Advertisement

ಯಕ್ಷಗಾನ ರಂಗದಲ್ಲಿ ಬಾಲಕ ಅನುಜಿತ್‌ ಸಾಧನೆ

10:47 PM Feb 19, 2020 | Sriram |

ಕರಾವಳಿ ಕರ್ನಾಟಕದ ಯಕ್ಷಗಾನ ಒಂದು ಅದ್ಭುತ ಕಲೆ. ಸಾಹಿತ್ಯ, ಸಂಗೀತ, ವೇಷಭೂಷಣ ಸೇರಿದಂತೆ ಪ್ರತಿಯೊಂದು ಕಲೆ ಯಕ್ಷಗಾನದಲ್ಲಿದೆ. ಇಂತಹ ಪರಿಪೂರ್ಣ ಕಲೆಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಂಡಿದ್ದಾರೆ ಎಳ್ಳಾರೆಯ ಅನುಜಿತ್‌ ನಾಯಕ್‌ರವರು.

Advertisement

ಹೆಬ್ರಿ ಅಮೃತ ಭಾರತಿ ವಿದ್ಯಾಲಯದಲ್ಲಿ 9ನೇ ತರಗತಿ ಶಿಕ್ಷಣವನ್ನು ಪಡೆಯುತ್ತಿರುವ ಇವರು ಯಕ್ಷಲೋಕ ಹೆಬ್ಬೇರಿಯಲ್ಲಿ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ. ಅಜ್ಜ ಕಾಳಿಂಗ ನಾವಡ ಪ್ರಶಸ್ತಿ ವಿಜೇತ ಭಾಗವತರಾದ ಎಳ್ಳಾರೆ ವೆಂಕಟ್ರಾಯ ನಾಯಕ್‌ ಹಾಗೂ ತಮ್ಮ ಅಣ್ಣ ಮುಂಬೈ ಯಕ್ಷರಂಗದ ಶ್ರೇಷ್ಠ ಯುವ ಕಲಾವಿದ ಪೂರ್ಣಾನಂದ ನಾಯಕ್‌ರಿಂದ ಪ್ರೇರಣೆಗೊಂಡ ಅನುಜಿತ್‌ ಯಕ್ಷಗಾನದಲ್ಲಿ ಸಾಧನೆ ಮಾಡಿದ್ದಾರೆ.

ಯಕ್ಷ ರಂಗದಲ್ಲಿ ಸಾಧನೆ ಮಾಡಿರುವ ಎಳ್ಳಾರೆ ಶಂಕರ್‌ ನಾಯಕ್‌ರವರಿಂದ ಯಕ್ಷ ನಾಟ್ಯವನ್ನು ಕಲಿತಿದ್ದಾರೆ. ಕಾರ್ಕಳ ತಾಲೂಕಿನ ಪುಟ್ಟ ಗ್ರಾಮವಾದ ಎಳ್ಳಾರೆಯಲ್ಲಿ ಜನಿಸಿದ ಅನುಜಿತ್‌ ರವರು ತಮ್ಮ ಯಕ್ಷವೈಭವ ಮಕ್ಕಳ ಮೇಳ ಮುಂಬೈಯ ಯಕ್ಷಗಾನ ಕಾರ್ಯಕ್ರಮದಲ್ಲಿ ಬಾಲಗೋಪಾಲನಾಗಿ ಗೆಜ್ಜೆಕಟ್ಟಿದ ಇವರು ನಂತರ ಯಕ್ಷಲೋಕ ಹೆಬ್ರಿ ಸಂಸ್ಥೆಯಲ್ಲಿ ಅದ್ಭುತ ಪಾತ್ರವಾದ ಅಭಿಮನ್ಯು ಪಾತ್ರದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.

ಯಕ್ಷಗಾನದ ಸ್ತ್ರೀ ವೇಷದಲ್ಲಿಯೂ ಜನಮನ ಗೆದ್ದಿದ್ದಾರೆ. ಉಡುಪಿ ಜಿಲ್ಲೆಯ ವಿವಿಧೆಡೆ ಪ್ರದರ್ಶನ ನೀಡಿರುವ ಇವರು ಮಂಬೈಯಲ್ಲಿಯು ಯಕ್ಷಗಾನ ಪ್ರದರ್ಶನದಲ್ಲಿ ಪಾಲ್ಗೊಂಡು ಸುಧನ್ವ ಪಾತ್ರ ಮಾಡಿದ್ದಾರೆ. ಯಕ್ಷಗಾನದ ವಿವಿಧ ಪಾತ್ರಗಳ ನಡುವೆ ಭಾಗವತಿಕೆಯನ್ನು ಕಲಿತಿದ್ದಾರೆ.

ಯಕ್ಷಗಾನದ ಪ್ರಮುಖ ವಾದನವಾದ ಚೆಂಡೆ ಹಾಗೂ ಮದ್ದಳೆಯನ್ನು ಗಣೇಶ್‌ ಶೆಣೈ ಶಿವಪುರ ಇವರಲ್ಲಿ ಕಲಿತು ಮುಂಬೈ, ಹೆಬ್ರಿ, ಮಣಿಪಾಲ, ಎಳ್ಳಾರೆ ಮುಂತಾದ ಕಡೆ ಪ್ರದರ್ಶನ ನೀಡಿ ಕಲಾ ಪ್ರೌಢಿಮೆಯನ್ನು ಮೆರೆದಿದ್ದಾರೆ. ಇವರ ಯಕ್ಷಗಾನ ಕಲಾ ಆಸಕ್ತಿಯನ್ನು ಮೆಚ್ಚಿ ಇವರಿಗೆ ಯಕ್ಷವೈಭವ ಮಕ್ಕಳ ಮೇಳ ಮುಂಬಯಿಯ ವಾರ್ಷಿಕೋತ್ಸವದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ.

Advertisement

ಪ್ರಮುಖ ಕಲೆಯಾಗಿರುವ ಯಕ್ಷಗಾನದಿಂದ ಯುವ ಸಮುದಾಯ ದೂರವಾಗುತ್ತಿರುವ ಈ ಸಮಯದಲ್ಲಿ ಯಕ್ಷಗಾನದ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಈ ಪುಟ್ಟ ಬಾಲಕ ಮಾದರಿಯಾಗಿದ್ದಾರೆ. ಇವರು ಎಳ್ಳಾರೆಯ ಶ್ರೀನಿವಾಸ್‌ ನಾಯಕ್‌ ಮತ್ತು ಜ್ಯೋತಿ ನಾಯಕ್‌ ದಂಪತಿಯ ಪುತ್ರರಾಗಿದ್ದಾರೆ.

ಬಾಲ್ಯದಿಂದಲೂ ಯಕ್ಷಗಾನದ ಮೇಲೆ ಅನುಜಿತ್‌ನಿಗೆ ಕಾಳಜಿ ಇದ್ದು ಯಕ್ಷಗಾನದ ನಾಟ್ಯ, ಭಾಗವತಿಕೆ ಚೆಂಡೆ, ಮದ್ದಳೆಗಳನ್ನು ಕಲಿತಿದ್ದಾನೆ. ಶಿಕ್ಷಣದ ಜತೆಗೆ ಯಕ್ಷಗಾನ ಕಲಿಯುವಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ.
-ಶ್ರೀನಿವಾಸ್‌ ನಾಯಕ್‌

- ಜಗದೀಶ್‌, ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next