ಮುಂಬಯಿ: ಸದಾ ಒಂದಲ್ಲ ಒಂದು ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವ ನಿರ್ದೇಶಕ ಅನುರಾಗ್ ಕಶ್ಯಪ್ ಈ ಬಾರಿ ತನ್ನನ್ನು ಭೇಟಿ ಆಗುವವರು ಹಣ ಕೊಟ್ಟು ಬರಬೇಕೆಂದು ಹೇಳಿರುವ ಪೋಸ್ಟ್ ವೊಂದು ಗಮನ ಸೆಳೆದಿದೆ.
‘ಗ್ಯಾಂಗ್ಸ್ ಆಫ್ ವಾಸೇಪುರ್’ ಮೂಲಕ ಬಿಟೌನ್ ನಲ್ಲಿ ಸದ್ದು ಮಾಡಿರುವ ಅನುರಾಗ್ ನವ ಪ್ರತಿಭೆಗಳನ್ನು ಹುಡುಕಿ, ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡುತ್ತಾರೆ. ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಹಲವಾರು ಪ್ರತಿಭೆಗಳನ್ನು ಬಿಟೌನ್ ಪರಿಚಯಿಸಿದ ಕೀರ್ತಿ ಅನುರಾಗ್ ಅವರದು.
ಇದೀಗ ಅವರು, ತಮ್ಮನ್ನು ಭೇಟಿ ಆಗಲು ಬರುವವರು ಹಣ ಕೊಟ್ಟು ಬನ್ನಿಯೆಂದು ಪೋಸ್ಟ್ ವೊಂದನ್ನು ಮಾಡಿದ್ದಾರೆ.
“ಹೊಸಬರಿಗೆ ಸಹಾಯ ಮಾಡಲು ಸಾಕಷ್ಟು ಸಮಯವನ್ನು ವ್ಯರ್ಥಮಾಡಿದೆ. ಈಗ ನಾನು ಸೃಜನಶೀಲ ಪ್ರತಿಭೆ ಎಂದು ತಮ್ಮನ್ನು ತಾವು ಭಾವಿಸುವ ಜನರನ್ನು ಭೇಟಿಯಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಹಾಗಾಗಿ ನಾನು ಈಗ ದರಗಳನ್ನು ನಿಗದಿ ಮಾಡಿದ್ದೇನೆ. ಯಾರಾದರೂ ನನ್ನನ್ನು 10-15 ನಿಮಿಷಗಳ ಕಾಲ ಭೇಟಿಯಾಗಲು ಬಯಸಿದರೆ ನಾನು 1 ಲಕ್ಷ, ಅರ್ಧ ಗಂಟೆಗೆ 2 ಲಕ್ಷ ಮತ್ತು 1 ಗಂಟೆ 5 ಲಕ್ಷ ಶುಲ್ಕ ವಿಧಿಸುತ್ತೇನೆ. ಜನರನ್ನು ಭೇಟಿ ಮಾಡಲು ಸಮಯ ವ್ಯರ್ಥ ಮಾಡುವುದರಿಂದ ನನಗೆ ಬೇಸರವಾಗಿದೆ. ನೀವು ಅದನ್ನು ನಿಭಾಯಿಸಬಹುದು ಎಂದು ನೀವು ನಿಜವಾಗಿಯೂ ಭಾವಿಸಿದರೆ, ನನಗೆ ಕರೆ ಮಾಡಿ ಅಥವಾ ದೂರದಲ್ಲಿರಿ. ಎಲ್ಲವನ್ನೂ ಮುಂಚಿತವಾಗಿ ಪಾವತಿಸಿ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅನುರಾಗ್ ಕಶ್ಯಪ್ ಇತ್ತೀಚೆಗೆ ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ಮಾಡಿದ್ದರು. ಶೀಘ್ರದಲ್ಲಿ ಅವರು ತಮಿಳು – ಹಿಂದಿ ಭಾಷೆಯ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾಕ್ಕೆ ಜಿ.ವಿ.ಪ್ರಕಾಶ್ ಸಂಗೀತ ನೀಡಲಿದ್ದಾರೆ ಎನ್ನಲಾಗಿದೆ.