ಕೋಲ್ಕತಾ: ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಅನುಬ್ರತಾ ಮಂಡಲ್ ಇಂದು ಸಾವಿರ ಕೋಟಿ ರೂಪಾಯಿ ಆಸ್ತಿಗಳ ಒಡೆಯನನ್ನಾಗಿ ಮಾಡಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಿಜೆಪಿ ಸಂಸದ ದಿಲೀಪ್ ಘೋಷ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ: ಲೋಕಾಯುಕ್ತಕ್ಕೆ ಮತ್ತೆ ಪವರ್
ಗುರುವಾರ (ಆಗಸ್ಟ್ 11) ಬಿರ್ಭ್ಯೂಮ್ ಟಿಎಂಸಿ ಜಿಲ್ಲಾಧ್ಯಕ್ಷ ಅನುಬ್ರತಾ ಮಂಡಲ್ ನಿವಾಸದ ಮೇಲೆ ಸಿಬಿಐ ಸುಮಾರು ನೂರು ಮಂದಿ ಸಿಆರ್ ಪಿಎಫ್ ಯೋಧರ ಭದ್ರತೆಯೊಂದಿಗೆ ದಾಳಿ ನಡೆಸಿತ್ತು. ಇದರೊಂದಿಗೆ ಮಮತಾ ಬ್ಯಾನರ್ಜಿಯ ಮತ್ತೊಬ್ಬ ಆಪ್ತ, ಪ್ರಭಾವಿ ಮುಖಂಡನ ಬಂಡವಾಳ ಬಯಲಾದಂತಾಗಿದೆ ಎಂದು ವರದಿ ವಿವರಿಸಿದೆ.
ದಾಳಿ ನಡೆದ ಕೂಡಲೇ ಅನುಬ್ರತಾ ಮಂಡಲ್ ದೇವರ ಕೋಣೆಯೊಳಗೆ ಹೋಗಿ ಅಡಗಿ ಕುಳಿತಿದ್ದು, ಸಿಬಿಐ ಅಧಿಕಾರಿಗಳು ಆತನನ್ನು ಹೊರಗೆ ಎಳೆದು ತಂದಿದ್ದರು. ಈ ವೇಳೆ ಸಿಆರ್ ಪಿಎಫ್ ಯೋಧರು ಮನೆಯ ಸುತ್ತ ಕಾವಲು ನಿಂತಿದ್ದರು. ಈ ಪ್ರದೇಶದಲ್ಲಿ ಭಾರೀ ಪ್ರಭಾವಶಾಲಿಯಾಗಿದ್ದ ಮಂಡಲ್ ನಿವಾಸದ ಮೇಲೆ ದಾಳಿ ನಡೆಯುತ್ತಿದ್ದಂತೆಯೇ ಇಂದು ಮನೆಯ ಸುತ್ತ ಯಾರೊಬ್ಬರೂ ಅನುಯಾಯಿಯೂ ಕಾಣಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.
ಬಿರ್ಭ್ಯೂಮ್ ನ “ಬಾಹುಬಲಿ” ಮುಖಂಡ ಮಂಡಲ್ ನನ್ನು ಬೋಲ್ಪುರ್ ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ಹಿಂದೆ ಹತ್ತು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಕೂಡಾ ಕೇವಲ ಒಂದು ಬಾರಿ ಮಾತ್ರ ಮಂಡಲ್ ವಿಚಾರಣೆಗೆ ಹಾಜರಾಗಿದ್ದು, ತನಿಖೆಗೆ ಸಹಕರಿಸದ ಆರೋಪದ ಮೇಲೆ ಇಂದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.