Advertisement

ಸೀಟಿನಂಚಿಗೆ ದೂಡುವ ಅನುಕ್ತ ಅನುಭವ

05:40 AM Feb 03, 2019 | |

“ರಹಸ್ಯ ಭೇದಿಸೋಕೆ ಚಾಣಕ್ಯನ ಬುದ್ಧಿವಂತಿಕೆ ಬೇಕಾಗಿಲ್ಲ. ಭೇದಿಸೋ ಕಲೆ ಗೊತ್ತಿರಬೇಕು…’ ಮಫ್ಲರ್‌ ಹಾಕಿಕೊಂಡು ಕೆಲ ತಿಂಗಳಿನಿಂದ ತನ್ನನ್ನೇ ಹಿಂಬಾಲಿಸುತ್ತಿರುವ ಅಪರಿಚಿತ ವ್ಯಕ್ತಿಯ ಮಾತುಗಳನ್ನು ಕೇಳುತ್ತಿದ್ದಂತೆ, ಕೊಲೆಯ ತನಿಖೆಗಾಗಿ ಬಂದಿರುವ ಸಿಸಿಬಿಯ ದಕ್ಷ ಪೊಲೀಸ್‌ ಅಧಿಕಾರಿ ಕಾರ್ತಿಕ್‌ ಕಶ್ಯಪ್‌ ತನಿಖೆಯ ದಿಕ್ಕೂ ಬದಲಾಗುತ್ತದೆ. ಯಾವುದೋ ಕೊಲೆಯ ತನಿಖೆಗೆ ಬಂದ ಕಾರ್ತಿಕ್‌ ಕಶ್ಯಪ್‌ಗೆ ಇದು ತನ್ನ ಬದುಕಿಗೆ ಸಂಬಂಧಿಸಿದ್ದಾ ಎಂಬ ಅನುಮಾನ ಶುರುವಾಗುತ್ತದೆ.

Advertisement

ಮನಸ್ಸು “ಒಂದೊಂದೆ ರಹಸ್ಯಗಳು ಬಿಚ್ಚಿಕೊಳ್ತಾ ಇದೆ. ಯಾವುದು ಸತ್ಯ, ಯಾವುದು ಸುಳ್ಳು ಒಂದೂ ಗೊತ್ತಾಗ್ತಿಲ್ಲ’ ಎನ್ನುವುದನ್ನು ಹೇಳಲು ಶುರು ಮಾಡುತ್ತದೆ. ಹಾಗಾದರೆ ನಿಗೂಢ ಕೊಲೆಯ ತನಿಖೆಗಾಗಿ ಬಂದ ಕಾರ್ತಿಕ್‌ ಕಶ್ಯಪ್‌ ಮುಂದೆ , ಒಂದರ ಹಿಂದೊಂದು ಬಿಚ್ಚಿಕೊಳ್ಳುವ ಆ ರಹಸ್ಯವೇನು? ಅವನು ಆ ರಹಸ್ಯವನ್ನು ಭೇದಿಸುತ್ತಾನಾ? ಅಂತಿಮವಾಗಿ ಇದಕ್ಕೆಲ್ಲ ಉತ್ತರ ಏನು? ಅದನ್ನೆಲ್ಲ ತಿಳಿದುಕೊಳ್ಳಬೇಕಾದರೆ, ಈ ವಾರ ತೆರೆಗೆ ಬಂದಿರುವ “ಅನುಕ್ತ’ ಚಿತ್ರವನ್ನು ನೋಡಬಹುದು. 

ಕರಾವಳಿ ಸಂಸ್ಕೃತಿ, ಸೊಗಡು ಜೊತೆಗೊಂದು ಸಸ್ಪೆನ್ಸ್‌ ಕ್ರೈಂ ಸ್ಟೋರಿ, ಅದನ್ನು ಅಚ್ಚುಕಟ್ಟಾಗಿ ದೃಶ್ಯ ರೂಪಕ್ಕಿಳಿಸಿರುವುದು  “ಅನುಕ್ತ’ ಚಿತ್ರದ ಜೀವಾಳ. ಚಿತ್ರದ ಕಥೆ ಚೆನ್ನಾಗಿದ್ದರೂ, ಚಿತ್ರದ ನಿರೂಪಣೆ, ಕೆಲವು ಪಾತ್ರಗಳ ಅಸಮರ್ಪಕ ನಿರ್ವಹಣೆ ಚಿತ್ರದ ಕುತೂಹಲ ಭರಿತ ಓಟಕ್ಕೆ ಆಗಾಗ್ಗೆ ಬ್ರೇಕ್‌ ಹಾಕುತ್ತಿರುತ್ತದೆ. ಚಿತ್ರಕಥೆ ಕೊಂಚ ಬಿಗಿಯಾಗಿದ್ದರೆ, ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿ ಬರುವ ಸಾಧ್ಯತೆ ಇತ್ತು. ಇನ್ನು ತಾಂತ್ರಿಕವಾಗಿ ಹೇಳುವುದಾದರೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ಸ್‌.

