Advertisement

ಅನುರಾಗ್‌ತಿವಾರಿ ಸಾವು: ತನಿಖೆಗೆ ಹೆಚ್ಚಿದ ಒತ್ತಡ

10:56 AM May 20, 2017 | Team Udayavani |

ಬೆಂಗಳೂರು: ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವು ಪ್ರಕರಣದ ತನಿಖೆಗೆ ಒತ್ತಡ ಹೆಚ್ಚಾಗುತ್ತಿದ್ದು, ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಅನುರಾಗ್‌ ತಿವಾರಿ ಸಾವು ಹಲವಾರು ಅನುಮಾನಗಳಿಗೆ
ಕಾರಣವಾಗಿದ್ದು, ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿವೆ. ಈ ಮಧ್ಯೆ, ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಸಾವಿರ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಅನುರಾಗ್‌ ತಿವಾರಿ ಅನಿರೀಕ್ಷಿತ ಸಾವು ಕುರಿತು
ಕೇಳಿ ಬರುತ್ತಿರುವ ಸುದ್ದಿಗಳ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಲು ಪ್ರಾಮಾಣಿಕ ಸೂಕ್ತ ತನಿಖಾ ಸಂಸ್ಥೆಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

ಆಕಸ್ಮಿಕ ಸಾವಲ್ಲ, ಕೊಲೆ: ಈ ನಡುವೆ, ಚಿತ್ರದುರ್ಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಉತ್ತರಪ್ರದೇಶದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿರುವ ಅನುರಾಗ್‌ ತಿವಾರಿ ಅವರದು ಆಕಸ್ಮಿಕ ಸಾವಲ್ಲ, ಅದೊಂದು ಕೊಲೆ. ಆ ಕೊಲೆಯ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಬೇಕು ಎಂದು ಹೇಳಿದ್ದಾರೆ.
ರಾಜ್ಯದ ಆಹಾರ ಇಲಾಖೆಯಲ್ಲಿ ನಡೆದಿರುವ 2000 ಕೋಟಿ ರೂ.ಗಳ ಅವ್ಯವಹಾರದ ತನಿಖೆ ನಡೆಸಲು ತಿವಾರಿ ಮುಂದಾಗಿದ್ದರು. ತನಿಖೆಯಿಂದ ಸತ್ಯ ಬಯಲಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ರಾಜ್ಯದವರೇ ಉತ್ತರಪ್ರದೇಶಕ್ಕೆ ಹೋಗಿ ಅನುರಾಗ್‌ ತಿವಾರಿ ಅವರನ್ನು ಕೊಲೆ ಮಾಡಿದ್ದಾರೆ. ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು. ಇಲ್ಲವಾದರೆ ಕೇಂದ್ರ ಸರ್ಕಾರವೇ ಸಿಬಿಐ ತನಿಖೆಗೆ ವಹಿಸಬೇಕಾಗುತ್ತದೆ ಎಂದು ಹೇಳಿದರು.

ಮಧುಗಿರಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಅನುರಾಗ್‌ ತಿವಾರಿ ಅವರ ಸಾವಿನ ಬಗ್ಗೆ ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಚರ್ಚೆಯಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರ ಬಯಲಿಗೆ ಬರುತ್ತದೆಂಬ ಕಾರಣದಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ಅಲ್ಲಿನ ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.

ತಿವಾರಿ ಅವರ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next