ಪಾಪ್ ಭೂಮಿ ಸೆ ಭಾರಿ
ಕ್ರೋಧ್ ಅಗನ್ ಸೆ ತೇಜ್ ಹೈ
ಔರ್ ಕಲಂಕ್ ಕಾಜಲ್ ಸೆ ಕಾಲಿ … ರಂಗ್ ದೇ ಚುನರಿಯಾ…
ಈ ಮೇಲಿನ ಸಾಲನ್ನು ಎಂಬತ್ತರ ದಶಕದಲ್ಲಿ ಹಾಡಿ ತುಂಬಾ ಪ್ರಸಿದ್ಧಿಯನ್ನು ಕಂಡ ಗಾಯಕ ಶ್ರೀಮಾನ್ ಅನುಪ್ ಜಲೋಟ. ನಮ್ಮ ಸಂಬಂಧಿಕರ ಮನೆಗೆ ಆಗಷ್ಟೇ ಬಂದ ಪ್ಯಾನಸೋನಿಕ್ ಟೇಪ್ ರೆಕಾರ್ಡರ್‌ನಲ್ಲಿ ಜಲೋಟಾರವರ ಭಜನ್ ಸಂಧ್ಯಾ ಕ್ಯಾಸೆಟ್‌ನ್ನು ರೀಲು ಹರಿಯುವವರೆಗೆ ಕೇಳಿಧ್ದೋ ಕೇಳಿದ್ದು. ಆ ಕ್ಯಾಸೆಟ್ಟಿನ ಮಹಿಮೆಯೇ ಅಂತಹದ್ದು. ಒಂದಕ್ಕಿಂತ ಒಂದು ಹಾಡು ಚೆಂದ. ಭಕ್ತಿಯಲ್ಲಿ, ಅಲ್ಲಿ ಉಪಯೋಗಿಸಿದ ವಾಕ್ಯಗಳಲ್ಲಿ, ಅದರ ರಾಗ ಸಂಯೋಜನೆಯಲ್ಲಿ, ಅಲ್ಲಿನ ವಾದ್ಯ ಬಳಕೆಯಲ್ಲಿ ಎಲ್ಲಕ್ಕಿಂತಲೂ ಹೆಚ್ಚಾಗಿ ಜಲೋಟರವರ ಪ್ರತಿಭೆಯಲ್ಲಿ ಅವರ ಇಂಪಾದ ಧ್ವನಿಯಲ್ಲಿ. ಈ ಹಾಡುಗಳಿಂದ ಭಾರತದ ಭಜನ್ ಸಾಮ್ರಾಟ್ ಎನ್ನುವ ಬಿರುದನ್ನು ಪಡೆದವರು. ಅವರ ಹಾಡನ್ನು ಕೇಳದ ಮನೆಗಳಿಲ್ಲ ಎನ್ನುವಷ್ಟರ ಮಟ್ಟಿಗೆ ಆ ಕ್ಯಾಸೆಟ್ ಹೆಸರನ್ನು ತಂದು ಕೊಟ್ಟಿತ್ತು.
