂ ಸುಳ್ಳಲ್ಲ.
ಹೌದು, ಕಳೆದ ಕೆಲ ತಿಂಗಳಿನಿಂದ ಅನುಷ್ಕಾ ಶರ್ಮ ಅಭಿಮಾನಿಗಳು ಕೂಡ ಅನುಷ್ಕಾ ಮುಂದಿನ ಸಿನಿಮಾಗಳ ಬಗ್ಗೆ, ಚಿತ್ರ ಜೀವನದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರೂ, ಅನುಷ್ಕಾ ಮಾತ್ರ ಅದ್ಯಾವುದರ ಬಗ್ಗೆಯೂ ತುಟಿ ಬಿಚ್ಚಿರಲಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂಬ ಮಾತಿನಂತೆ ಬಹುತೇಕರು, ವಿರಾಟ್ ಕೊಹ್ಲಿಯನ್ನು ಮದುವೆಯಾದ ಬಳಿಕ ಅನುಷ್ಕಾ ಚಿತ್ರರಂಗದಿಂದ ದೂರ ಸರಿಯುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂಬ ವಿಶ್ಲೇಷಣೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನುಷ್ಕಾ ಶರ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅನುಷ್ಕಾ, “ನಟಿಯಾಗಿ ಏನು ಸಾಧನೆ ಮಾಡಬೇಕಿತ್ತೋ ಆ ಸಾಧನೆ ಮಾಡಿದ್ದೇನೆ. ವೃತ್ತಿ ಜೀವನದಲ್ಲಿ ನಾನು ಈಗ ಭದ್ರತೆಯ ಸ್ಥಾನ ತಲುಪಿದ್ದೇನೆ. ಬ್ಯುಸಿಯಾಗಿ ಇರಬೇಕು ಎನ್ನುವ ಒಂದೇ ಕಾರಣಕ್ಕೆ ನಾನು ಈಗ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ. ಕಳೆದ ಮೂರು ವರ್ಷದಲ್ಲಿ ಫ್ಯಾಶನ್ ಕೆಲಸ ಮಾಡುತ್ತಿದ್ದೇನೆ. ಆ ಕೆಲಸದ ವೇಳೆ ನನಗೆ ಸಾಕಷ್ಟು ಒತ್ತಡ ಇರುತ್ತಿತ್ತು. ನಾನು ತುಂಬಾ ಬೇಡಿಕೆ ಇರುವ ಪಾತ್ರಗಳನ್ನು ಮಾಡಿದ್ದೇನೆ. ಒಂದು ವರ್ಷದಲ್ಲಿ ನಾನು ಪರಿ, ಸೂಯಿ ಧಾಗಾ ಹಾಗೂ ಝೀರೋ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಮೂರು ಚಿತ್ರಗಳಲ್ಲಿ ಸುಲಭವಾಗಿ ನಟಿಸಲು ಸಾಧ್ಯ ಇರಲಿಲ್ಲ. “ಈ ಸಿನಿಮಾಗಳಿಗಾಗಿ ನಾನು ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ’ ಎಂದು ಅನುಷ್ಕಾ ಹೇಳಿದ್ದಾರೆ. ಈಗ ಡಿಜಿಟಲ್ ವೇದಿಕೆಯಲ್ಲಿ ಯಾವುದಾದರೂ ಷೋ ಮಾಡಬೇಕು ಎಂದುಕೊಂಡಿದ್ದೇನೆ. ಒಂದು ಚಿತ್ರದ ಕೆಲಸ ಕೂಡ ನಡೆಯುತ್ತಿದೆ. ಈ ಕೆಲಸಗಳಿಗಾಗಿ ನನಗೆ ಸಮಯದ ಆವಶ್ಯಕತೆ ಇದೆ. ಇದು ನನಗೆ ತುಂಬಾ ಹೊಸದು. ನಾವು ಬೆಳ್ಳಿಪರದೆ ಹಿಂದೆ ಮಾಡುವ ಕೆಲಸ ಜನರಿಗೆ ಗೊತ್ತಾಗುವುದಿಲ್ಲ. ನಾನು ಈಗ ನನ್ನ ಕೆಲಸದ ಕಡೆ ಗಮನ ಕೊಡಲು ನಿರ್ಧರಿಸಿದ್ದೇನೆ. ನಾನು ಮಾಡುವ ಕೆಲಸದಲ್ಲಿ ನನಗೆ ತೃಪ್ತಿ ಇದೆ’ ಎಂದಿದ್ದಾರೆ.
ಒಟ್ಟಾರೆ ಕಳೆದ ಕೆಲ ತಿಂಗಳಿನಿಂದ ಅನುಷ್ಕಾ ಇಂಡಸ್ಟ್ರಿಗೆ ಗುಡ್‌ಬೈ ಹೇಳುತ್ತಾರೆ, ಗರ್ಭಿಣಿ ಆಗಿದ್ದರಿಂದ ಯಾವ ಸಿನಿಮಾಗಳನ್ನೂ ಒಪ್ಪಿಕೊಳ್ಳುತ್ತಿಲ್ಲ ಅಂತ ಹಬ್ಬಿದ್ದ ಅಂತೆ-ಕಂತೆಗಳಿಗೆ ಫುಲ್‌ಸ್ಟಾಪ್ ಬಿದ್ದಿದ್ದು, ಈ ಮೂಲಕ ಸಿನಿಮಾ ಗಳಿಂದ ಸ್ವಲ್ಪ ಮಟ್ಟಿಗೆ ದೂರ ಉಳಿದಿರುವುದನ್ನ ಅನುಷ್ಕಾ ಪರೋಕ್ಷವಾಗಿ ಒಪ್ಪಿ ಕೊಂಡಂತಾಗಿದೆ.