Advertisement

ಅಭಿಜಾತ ಪ್ರತಿಭೆಯ ನೃತ್ಯ ಪ್ರವೀಣೆ ಅನುಪಮಾ ಶೆಣೈ ಭಟ್‌

03:50 AM Apr 14, 2017 | Team Udayavani |

ಒಲಿದ ಕಲೆಯನ್ನು ಉಳಿಸಿ- ಬೆಳೆಸುವುದೊಂದು ಕಲೆಯೇ ಸರಿ. ಅದರಲ್ಲೂ ಕಲೆಯನ್ನು ನೌಕರಿ ಮತ್ತು ಸಂಸಾರದೊಂದಿಗೆ ಸಮತೋಲನಗೊಳಿಸಿ, ನಿಭಾಯಿಸುವುದು ಸುಲಭ ವಲ್ಲ. ಇದಕ್ಕೆ ಕಠಿನ ಪರಿಶ್ರಮ, ಏಕಾಗ್ರತೆ, ತಪಸ್ಸಿನಂತೆ ದುಡಿಮೆ ಇವೆಲ್ಲವೂ ಮುಖ್ಯ. ಅನುಪಮಾ ಶೆಣೈ ಭಟ್‌ ಕಲೆಯನ್ನು ನೌಕರಿ ಮತ್ತು ಸಂಸಾರದೊಂದಿಗೆ ಸಮನ್ವಯಗೊಳಿಸಿ ಯಶ ಕಂಡಿದ್ದಾರೆ.

Advertisement

ಉಡುಪಿ ಮೂಲದ ಕಲಾಪ್ರೇಮಿ ತೋನ್ಸೆ ವೆಂಕಟೇಶ ಶೆಣೈ ಮತ್ತು ಪದ್ಮಿನಿ ವಿ. ಶೆಣೈ ದಂಪತಿಯ ಸುಪುತ್ರಿ ಅನುಪಮಾ ದೂರದರ್ಶನದಿಂದ ಪ್ರಭಾವಿತರಾಗಿ ಆರನೇ ವಯಸ್ಸಿನಿಂದ ಭರತನಾಟ್ಯ ಕಲಿಯಲಾರಂಭಿಸಿದರು. ಹೆತ್ತವರ ಹುರಿದುಂಬಿಸು ವಿಕೆಯಿಂದ ಮುಂಬೈಯ ಮಲಯಾಳಂ ಸಮಾಜದಲ್ಲಿ ಭರತನಾಟ್ಯ ಕಲಿಕೆ ಮುಂದುವರಿಸಿದರು. ತದನಂತರ ಒಡಿಸ್ಸಿ ನೃತ್ಯಾಭ್ಯಾಸದಲ್ಲಿ ತೊಡಗಿ, ತನ್ನ ಅಭಿಜಾತ ಪ್ರತಿಭೆಯನ್ನು ಅನಾವರಣಗೊಳಿಸಲಾರಂಭಿಸಿದರು. ಭರತನಾಟ್ಯ, ಜಾನಪದ, ಒಡಿಸ್ಸಿ ನೃತ್ಯಕಲೆಗಳು ಇವರಲ್ಲಿ ಸಂಗಮಿಸಿವೆ. ಬಿ.ಎಚ್‌.ಎಂ.ಎಸ್ಸಿ ಪದವೀಧರೆಯಾಗಿದ್ದು, ಮುಂಬೈಯ ಪ್ರತಿಷ್ಠಿತ ಕೇಂಬ್ರಿಡ್ಜ್ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದಾರೆ.

30 ವರ್ಷ ವಯಸ್ಸಿನ ಇವರು ಪದವಿ ಓದುತ್ತಿರುವಾಗ ಮುಂಬೈ ವಿ.ವಿ.ಯನ್ನು ಪ್ರತಿನಿಧಿಸಿ ಪಡೆದ ಬಹುಮಾನಗಳು ಈ ರಂಗವನ್ನು ಅಪ್ಪಿಕೊಳ್ಳಲು ತಿರುವು ಎನ್ನುತ್ತಾರೆ ಅನುಪಮಾ. ಇಂದುಮತಿ ಲೆಲೆ, ಕೇಟಕಿ ತಂಬಿ ಮತ್ತು ದಿಲೀಪ್‌ ತಂಬಿ ಅನುಪಮಾರ ಗುರುಗಳು. ಏಕಪಾತ್ರಾಭಿನಯಕ್ಕೆ ಪ್ರಾಧಾನ್ಯ ಅವರ ಹೆಚ್ಚುಗಾರಿಕೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವೆಡೆ ಈ ತನಕ ನೀಡಿದ ನೂರಾರು ಕಾರ್ಯಕ್ರಮಗಳು, ಈಚೆಗೆ ಪ್ರತಿಷ್ಠಿತ ಸ್ವರ-ಸಾಧನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಮಾನ, ಮುಂಬೈಯ ಖ್ಯಾತ ಕೊಂಕಣಿ ಕಲಾಸಂಘದಲ್ಲಿ ಕೆಲಕಾಲ ಸಕ್ರಿಯ ಸೇವೆ, ಸಂಘದ ಲಿಮ್ಕಾ ಬುಕ್‌ನಲ್ಲಿ ದಾಖಲಾದ ನಾಟಕ “ನಂದಾದೀಪ’ದಲ್ಲಿ ಪಾತ್ರ ನಿರ್ವಹಣೆ, ಕವಳೆಶ್ರೀ, ನಾಗಾಲ್ಯಾಂಡ್‌ ರಾಜ್ಯಪಾಲ ಪದ್ಮನಾಭ ಆಚಾರ್ಯ ಸಹಿತ ಹಲವಾರು ಗಣ್ಯರಿಂದ ಗೌರವ-ಪ್ರಶಂಸೆ ಅನುಪಮಾರ ನೃತ್ಯಕಲೆಯ ಕ್ರಿಯಾಶೀಲತೆ-ಸೃಜನಶೀಲತೆ ಮತ್ತು ಸಾಧನೆಗಳಿಗೆ ಪ್ರಮಾಣಗಳು.  ಪ್ರಯೋಗ ಶೀಲೆಯೂ ಅಧ್ಯಯನಶೀಲೆಯೂ ಆಗಿರುವ ಅನುಪಮಾ ತನ್ನ ಸಾಧನೆಗೆ ತನ್ನ ಪತಿ ಮತ್ತು ಕುಟುಂಬಿಕರ ಉತ್ತೇಜನವನ್ನೂ ಸ್ಮರಿಸುತ್ತಾರೆ.

ಸಂದೀಪ್‌ ನಾಯಕ್‌ ಸುಜೀರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next