ಸಂಕಲನ ಕಾರ್ಯ ಇನ್ನೂ ಮೊನಚಾಗಿದ್ದರೆ ಚಿತ್ರದ ಅಂದ ಕೂಡ ಹೆಚ್ಚಾಗುತ್ತಿತ್ತು. ಒಟ್ಟಾರೆ ಕೆಲವೊಂದಷ್ಟು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡುವುದಾದರೆ, “ಅನುಕ್ತ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಅಚ್ಚುಕಟ್ಟಾಗಿ ನಿರ್ಮಿಸಿರುವ ಚಿತ್ರ. ಮನರಂಜಿಸುವ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಾಮೂಲಿ ಚಿತ್ರಗಳಿಗಿಗಿಂತ ಭಿನ್ನವಾಗಿರುವ, ಹೊಸಥರದ ಚಿತ್ರಗಳನ್ನು ಬಯಸುವ ಪ್ರೇಕ್ಷಕರು ಒಮ್ಮೆ ತೆರೆಮೇಲೆ “ಅನುಕ್ತ’ ನೋಡಿಬರಲು ಅಡ್ಡಿ ಇಲ್ಲ. 

ಚಿತ್ರದ ನಾಯಕ ಕಾರ್ತಿಕ್‌ ಅತ್ತಾವರ್‌ ತಮ್ಮ ಲುಕ್‌ನಲ್ಲಿ ಇಷ್ಟವಾದಷ್ಟು, ಅಭಿನಯದಲ್ಲಿ ಇಷ್ಟವಾಗುವುದಿಲ್ಲ. ನಾಯಕಿ ಸಂಗೀತಾ ಭಟ್‌ ಅವರದ್ದು ಪರಾÌಗಿಲ್ಲ ಎನ್ನಬಹುದಾದ ಅಭಿನಯ. ಅದನ್ನು ಹೊರತುಪಡಿಸಿದರೆ ಸಂಪತ್‌ ರಾಜ್‌, ಕೆ.ಎಸ್‌ ಶ್ರೀಧರ್‌ ಪಾತ್ರಗಳು ಗಮನ ಸೆಳೆಯುತ್ತವೆ. ಅನು ಪ್ರಭಾಕರ್‌ ಅವರದ್ದು ಚಿಕ್ಕ ಮತ್ತು ಚೊಕ್ಕ ಪಾತ್ರ. ಉಳಿದಂತೆ ಕೆಲವು ಪಾತ್ರಗಳು, ಕಲಾವಿದರದ್ದು ಆಟಕ್ಕುಂಟು ಲೆಕ್ಕಕ್ಲಿಲ್ಲ ಎನ್ನುವ ಅಭಿನಯವಾಗಿದ್ದರಿಂದ ಅವುಗಳ ಬಗ್ಗೆ ಹೆಚ್ಚು ಮಾತನಾಡುವಂತಿಲ್ಲ. 

Advertisement

ಚಿತ್ರ: ಅನುಕ್ತ
ನಿರ್ದೇಶನ: ಅಶ್ವತ್‌ ಸ್ಯಾಮುಯೆಲ್‌
ನಿರ್ಮಾಣ: ಹರೀಶ್‌ ಬಂಗೇರಾ
ತಾರಾಗಣ: ಕಾರ್ತಿಕ್‌ ಅತ್ತಾವರ್‌, ಸಂಗೀತಾ ಭಟ್‌, ಸಂಪತ್‌ ರಾಜ್‌, ಅನು ಪ್ರಭಾಕರ್‌, ಕೆ.ಎಸ್‌ ಶ್ರೀಧರ್‌, ಉಷಾ ಭಂಡಾರಿ ಮತ್ತಿತರರು. 

* ಜಿ.ಎಸ್‌ ಕಾರ್ತಿಕ ಸುಧನ್‌ 

Advertisement

Udayavani is now on Telegram. Click here to join our channel and stay updated with the latest news.

Next