Advertisement
“ಬದುಕಿನಲ್ಲಿ ಬಹಳ ಕಷ್ಟ ಬಂದು ಬದುಕುವುದೇ ದುಸ್ತರವಾಗಿ ದೇವರೂ ಕರುಣೆ ತೋರದಿದ್ದರೆ ಜಲೋಟಾರವರ ಹತ್ತಿರ ಹೋಗಬೇಕು. ಅವರು ದೇವರ ಹತ್ತಿರವಿದ್ದಾರೆ. ಒಮ್ಮೆ ಅವರು ದೇವರಿಗೆ ರೆಕಮೆಂಡ್ ಮಾಡಿದರೆ ನಮ್ಮ ಕಷ್ಟ ಪರಿಹಾರವಾಗಿ ಶಾಂತಿ ಕಾಣಬಹುದು’ ಎಂಬ ನಂಬಿಕೆಯೂ ಕೆಲವರಿಗೆ ಇತ್ತು ಎಂದು ನಾನು ಕೇಳಿದ್ದಿದೆ! ನಂತರವೂ ಅವರು ರಾಮಾಯಣ-ಮಹಾಭಾರತ ಕಥೆಯಾಧಾರಿತ ಭಕ್ತಿ ಪ್ರಧಾನ ಬೆಳಗಿನ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಇವೆಲ್ಲ ನಡೆದು ಸುಮಾರು ಇಪ್ಪತ್ತೈದು-ಮೂವತ್ತು ವರುಷಗಳೇ ನಡೆದು ಹೋಗಿವೆ. ಬೇರೇನೂ ಹೆಚ್ಚು ಬದಲಾಗಿಲ್ಲ, ಅದೇ ಹಾಡಿನ ಕ್ಯಾಸೆಟ್ ನಂತರ ಸಿಡಿಯಲ್ಲಿ ಬಂತು, ಈಗ ಸಂಗೀತದ ವೆಬ್‌ಸೈಟ್‌ನ ಮೂಲಕ ಮೊಬೈಲ್‌ಗಳಲ್ಲಿ ಪ್ರಭುಜಿ ತುಮ ಚಂದನ ಹಮ ಪಾನಿ ಪ್ಲೇ ಆಗುತ್ತಿದೆ. ಆಗ ಕೇಳುತ್ತಿದ್ದವರು ಈಗಲೂ ಸುಮಾರು ಅದೇ ಮನಸ್ಥಿತಿಯಲ್ಲಿ ಕೇಳುತ್ತಿರಬಹುದು!
Related Articles
ಇವೆಲ್ಲದರ ಹಿಂದೆ ನಮಗೆಂದೂ ಗೋಚರಿಸದ ಒಬ್ಬ ಸೂತ್ರಧಾರನಿದ್ದಾನೆ ಎನ್ನುವುದನ್ನು ತಿಳಿಯಲೇಬೇಕು. ಆತನ ದಾರ ನಮ್ಮೆಲ್ಲರ ಮೇಲೆ ಸಂಚರಿಸುತ್ತಿದೆ. ಆತ ಯಾವತ್ತೂ ಎಳೆಯಬಹುದು. ಇಲ್ಲಿಯವರೆಗೆ ಸಂಬಂಧವೇರ್ಪಡದ ಎರಡು ದಾರವನ್ನು ಜೋಡಿಸಿ ನಮಗೆ ಆಶ್ಚರ್ಯ, ಖುಷಿ, ನೋವು ಎಲ್ಲವನ್ನೂ ಕೊಡಬಹುದು.
Advertisement
ಆದರೆ, ಅವೆಲ್ಲವುದಕ್ಕೂ “ಚಾರ್ಜ್’ ಆಗುತ್ತದೆ ಅಷ್ಟೆ ! ಇಂದು ಬಿಗ್‌ಬಾಸ್ ತರಹದ ಕಾರ್ಯಕ್ರಮಗಳ ಹಿಂದೆ ನೂರಾರು ಸಾವಿರಾರು ಕೋಟಿ ವ್ಯವಹಾರವಿದೆ. ಸಾವಿರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ. ವಿಶ್ವದ ಬಹಳ ದುಬಾರಿ ಕ್ರಿಯೇಟಿವ್ ಏಜನ್ಸಿಗಳು ಒಂದು