ಲಿಂಗಸುಗೂರು: ಬಸವಕಲ್ಯಾಣದಲ್ಲಿ ಮೂಲ ಜಾಗದಲ್ಲಿ ಅನುಭವ ಮಂಟಪ ಕಟ್ಟದೇ ಬೇರೆ ಸ್ಥಳದಲ್ಲಿ ಅನುಭವ ಮಂಟಪ ಕಟ್ಟುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಜೇವರ್ಗಿಯ ಆಂದೋಲ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ವೀರಶೈವ ಜಂಗಮ ಸಮಾಜ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಜಂಗಮ ಸಮಾವೇಶದಲ್ಲಿ ಆಶೀವರ್ಚನ ನೀಡಿ ಅವರು ಮಾತನಾಡಿದರು.
ಬಸವಕಲ್ಯಾಣದಲ್ಲಿ ಮೂಲ ಜಾಗದಲ್ಲಿ ಅನುಭವ ಮಂಟಪ ಕಟ್ಟಬೇಕಿತ್ತು. ಆದರೆ, ಮೂಲ ಜಾಗವನ್ನು ಕಸಾಯಿಖಾನೆ ಕಟ್ಟಲು ಅವಕಾಶ ನೀಡಿ ಬೇರೆ ಸ್ಥಳದಲ್ಲಿ ಅನುಭವ ಮಂಟಪ ಕಟ್ಟುತ್ತಿರುವುದು ಸರಿಯಲ್ಲ. ಸರ್ಕಾರ ಒಂದು ಕೋಮಿನ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಯೊಬ್ಬರು ಬಿಜೆಪಿ ವಿರುದ್ಧ ಆರೋಪ ಮಾಡುವ ಭರದಲ್ಲಿ ಸ್ವಾಮಿಗಳ ಬಗ್ಗೆ ಅವಹೇಳನವಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಜಗದ್ಗುರು ರೇಣುಕಾಚಾರ್ಯರು ಮೊದಲು ಲಿಂಗದೀಕ್ಷೆ ನೀಡಿದ್ದು ದಲಿತ ಆಗಸ್ತ್ಯ ಮುನಿಗಳಿಗೆ. ದಲಿತ ಶರಣರನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುವ ಧರ್ಮ ಇದ್ದರೆ ಅದು ಜಂಗಮ ಸಮಾಜವಾಗಿದೆ. ಇದನ್ನು ಮಾಜಿ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಮಾವೇಶದಲ್ಲಿ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರು, ನಂದವಾಡಗಿ ಮಹಾಂತಲಿಂಗ ಸ್ವಾಮೀಜಿ, ಸಜ್ಜಲಗುಡ್ಡ ದೊಡ್ಡ ಬಸವಾರ್ಯ ಸ್ವಾಮೀಜಿ, ಸದಾನಂದ ಶಿವಾಚಾರ್ಯರು, ಮಹಾಂತ ಶಿವಾಚಾರ್ಯರು, ಮುರುಘೇಂದ್ರ ಶಿವಯೋಗಿಗಳು, ನಂದಿಕೇಶ್ವರಿ, ಶರಣಯ್ಯ ತಾತ, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ, ಶಾಸಕ ಡಿ.ಎಸ್. ಹೂಲಗೇರಿ, ಎಂಎಲ್ಸಿ ಶರಣಗೌಡ ಬಯ್ನಾಪುರ, ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ, ನಗರ ಯೋಜನಾ ಪ್ರಾ ಧಿಕಾರ ಅಧ್ಯಕ್ಷ ಡಾ| ಶಿವಬಸಪ್ಪ, ಸಿದ್ದು ಬಂಡಿ, ಕಿಡಿಗಣಯ್ಯ ಸ್ವಾಮಿ, ಶರಣಪ್ಪ ಮೇಟಿ, ಮಲ್ಲಣ್ಣ ವಾರದ, ಜಂಗಮ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ ಅತೂ°ರು ಸೇರಿದಂತೆ ಇತರರಿದ್ದರು.
ಜಾತಿ ಪ್ರಮಾಣಪತ್ರ ನೀಡಿ
ಬರುವ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಯಾರು ನೀಡುತ್ತಾರೋ ಅವರಿಗೆ ವೋಟು ಎಂಬ ಜಾಗೃತಿಯನ್ನು ಹಳ್ಳಿ-ಹಳ್ಳಿಯಲ್ಲಿ ನಡೆಸಿ ಜಂಗಮರಲ್ಲಿ ಜಾಗೃತಿ ಮೂಡಿಸಬೇಕು. ಅಂಬೇಡ್ಕರ್ ಅವರೇ ಸ್ವತಃ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಬೇಕೆಂದು ಹೇಳಿದ್ದಾರೆ. ಮೇಲಾಗಿ ಹೈಕೋರ್ಟ್ ಕೂಡ ಹೇಳಿದೆ. ಆದರೆ ಅಂಬೇಡ್ಕರ್ ಹಾಗೂ ಹೈಕೋರ್ಟ್ ಆದೇಶ ಸರ್ಕಾರ ಪಾಲನೆ ಮಾಡುತ್ತಿಲ್ಲ. ಜಾತಿ ನೀಡಲು ಬಿಜೆಪಿ, ಕಾಂಗ್ರೆಸ್‌ನ ಕೆಲ ಶಾಸಕರು ವಿರೋಧಿ ಸುತ್ತಿರುವುದು ಸರಿಯಲ್ಲ. ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವುದು ಸಂವಿಧಾನದ ಹಕ್ಕು ಆಗಿದೆ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.