Advertisement

ನಾಳೆಯಿಂದ ಅನುಭವ ಮಂಟಪ ಉತ್ಸವ

11:50 AM Nov 24, 2017 | Team Udayavani |

ಕಲಬುರಗಿ: ಬಸವಾದಿ ಶರಣರ ಕರ್ಮಭೂಮಿ ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನ. 25, 26ರಂದು 38ನೇ ಶರಣ ಕಮ್ಮಟವಾಗಿರುವ ಅನುಭವ ಮಂಟಪ ಉತ್ಸವ ಆಯೋಜಿಸಲಾಗಿದೆ.

Advertisement

37 ವರ್ಷಗಳ ಹಿಂದೆ ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂ| ಡಾ| ಚನ್ನಬಸವ ಪಟ್ಟದ್ದೇವರು ಪ್ರಾರಂಭಿಸಿರುವ ಅನುಭವ ಮಂಟಪ ಉತ್ಸವಕ್ಕೆ ಈಗ 38 ವರ್ಷಗಳು ತುಂಬಿವೆ. ವರ್ಷಂಪ್ರತಿ ಶರಣ ಕಮ್ಮಟ ಆಯೋಜಿಸುತ್ತಾ ಬರಲಾಗಿದೆ. ಈ ಬಾರಿ ಕಮ್ಮಟದಲ್ಲಿ ವಚನ ಸ್ಪರ್ಧೆ, ವಚನ ಭಜನೆ ಸ್ಪರ್ಧೆಯಲ್ಲದೇ ಡಾ| ಚನ್ನಬಸವ ಪಟ್ಟದ್ದೇವರ ಅನುಭವ
ಮಂಟಪ, ವಚನ ಸಾಹಿತ್ಯ-ಶರಣ ಸಂದೇಶ ಮೈಗೂಡಿಸಿಕೊಂಡಿರುವ ಶರಣ-ಶರಣೆಯರಿಗೆ ಗೌರವ ಸಮ್ಮಾನ, ಕೃತಿಗಳ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ, ಬಸವಕಲ್ಯಾಣ ವಿಶ್ವ ಬಸವಧರ್ಮ ಟ್ರಸ್ಟ್‌ ಅನುಭವ ಮಂಪಟದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಲ್ಯಾಣದಲ್ಲಿರುವ ಅನುಭವ ಮಂಪಟ ಆವರಣದಲ್ಲಿ ಎಡೆಯೂರು ಹಾಗೂ ಗದಗ-ಡಂಬಳ ಜಗದ್ಗುರು ಡಾ| ಸಿದ್ದಲಿಂಗ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ, ಹಾರಕೂಡನ ಡಾ| ಚನ್ನವೀರ ಶಿವಾಚಾರ್ಯರು, ಶ್ರೀಶೈಲ ಸುಲಫ‌ಲ ಮಠದ
ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ನೇತೃತ್ವದಲ್ಲಿ ನ. 25ರಂದು ಬೆಳಗ್ಗೆ 10ಗಂಟೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉತ್ಸವ ಉದ್ಘಾಟಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌, ಸಚಿವರಾದ ಪ್ರಿಯಾಂಕ್‌ ಖರ್ಗೆ, ಈಶ್ವರ ಖಂಡ್ರೆ, ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಹಾಜರಿರುವರು. ಶಾಸಕರಾದ ಮಲ್ಲಿಕಾರ್ಜುನ ಖೂಬಾ, ವಿಜಯಸಿಂಗ್‌ ಗ್ರಂಥಗಳನ್ನು ಬಿಡುಗಡೆ ಮಾಡುವರು.

ಮೂರು ದಿನಗಳ ಕಾಲ ನಿರಂತರವಾಗಿ ವಿವಿಧ ಗೋಷ್ಠಿಗಳು, ಚಿಂತನಾ ಸಭೆಗಳು ನಡೆಯಲಿವೆ. ಪ್ರತಿಯೊಂದು ವಿಚಾರ ಗೋಷ್ಠಿಯಲ್ಲಿಯೂ ಪರಿಣಿತರು ವಿಚಾರ ಮಂಡಿಸಲಿದ್ದಾರೆ. ಬೇಲೂರಿನ ಶಿವಕುಮಾರ ಸ್ವಾಮೀಜಿ, ಬಸವಬೆಳವಿಯ ಶರಣಬಸವ ಸ್ವಾಮೀಜಿ, ರಾಜೂರು ಸಂಸ್ಥಾನಮಠದ ಶಿವಲಿಂಗ ಶಿವಾಚಾರ್ಯರು, ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಬಸವ ಮೃತ್ಯುಂಜಯ ಸ್ವಾಮೀಜಿ, ಕೋರಣೇಶ್ವರ ಸ್ವಾಮೀಜಿ, ಅಕ್ಕ ಅನ್ನಪೂರ್ಣ ತಾಯಿ, ಶಿವಾನಂದ ಸ್ವಾಮೀಜಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಕನ್ನಡ-ಮರಾಠಿ 18 ಕೃತಿಗಳ ಲೋಕಾರ್ಪಣೆ: ವಚನಗಳನ್ನು ಪ್ರಚಾರ ಮಾಡಲು ಅನುಭವ ಮಂಪಟ ಪ್ರಕಟಣೆ ವಿಭಾಗ ಆರಂಭಿಸಲಾಗಿದೆ. ಅದರ ಮೂಲಕ ಹಲವು ಕೃತಿಗಳನ್ನು ಪ್ರಕಟಿಸಲಾಗಿದೆ. ಈ ಸಲದ ಉತ್ಸವದಲ್ಲಿ ಕನ್ನಡ ಮತ್ತು ಮರಾಠಿಯಲ್ಲಿ ಪ್ರಕಟಿಸಿರುವ 18 ಕೃತಿಗಳನ್ನು ಪ್ರಕಟಿಸಲಾಗಿದ್ದು, ಅವನ್ನು ಲೋಕಾರ್ಪಣೆ ಮಾಡಲಾಗುವುದು. ಕಲಬುರಗಿಯ ಕಾಯಕ ಫೌಂಡೇಷನ್‌ ಹೈಸ್ಕೂಲ್‌ ಮತ್ತು ಕಾಲೇಜಿನ ಸಹಯೋಗದಲ್ಲಿ ವಚನ ಭಜನೆ ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಲಿದೆ.