ಕಂಪೆನಿಯ ಅಡಿಯಲ್ಲಿ ವಿಚಾರ ಮಂಥನ ನಡೆಸುತ್ತವೆ. ಇನ್ನೂ ನಾವು ಯಾವ ನಿಕ್ಷೇಪವನ್ನು ಮುಟ್ಟಿಲ್ಲ, ಯಾವ ಮಾರ್ಕೆಟ್ ಸೆಗೆ¾ಂಟನ್ನು ಅಲುಗಾಡಿಸಲಿಲ್ಲ, ಹಾಗೂ ಯಾವ ಸೆಗೆ¾ಂಟಿನಲ್ಲಿ ಎಷ್ಟು ಬಳಕೆದಾರರಿದ್ದಾರೆ ಇಂಥವೆಲ್ಲ “ಸ್ಪೈಡರ್ ಚಾರ್ಟ್’ ಅಥವಾ “ಅಪೊರ್ಚುನಿಟಿ ಅನಾಲಿಸಿಸ್’ ತರಹದ ಆಧುನಿಕ ವಿಧಾನ ಬಳಸಿ ಕಂಡುಹಿಡಿಯಲಾಗುತ್ತದೆ. ನಿಕ್ಷೇಪಿಸಿದ ಸೆಗೆ¾ಂಟಿನಲ್ಲಿ ಕಡಿಮೆ ಜನವಿದ್ದರೆ ಹಣವು ಸಾಧ್ಯವಿಲ್ಲ ವಷ್ಟೇ! (ಬೆಲ್ ಕರ್ವ್ ಅನಾಲಿಸಿಸ್‌ನ ಮಧ್ಯಭಾಗದ ಬಳಕೆಯಾಗಬೇಕಷ್ಟೆ). ಆ ಸೆಗೆ¾ಂಟನ್ನು ಪ್ರತಿನಿಧಿಸುವವರು ಬಹಳಷ್ಟು ಪ್ರಸಿದ್ಧರಿದ್ದು ಫ್ಯಾನ್ ಫ‚ೊಲೊವಿಂಗ್ ಇದ್ದರೆ ಒಂದು ಹೊಸ ಸರ್‌ಪ್ರೈಸಿನೊಂದಿಗೆ ಕಾರ್ಯಕ್ರಮದಲ್ಲಿ ಲಾಂಚ್ ಆಗಬಹುದು.
ಊಹಿಸಲಾಗದ ಹೊಸ ನಿಕ್ಷೇಪಗಳ ಹುಡುಕುವಿಕೆ, ಬೇರೆ ಕ್ಷೇತ್ರದಲ್ಲಿ ವಿವಾದದೊಂದಿಗೆ (ವಿವಾದವೇ ಮೂಲ ಆಹಾರ!) ಹೆಸರಾಗಿ ಅಲ್ಲಿ ಸೋತ ವ್ಯಕ್ತಿಗಳಿಗೆ ಮಣೆ, ವಿವಾದಾತ್ಮಕ ನಡೆ, ತಮ್ಮ ವೈಯಕ್ತಿಕ ವಿಷಯದ ಖುಲಾಸೆ, ದಿನ ಬೆಳಗಾದರೆ ಜಗಳ, ಪರಸ್ಪರ ಕೆನ್ನೆ ಕೆನ್ನೆಗೆ ಬಾರಿಸಿಕೊಳ್ಳುವುದು ಇತ್ಯಾದಿಗಳಿಂದ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸಿ ಜನರನ್ನು ಸೆಳೆಯುವುದು ಬಿಗ್‌ಬಾಸ್ ಕಾರ್ಯಕ್ರಮದ ಫಾರ್ಮೇಟ್. (ಇದೊಂದು ಮೈಂಡ್ ಗೇಮ್, ಇದನ್ನು ಆಡಲು ನಿಜವಾಗೂ ತಲೆ ಬೇಕು, ಬಂದವರಿಗೆ ಹಣ-ಜನಪ್ರಿಯತೆ ದೊರಕುತ್ತದೆ, ಕರಿಯರ್‌ನ ಹೊಸದೊಂದು ಅಧ್ಯಾಯ ಪ್ರಾರಂಭವಾಗಬಹುದು ಎನ್ನುವ ವಾದವನ್ನು ತೆಗೆದು ಹಾಕುವಂತಿಲ್ಲ). ಆದರೆ, ನಾವು ಯಾವ ದಾರಿಯನ್ನು ತುಳಿದು ನಮಗೆ ಬೇಕಾದದ್ದನ್ನು ತಮ್ಮದಾಗಿಸಿಕೊಳ್ಳುತ್ತಿದ್ದೇವೆ ಎನ್ನುವುದೂ ಅಷ್ಟೇ ಮುಖ್ಯವಲ್ಲವೇ.
