Advertisement

ಚುನಾವಣಾ ಅಖಾಡಕ್ಕೆ ವೇದಿಕೆಸಿದ್ಧಗೊಳಿಸಿದ ಅನುಪಮಾ

12:31 PM Nov 15, 2017 | Team Udayavani |

ಬೆಂಗಳೂರು: ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪಕ್ಷವನ್ನು ಹುಟ್ಟುಹಾಕಿರುವ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ತಮ್ಮ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ 8 ವಲಯವನ್ನು ರಚಿಸಿದ್ದು, ಉಸ್ತುವಾರಿಗಳನ್ನು ಕೂಡ ನೇಮಕ ಮಾಡಿದ್ದಾರೆ. ಪಕ್ಷದ ಅಭ್ಯರ್ಥಿಯಾಗ ಬಯಸುವವರು ಆಯಾ ವಲಯ ಉಸ್ತುವಾರಿಯನ್ನು ಸಂಪರ್ಕಿಸಿ ಲಿಖೀತ ದಾಖಲಾತಿ ನೀಡಬಹುದಾಗಿದೆ.

Advertisement

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಜನಶಕ್ತಿ ಪಕ್ಷದ ಕಾರ್ಯದರ್ಶಿಯೂ ಆಗಿರುವ ಅನುಪಮಾ ಶೆಣೈ, ಪಕ್ಷ ಮುಂಬರುವ ಚುನಾವಣೆಗೆ ಎಲ್ಲಾ ರೀತಿಯಲ್ಲೂ ಸಿದ್ಧವಾಗುತ್ತಿದ್ದು ಬಲಿಷ್ಠ ಅಭ್ಯರ್ಥಿಗಳ ಹುಡುಕಾಟ ನಡೆಸಿರುವುದಾಗಿ ತಿಳಿಸಿದರು. ಸಾಮಾಜಿಕ ಸೇವೆ ಮತ್ತು ರಾಜಕೀಯ ಅನುಭವ ಉಳ್ಳವರು ಸೇರಿ ಎಲ್ಲಾ ವರ್ಗದವರಿಗೂ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದರು. ಅಭ್ಯರ್ಥಿಗಳ ಆಯ್ಕೆಯ ಸಂಬಂಧ 8 ವಲಯಗಳನ್ನು ರಚಿಸಲಾಗಿದೆ. ಬೆಳಗಾವಿ, ಬಾಗಲಕೋಟೆ, ಗದಗ ಉಸ್ತುವಾರಿಯನ್ನು ಪಕ್ಷದ ಅಧ್ಯಕ್ಷ ಮಹದೇವ ಬಾಬು ಉದಯಗಿರಿ ಅವರಿಗೆ ವಹಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಉಸ್ತುವಾರಿಯ ಜವಾಬ್ದಾರಿಯನ್ನು ಬೆನೆಟ್‌ ನವಿಟಾ ಕ್ರಾಸ್ತಾ ಅವರಿಗೆ ನೀಡಲಾಗಿದೆ. ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜವಾಬ್ದಾರಿಯನ್ನು ತಾವು ವಹಿಸಿಕೊಂಡಿರುವುದಾಗಿ ತಿಳಿಸಿದರು.

ದಕ್ಷ ಅಧಿಕಾರಿಗಳಿಗೆ ಬೆಲೆ ಇಲ್ಲ: ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಈ ಸರ್ಕಾರದಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಟೀಕಿಸಿದರು. ತಮ್ಮ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಿದೆ. ಸರ್ಕಾರಿ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಲು ಪೂರಕ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೌಕರರ ಪರವಾಗಿ ಹೋರಾಟ ನಡೆಸಲಿದೆ ಎಂದರು.

ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು: ನಾನು ಮೂಲತಃ ಕರಾವಳಿ ಭಾಗದವಳು. ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಉಡುಪಿಯಲ್ಲಾದರೂ ಸ್ಪರ್ಧಿಸಬಹುದು, ಇಲ್ಲವೇ ಬೇರೆ ಕ್ಷೇತ್ರದಲ್ಲಾದರೂ ಅಖಾಡಕ್ಕಿಳಿಯಬಹುದು. ಗೆಲುವಿಗೆ ಯಾವುದು ಪೂರಕವಾಗಿದೆಯೋ ಅಂತಹ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next