Advertisement

ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ: ಅನುಭವ ಮಂಟಪ ಉತ್ಸವ ನಿಮಿತ್ತ ರಾಜ್ಯಮಟ್ಟದ ವಚನ ಕಂಠ ಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾಲ್ಕಿಯ ಚನ್ನಬಸವ ಗುರುಕುಲದ ವಿದ್ಯಾರ್ಥಿನಿ ಪ್ರಾರ್ಥನಾ ಸಂಗಪ್ಪ ಸೋಲಪುರೆ 413 ವಚನಗಳನ್ನು ಹೇಳುವ ಮೂಲಕ ಪ್ರಥಮ ಸ್ಥಾನ ಪಡೆದರು. ತೆಲಂಗಾಣದ ಅಂಬಿಕಾ ದತ್ತುರಾವ್‌ ದ್ವಿತೀಯ ಹಾಗೂ ಬೆಳಗಾವಿಯ ಈರಮ್ಮ ಪಟ್ಟೇದ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸುಶೀಲಾದೇವಿ ಸ್ಮರಣೆಯಲ್ಲಿ ವಿಜೇತರಿಗೆ ಕ್ರಮವಾಗಿ 10 ಸಾ.ರೂ., 5 ಸಾ.ರೂ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಾಬು ವಾಲಿ, ವಿಶ್ವ ಬಸವ ಧರ್ಮ ಟ್ರಸ್ಟ್‌ ಅನುಭವ ಮಂಟಪ ನಿರ್ದೇಶಕರಾದ ಶಿವರಾಜ ಪಾಟೀಲ, ಡಾ| ಕುಪೇಂದ್ರ ಪಾಟೀಲ, ಎಸ್‌.ಎಸ್‌.ಹಿರೇಮಠ, ಪ್ರಮಖರಾದ ವಿಜಯಕುಮಾರ ಪಾಟೀಲ, ಜಗದೀಶ ಪಾಟೀಲ, ವಿರೇಶ ಮಾಲಿಪಾಟೀಲ ಇದ್ದರು. 

ಸುಲಫ‌ಲ ಶ್ರೀಗಳಿಗೆ ಅನುಭವ ಮಂಟಪ ಪ್ರಶಸ್ತಿ
ಡಾ| ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿಗೆ ಕಲಬುರಗಿಯ ಸುಲಫ‌ಲ ಮಠದ ಹಾಗೂ ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಆಯ್ಕೆ ಮಾಡಲಾಗಿದೆ. ಸಂಶೋಧಕ ಡಾ| ಎಂ.ಎಂ.ಕಲಬುರ್ಗಿ ಸ್ಮಾರಕ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಗೆ ಭಾಷಾ ತಜ್ಞರಾದ ಸಂಶೋಧಕ ಗಣೇಶ ದೇವಿ ಅವರನ್ನು ಆಯ್ಕೆ ಮಾಡಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಸುಲಫ‌ಲ ಶ್ರೀಗಳಿಗೆ, ಸಮಾರೋಪದಲ್ಲಿ ಡಾ| ಗಣೇಶ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ವಚನ ವಿವಿ ಕಾರ್ಯೋನ್ಮುಖವಾಗಲಿ
ಬಸವಕಲ್ಯಾಣ ಅಂತಾರಾಷ್ಟ್ರೀಯ ಕೇಂದ್ರವಾಗಬೇಕೆಂಬ ಸದುದ್ದೇಶದಿಂದ ಅನುಭವ ಮಂಟಪದ ಪರಿಸರದಲ್ಲಿ
ಮುಂಚೆಯೇ ಸ್ಥಾಪಿಸಲಾಗಿರುವ ವಚನ ವಿಶ್ವವಿದ್ಯಾಲಯ ತೀವ್ರಗತಿಯಲ್ಲಿ ಕಾರ್ಯೋನ್ಮುಖವಾಗುವುದು ಅಗತ್ಯವಾಗಿದೆ. ಈಗಿನ ಅನುಭವ ಮಂಟಪದ ಜಾಗದ ಪಕ್ಕದಲ್ಲಿಯೇ 25 ಎಕರೆ ಭೂಮಿಯನ್ನು ಸರ್ಕಾರಕ್ಕೆ ನೀಡಲಾಗಿದ್ದು, ಭವ್ಯ ಅನುಭವ ಮಂಟಪ ನಿರ್ಮಾಣಕ್ಕೆ ಕೈ ಜೋಡಿಸಲಾಗುತ್ತಿದೆ.  ಡಾ| ಬಸವಲಿಂಗ ಪಟ್ಟದ್ದೇವರು,
ಅಧ್ಯಕ್ಷರು ವಿಶ್ವ ಬಸವ ಧರ್ಮ ಟ್ರಸ್ಟ್‌ ಅನುಭವ ಮಂಟಪ ಬಸವ ಕಲ್ಯಾಣ.

Advertisement

Udayavani is now on Telegram. Click here to join our channel and stay updated with the latest news.

Next