ಈಗ ಮತ್ತೆ ಬಿಗ್‌ಬಾಸ್ ಮನೆಗೆ ಹೋದ ಅನೂಪ್ ಜಲೋಟರನ್ನೇ ತೆಗೆದುಕೊಳ್ಳೋಣ. ಇಲ್ಲಿಯ ಜನರ ಮನದಲ್ಲಿ ಭಕ್ತಿ, ದೇವರು ಭಜನೆ, ಸತ್ಸಂಗ ಇತ್ಯಾದಿಗಳಿಂದ ಎಲ್ಲರ ಮನದ ಪವಿತ್ರ ಸ್ಥಳದಲ್ಲಿ ಕುಂತ ಜಲೋಟ ಈಗ ಬಿಗ್‌ಬಾಸಿನಲ್ಲಿ ಬರುತ್ತಿದ್ದಾರೆ ಎಂದಾಗ ಎಲ್ಲರ ಕುತೂಹಲ ಹೆಚ್ಚಿದ್ದು ಸಹಜ. ಅವರನ್ನು ಇಷ್ಟಪಟ್ಟವರೂ ಮತ್ತು ಇಷ್ಟಪಡದವರೂ ಕುತೂಹಲದಿಂದ ನೋಡುವುದರಿಂದ ಕಾರ್ಯಕ್ರಮಕ್ಕೆ ಹೆಸರು ಮತ್ತು ದುಡ್ಡು ಕೂಡ ಸಹಜವೇ. ಇದಕ್ಕೂ ಶಿಖರವೆನ್ನುವಂತೇ ವಿಚಿತ್ರ ಜೋಡಿ ಹೆಸರಿನಲ್ಲಿ ಜಸ್ಲಿàನಾಳನ್ನು ಕರೆಸಿ “ನನ್ನ ಮತ್ತು ಅವರ ನಡುವೆ ಸಂಬಂಧವಿದೆ’ ಎಂದು ಅವಳಿಂದ ಹೇಳಿಸಿದ್ದು. ಗುರು-ಶಿಷ್ಯರ ಜೋಡಿ ಹೇಗೆ ವಿಚಿತ್ರವಾಗಲು ಸಾಧ್ಯ? ವಿಚಿತ್ರವಾಗುವುದು ಭಜನೆಯ ಸತ್ಸಂಗದ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಯ ಸಂಬಂಧ ಒಂದು “ಬಿ’ ದರ್ಜೆಯ ನಟಿಯ ಜೊತೆಯಿದೆ ಎಂದು ಹೇಳಿದಾಗ. ಇಷ್ಟೂ ಪೂರ್ವ ನಿಯೋಜಿತವಲ್ಲದಿದ್ದರೆ ಒಂದು ಕಾರ್ಯಕ್ರಮದ ಗ್ರಾಫ‚… ಏರುವುದು ಹೇಗೆ? ಜಾಹೀರಾತಿನವರು ಬರುವುದಾದರೂ ಹೇಗೆ?
