Advertisement

ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪಕ್ಷ ಅಸ್ತಿತ್ವಕ್ಕೆ

07:25 AM Nov 02, 2017 | Team Udayavani |

ಕೂಡ್ಲಿಗಿ: ವ್ಯವಸ್ಥೆ ವಿರುದ್ಧ ಸಿಡಿದೆದ್ದು ಸರಕಾರಿ ನೌಕರಿಗೆ ರಾಜೀನಾಮೆ ನೀಡಿದ್ದ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು, ಹೊಸ ಪಕ್ಷ ಘೋಷಿಸಿದ್ದಾರೆ. ರಾಜ್ಯೋತ್ಸವದ ದಿನ ತಾವು ನೌಕರಿಗೆ ರಾಜೀನಾಮೆ ಸಲ್ಲಿಸಿದ್ದ ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲೇ “ಭಾರತೀಯ ಜನಶಕ್ತಿ ಕಾಂಗ್ರೆಸ್‌’ ಎಂಬ ಹೊಸ ಪಕ್ಷ ಘೋಷಿಸಿದ್ದಾರೆ.

Advertisement

ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಸಮಾರಂಭ ದಲ್ಲಿ ಹೊಸ ಪಕ್ಷ ಘೋಷಿಸಿ, ಪಕ್ಷದ ಬ್ಯಾನರ್‌ ಬಿಡುಗಡೆಗೊಳಿಸಲಾಯಿತು. ಇದಕ್ಕೂ ಮುನ್ನ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ನಂತರ ಪಾದಯಾತ್ರೆ ಮೂಲಕ ಕೂಡ್ಲಿಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ತಮ್ಮ ಪಕ್ಷದ ಅಪಾರ ಕಾರ್ಯಕರ್ತರ ನಡುವೆ ಅನುಪಮಾ ಶೆಣೈ ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪ ತಲುಪಿ ಹೊಸ ಪಕ್ಷ
ಘೋಷಿಸಿದರು.

ಪಕ್ಷದ ನೂತನ ಅಧ್ಯಕ್ಷರಾಗಿ ಬೆಳಗಾವಿಯ ನಿವೃತ್ತ ಶಿಕ್ಷಕ ಮಹದೇವ ಬಾಬು ದುದ್ದಗಾವಿ ಯವರನ್ನು ಆಯ್ಕೆ  ಮಾಡಲಾಗಿದೆ. ಅನುಪಮಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ನವೆಂಬರ್‌ ಅಂತ್ಯದ
ಒಳಗೆ ಉಳಿದ ಪದಾಧಿಕಾರಿಗಳ ಆಯ್ಕೆ ನಡೆಯುವ ಸಾಧ್ಯತೆಗಳಿವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ
ಯಾವ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬ ಬಗ್ಗೆಯೂ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.

ಹೊಸ ಶಕೆ: ನೂತನ ಪಕ್ಷ ಘೋಷಿಸಿದ ಅನುಪಮಾ ಶೆಣೈ ಮಾತನಾಡಿ, ನಾನು ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ
ನೀಡಿದಾಗ ರಾಜ್ಯದ ಜನತೆ ಬಿಜೆಪಿ ಅಥವಾ ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಾರೆ ಅಂದು ಕೊಂಡಿದ್ದರು. ಆದರೆ ನನ್ನ ಹಿತೈಷಿಗಳು, ಬೆಂಬಲಿಗರು “ನೀವು ಏಕೆ ಹೊಸ ಪಕ್ಷ ಕಟ್ಟಬಾರದು’ ಎಂದು ಸಲಹೆ ನೀಡಿದ್ದರು. ಹೀಗಾಗಿ ನಾನು ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪಕ್ಷ ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ಹೊಸ ನಾಯಕತ್ವದ ಶಕೆ ಆರಂಭಿಸಿದ್ದೇನೆಂದು ಹೇಳಿಕೊಂಡರು.

ಡಿಕೆಶಿ ಮಾತು ಪ್ರೇರಣೆ: ಪತ್ರಕರ್ತರು ನಾನು ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ ನೀಡಿದ ಬಗ್ಗೆ ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಕೇಳಿದಾಗ “ಅನುಪಮಾ ಲೀಡರ್‌ ಆಗೋಕೆ ಹೊರಟಿದ್ದಾರೆ’ ಎಂದಿದ್ದರು. ಅವರ ಮಾತು ಕೇಳಿದಾಗ ಮಹಿಳೆಯಾದ ನಾನೇಕೇ ಲೀಡರ್‌ ಆಗಬಾರದು ಎನ್ನುವ ಛಲ ಬಂತು. ಹೀಗಾಗಿಯೇ ಹೊಸ ಪಕ್ಷ ಕಟ್ಟಲು ಮುಂದಾದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next