ದಾವಣಗೆರೆ: ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ನೇತೃತ್ವದಲ್ಲಿ ಮಾ.19ರಂದು ದಾವಣಗೆರೆಯ ಜಿಲ್ಲಾ ಗುರುಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕಿಯರಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭ ಮತ್ತು ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷೆ ಕಲ್ಪನಾ ರವೀಂದ್ರನಾಥ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಾಯಕಯೋಗಿಗಳಾಗಿ ಚೈತನ್ಯ ಚಿಲುಮೆಗಳಾಗಿ ಸದಾ ಕ್ರಿಯಾಶೀಲತೆಯಿಂದ ಆದರ್ಶ ಸಮಾಜಕ್ಕೆ ಉತ್ತಮ ನಾಗರಿಕರ ಕೊಡುಗೆಯಾಗಿ ನೀಡುವ ಕೆಲಸದಲ್ಲಿ ತೊಡಗಿರುವ ಶಿಕ್ಷಕಿಯರ ಗುರುತಿಸಿ, ಪ್ರಶಸ್ತಿ ವಿತರಿಸಿ, ಗೌರವಿಸಿ ಗುಣಾತ್ಮಕ ಶಿಕ್ಷಣಕ್ಕೆ ಪ್ರೇರಣೆ ನೀಡುವ ಉದ್ದೇಶದೊಂದಿಗೆ ಸಂಘ ಅನೇಕ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದರು.
ಶನಿವಾರ ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಮಾರಂಭ ಉದ್ಘಾಟಿಸಿವರು. ಸಂಘ ರಾಜ್ಯ ಸಂಸ್ಥಾಪಕ ಅಧ್ಯಕ್ಷೆ ಡಾ| ಲತಾ ಎಸ್. ಮುಳ್ಳೂರ ಆಶಯ ನುಡಿಗಳಾಡುವರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಮಹಿಳಾ ಸಬಲೀಕರಣ ಮತ್ತು ಕಾನೂನು ಅರಿವು ವಿಷಯದ ಕುರಿತು ಉಪನ್ಯಾಸ ನೀಡುವರು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ, ಎಸ್. ವಿ. ರಾಮಚಂದ್ರ, ಎಸ್. ರಾಮಪ್ಪ, ಪ್ರೊ.ಎನ್. ಲಿಂಗಣ್ಣ, ವೈ.ಎ. ನಾರಾಯಣಸ್ನಾಮಿ, ಎಂ. ಚಿದಾನಂದಗೌಡ, ಮೇಯರ್ ಜಯಮ್ಮ ಗೋಪಿನಾಯ್ಕ, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ| ವಿಜಯ ಮಹಾಂತೇಶ್ ದಾನಮ್ಮನವರ್, ನಗರಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಒಳಗೊಂಡಂತೆ 10 ಜನರಿಗೆ ಅನುಪಮ ಸೇವಾರತ್ನ ಪ್ರಶಸ್ತಿ, ಮೂವರಿಗೆ ಜಿಲ್ಲಾ ಮಟ್ಟದ ಅನುಪಮ ಸೇವಾ ಶಿಕ್ಷಕಿ ಪ್ರಶಸ್ತಿ, ವಿವಿಧ ಸಂಘಟನೆ ಗಳಲ್ಲಿ ಪ್ರಥಮ ಮಹಿಳಾ ಅಧ್ಯಕ್ಷೆಯರಾಗಿರುವ ಮೂವರು ಶಿಕ್ಷಕಿಯರಿಗೆ, ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಉರ್ದು ಪ್ರಾಥಮಿಕ ವಿಭಾಗ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕಿಯರಿಗೆ ಜಿಲ್ಲಾಮಟ್ಟದ ಅನುಪಮ ಸೇವಾ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಒಟ್ಟಾರೆ 45 ಜನರಿಗೆ ಗೌರವಿಸಲಾಗುವುದು ಎಂದು ತಿಳಿಸಿದರು. ಸಂಘದ ಗೌರವ ಅಧ್ಯಕ್ಷೆ ಕೆ.ಜಿ. ಸೌಭಾಗ್ಯ, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಮಂಗಳಾ, ಖಜಾಂಚಿ ಸಿ. ಪದ್ಮ, ಜ್ಯೋತಿ, ಡಿ. ಸರೋಜಮ್ಮ ಸುದ್ದಿಗೋಷ್ಠಿಯಲ್ಲಿದ್ದರು.