ಈಗಷ್ಟೇ ಫಾರ್ಮೇಟ್ ಎನ್ನುವ ಪ್ರಸ್ತಾಪ ಬಂತು. ಅದಕ್ಕೆ ತಕ್ಕುದಾದ ಎರಡು ಬೇರೆ ಬೇರೆ ಉದಾಹರಣೆಗಳನ್ನು ಗಮನಿಸೋಣ.ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವು ಒಂದು ರಸಪ್ರಶ್ನೆ ಕಾರ್ಯಕ್ರಮವಷ್ಟೇ (ಕ್ವಿಜ್ ಫಾರ್ಮೇಟ್). ಹಾಗಿದ್ದರೆ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆದ್ದವರು ಇಲ್ಲೂ ಗೆಲ್ಲಬಹುದಿತ್ತು. ಹಾಗೇ ಆಗಿದ್ದರೆ ಪ್ರೇಕ್ಷಕರು ಅಪೂಟು ಇರುವುದಿಲ್ಲ ಎಂದು ಹೊಸದಾಗಿ ಹೇಳಬೇಕಿಲ್ಲ. ಅಂಥವರು ಬಂದರೂ ಮೂರೇ ಪ್ರಶ್ನೆಗೆ ಸೋಲಿಸುವ ವಿಧಾನವೂ ಇಂತಹ ಕಾರ್ಯಕ್ರಮದ ರೂವಾರಿಗಳಿಗೆ ಗೊತ್ತು. ಹಾಗಾಗಿ, ಹೆಚ್ಚಿನ ಜನ (ಪ್ರೇಕ್ಷಕ) ನೋಡಿ ಕಾರ್ಯಕ್ರಮದ ಆಯೋಜಕರು ಹಣ ಗಳಿಸಬೇಕು ಅಂತಾದರೆ ದೇಶದ ಪ್ರತಿಯೊಬ್ಬ ಜನಸಾಮಾನ್ಯನಿಗೂ ನಾನು ಕೋಟಿ ಗಳಿಸಬಹುದು ಎನ್ನುವ ನಂಬಿಕೆ ಹುಟ್ಟಿಸಬೇಕು (ಲಾಟರಿಯ ಇನ್ನೊಂದು ಮುಖ) ಮತ್ತು ಕಾರ್ಯಕ್ರಮದ ಪ್ರವೇಶದ ಹಂತಕ್ಕೆ ಬಂದವನಲ್ಲಿ ಬಡತನ, ಹತ್ತಿರದ ಸಂಬಂಧಿಕರ ಸಾವು ತರಹದ ಸೆಂಟಿಮೆಂಟ್
ಕೊಶಂಟ್ ಹುಡುಕಬೇಕು. ಸ್ವಲ್ಪ$ ಪೆದ್ದುತನ, ಸ್ವಲ್ಪ ಅರೆಮಳ್ಳು ತನ, ಸ್ವಲ್ಪ ಮಟ್ಟಿಗೆ ವಿಲಕ್ಷಣತೆ ಇದ್ದರಂತೂ ಬಹಳ ಹೊತ್ತು ಇಂತಹ ಕಾರ್ಯಕ್ರಮಗಳಲ್ಲಿ ಠಿಕಾಣಿ ಹೂಡಬಹುದು ! ಎರಡನೆಯ ಉದಾಹರಣೆಯಾಗಿ ಈಗ 50 ಓವರಿನ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ ಎಂದು ಅಂದುಕೊಳ್ಳೋಣ. ಒಂದು ಅತ್ಯಂತ ಪ್ರತಿಭಾಶಾಲಿ ಬ್ಯಾಟ್ಸ್ ಮನ್ ಅಥವಾ ಬೌಲರ್ ಮೂಲಕ 25 ಅಥವಾ 30 ಓವರಿನೊಳಗೆ ಮ್ಯಾಚ್ ಮುಗಿದು ಹೋದರೆ ಮತ್ತು ಇದೇ ರೀತಿ ನಾಲ್ಕಾರು ಮ್ಯಾಚ್‌ಗಳು ನಡೆದರೆ ಅಲ್ಲಿರುವ ಹತ್ತು ತಾಸು ಬ್ರಾಡ್‌ಕಾಸ್ಟ್ ಸಮಯ ಖರೀದಿಸಿದ ಚಾನಲ್‌ಗಳು ಏನು ಮಾಡಬೇಕು. ಇದೇ ರೀತಿ ಮುಂದುವರಿದರೆ ಒಂದೋ ಫಾರ್ಮೇಟ್ ಬದಲಿಸಬೇಕು ಅಥವಾ ಇವಕ್ಕೆ ಪ್ಲಾನ್ “ಬಿ’ ತಯಾರಿರಬೇಕು. ಇವ್ಯಾವುದೂ ಆಗಿಲ್ಲವೆಂದರೆ ಈ ಸೂತ್ರಧಾರ ಎಲ್ಲ ಹಂತದಲ್ಲೂ ವಿಚಾರ ಮಾಡಿ ಆ ಆಟಗಾರನನ್ನು ಯಾವುದಾದರೊಂದು ವಿವಾದಕ್ಕೆ ಸಿಲುಕಿಸಿ ಮನೆಯಲ್ಲೂ ಕೂಡ್ರಿಸಬಹುದು. ಸೂತ್ರಧಾರನಿಗೆ ಮೊದಲ ಬಾಲಿನಿಂದ 49.5 ಓವರಿನವರೆಗೂ ರೋಚಕವಾಗಿರಬೇಕು. ಕೊನೆಯ ಸೆಕೆಂಡಿನವರೆಗೂ ನೋಟಕರನ್ನು ಹಿಡಿದಿಟ್ಟುಕೊಳ್ಳಬೇಕೇ ಹೊರತೂ ಆಟಗಾರನ ವೈಯಕ್ತಿಕ ಪ್ರತಿಭೆಗೆ ಆದ್ಯತೆ ಇಲ್ಲ. ಇದ್ದರೂ ತನ್ನ ಫಾರ್ಮೇಟ್‌ಗೆ ಹೊಂದಿರಬೇಕು (ಇವು ಎಲ್ಲ ನಡೆಗೂ ಅನ್ವಯವಾಗುತ್ತದೆ ಎಂದಲ್ಲ). ಹಾಗಾದರೆ, ಈ ಅಗೋಚರ ಸೂತ್ರಧಾರನದೇ ಎಲ್ಲ ತಪ್ಪೇ? ಇದೂ ಅಸಾಧ್ಯದ ಮಾತು. ಸಂಸ್ಕಾರ, ಇಮೇಜ್, ಸಂಸ್ಕೃತಿ, ಸರಿ-ತಪ್ಪು , ಆತ್ಮಸಾಕ್ಷಿಗಳ ಬಗ್ಗೆ ಭಾಗವಹಿಸುವವರು ತಲೆಕೆಡಿಸಿಕೊಳ್ಳಬೇಕೇ ಹೊರತು ಕಾರ್ಯಕ್ರಮದ ಆಯೋಜಕರಲ್ಲ! ಏಕತಾನತೆಯನ್ನು ಮುರಿದು (ಸರಿ-ತಪ್ಪಿನ ವಿಭಾಗದಿಂದಲ್ಲ) ಅಸಂಬಂಧಗಳ ಸಂಬಂಧ ಹುಡುಕಿ ಜನರಲ್ಲಿ ಕೌತುಕ ಹುಟ್ಟಿಸಿ ಕಾರ್ಯಕ್ರಮವನ್ನು ಗೆಲ್ಲಿಸಬೇಕಾಗಿದೆಯೇ ಹೊರತೂ ಆದರ್ಶ ದಂಪತಿಗಳಿಗೆ ಜೀವಮಾನ ಪ್ರಶಸ್ತಿಯನ್ನು ಇಂತಹ ಕಾರ್ಯಕ್ರಮಗಳು ಕೊಡುವುದಿಲ್ಲ. ಸ್ವಲ್ಪಮಟ್ಟಿಗೆ ವಿಲಕ್ಷಣತೆ, ಹರುಕುತನದ ಸುಳಿವಿನಿಂದಲೇ ಈ ಕಾರ್ಯಕ್ರಮದವರು ಉಪಾಯದಿಂದ ಸಣ್ಣ ಕಲ್ಲೊಂದನ್ನು ಗುರಿ ಇಟ್ಟಿದ್ದಂತೂ ಹೌದು. ಅದಕ್ಕೆ ಜಲೋಟ ಬಿದ್ದಿದ್ದೂ ಹೌದು. ಹಾಗಾಗಿ, ನನಗೆ ಗೊತ್ತಿರಲಿಲ್ಲ ಎನ್ನುವುದನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಪ್ರಶ್ನೆ ಹುಟ್ಟುವುದು ಸಹಜ ಕೂಡ. ಅವರ 50 ವರ್ಷದ ಭಜನೆ-ಸತ್ಸಂಗ ಸ್ವಲ್ಪವೂ ಸಂಸ್ಕಾರ ಕೊಡಲಿಲ್ಲವೆ? ಯಾವುದನ್ನು ಕೊಟ್ಟರೂ ಅದನ್ನು ಹಾಡುವುದು ನನ್ನ ವೃತ್ತಿ ಎನ್ನುವುದು ಸಮಂಜಸದ ಉತ್ತರವೆ? ಹಾಗಿದ್ದರೆ ಮದ್ಯದಂಗಡಿ, ರಿಯಲ್ ಎಸ್ಟೇಟ್ ಏಜನ್ಸಿ, ಲೇಡೀಸ್ ಬಾರಿನಲ್ಲಿರುವ ದೊಡ್ಡ ದೇವರ ಫೊಟೊ ಮತ್ತು ಅದರ ಪೂಜೆಗೆ ನಿಂತ ಭಜಕರನ್ನು ನೋಡಿ ಏನು ಹೇಳಬೇಕು? ವರ್ಷವಿಡಿ ಕೆಟ್ಟದ್ದಕ್ಕೇ ಬಳಕೆಯಾದ ಉದ್ದ ಕತ್ತಿ, ಚಿಕ್ಕ ಪಿಸ್ತೂಲ್ ಆಯುಧ ಪೂಜೆಗೆ ಪೀಠ ಸೇರಿದರೆ? ಸರಿ-ತಪ್ಪು , ಒಳ್ಳೆಯದು-ಕೆಟ್ಟದ್ದು ಒಟ್ಟೊಟ್ಟಿಗೆ ಪ್ರೀತಿಯಿಂದಲೇ ಬದುಕುತ್ತಿರುವುದೇ ನಿಯಮ ಎನ್ನಬೇಕೆ! ಜಲೋಟರವರ ಮೂರು ಗಂಟೆಯ ಭಜನಾ ಕಾರ್ಯಕ್ರಮದಲ್ಲಿ ಜನರನ್ನು ಎಂಗೇಜ್ ಇಡಲು ಅಲ್ಲಲ್ಲಿ ತಮಾಷೆ ಮಾತನಾಡುವುದಿದೆ. ಆಗಲೂ ಅವರ ಮೂಲ ಸ್ವಭಾವದ ಸಣ್ಣ ಎಳೆ ಕಾಣುತ್ತದೆ. ಬೆಳಗಿನಿಂದ ಸಾಯಂಕಾಲದವರೆಗೆ ದೇವಸ್ಥಾನದ ಎದುರು ಒಬ್ಬ ಭಿಕ್ಷುಕ ಬೇಡುತ್ತಿದ್ದಾನೆ. ಎರಡು-ಮೂರು ರೂಪಾಯಿಯೂ ಆಗಲಿಲ್ಲ. ನಂತರ ಬಹಳ ಬೇಜಾರಾಗಿ ಹತ್ತಿರದ ಸಾರಾಯಿ ಮತ್ತು ಎಲ್ಲ ಎರಡನೆಯ ದಂಧೆ ನಡೆಸುವ ಬೀದಿಗೆ ಬಂದು ಅಲ್ಲಿ ಬೇಡಲು ಪ್ರಾರಂಭಿಸುತ್ತಾನೆ. ಕೇವಲ ಒಂದೆರಡು ಗಂಟೆಗಳಲ್ಲಿ ನಲವತ್ತು-ಐವತ್ತು ರೂಪಾಯಿ ಕಲೆ ಹಾಕುತ್ತಾನೆ. ಬೇಡುವವನಿಗೆ ಆಶ್ಚರ್ಯವಾಗಿ ಆಕಾಶಕ್ಕೆ ಮುಖಮಾಡಿ ದೇವರಲ್ಲಿ ಕೇಳುತ್ತಾನೆ, “ದೇವರೆ ನೀನು ಹೀಗೆ ಮಾಡಬಹುದೆ… ನೀನು ಕೊಟ್ಟ ವಿಳಾಸ ಯಾವುದು ಮತ್ತು ನೀನು ಇರುವುದೆಲ್ಲಿ?’ ಎಂದು. – ಸಚ್ಚಿದಾನಂದ ಹೆಗಡೆ