ಸೋಫಿಯಾ (ಬಲ್ಗೇರಿಯಾ): ಭಾರತದ ಪ್ರತಿಭಾನ್ವಿತ ಕುಸ್ತಿಪಟು ಅಂತಿಮ್ ಪಂಘಲ್ ಜೂನಿಯರ್ ವರ್ಲ್ಡ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅವರು ವನಿತೆಯರ 53 ಕೆಜಿ ವಿಭಾಗದಲ್ಲಿ ಈ ಸಾಧನೆಗೈದರು.
ಸೋನಮ್ ಮಲಿಕ್ (62 ಕೆಜಿ) ಮತ್ತು ಪ್ರಿಯಾಂಕಾ (65 ಕೆಜಿ) ಬೆಳ್ಳಿ ಪದಕ ಜಯಿಸಿದರು.ಫೈನಲ್‌ನಲ್ಲಿ ಅಂತಿಮ್ ಪಂಘಲ್ ಕಜಾಕ್‌ಸ್ಥಾನದ ನ್ ಶಗಯೇವಾ ಅವರನ್ನು 8-0 ಅಂತರದಿಂದ ಬಗ್ಗು ಬಡಿದರು. ಶಗಯೇವಾ ಅಂಡರ್-20 ಏಷ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಆಗಿದ್ದಾರೆ.
ಈ ಕೂಟದ 34 ವರ್ಷಗಳ ಚರಿತ್ರೆಯಲ್ಲಿ ಭಾರತದ ವನಿತಾ ಕುಸ್ತಿಪಟುವೊಬ್ಬರು ಬಂಗಾರ ಗೆದ್ದ ಮೊದಲ ನಿದರ್ಶನ ಇದಾಗಿದೆ. ಇವರಿಗಿಂತ ಮೊದಲು ಭಾರತದ 6 ಸ್ಪರ್ಧಿಗಳು ಫೈನಲ್ ತಲುಪಿದರೂ ಚಿನ್ನ ಗೆಲ್ಲಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
ಚಿನ್ನದ ಹಾದಿಯಲ್ಲಿ ಅವರು ಮೊದಲ ಸುತ್ತಿನಲ್ಲೇ ಯುರೋಪಿಯನ್ ಚಾಂಪಿಯನ್ ಒಲಿವಿಯಾ ಆ್ಯಂಡ್ರಿಚ್ ಅವರನ್ನು 11-0 ಅಂತರದಿಂದ ಮಣಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಯಾಕಾ ಕಿಮುರಾ ಅವರನ್ನು, ಸೆಮಿಫೈನಲ್‌ನಲ್ಲಿ ಉಕ್ರೇನ್‌ನ ನಟಾಲಿಯಾ ಕಿವುcಸ್ಕಾ ಅವರನ್ನು ಸೋಲಿಸಿದರು.
ಕಳೆದ ತಿಂಗಳು ಟ್ಯುನೀಶಿಯಾದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲೂ ಅಂತಿಮ್ ಬಂಗಾರ ಜಯಿಸಿದ್ದರು. ಸೋಫಿಯಾ ಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 12ಕ್ಕೆ ಏರಿದೆ. ಒಂದು ಚಿನ್ನ, 3 ಬೆಳ್ಳಿ ಮತ್ತು 8 ಕಂಚು ಸೇರಿದೆ.
“ಅಂತಿಮ್’ ಹೆಸರಿನ ಸ್ವಾರಸ್ಯ
17 ವರ್ಷದ ಅಂತಿಮ್ ಪಂಘಲ್ ಹರ್ಯಾಣದ ಹಿಸಾರ್ ಜಿಲ್ಲೆಯ ಭಗಾನ ಗ್ರಾಮದವರು. ರಾಮ್‌ನಿವಾಸ್ ಪಂಘಲ್-ಕೃಷ್ಣಾ ಕುಮಾರಿಯವರ ನಾಲ್ವರು ಪುತ್ರಿಯರಲ್ಲಿ ಅಂತಿಮ್ ಪಂಘಲ್ ಕೊನೆಯವರು. ಸಾಲು ಸಾಲು ಹೆಣ್ಣು ಮಕ್ಕಳನ್ನು ಕಂಡ ತಂದೆಗೆ ನಾಲ್ಕನೆಯದಾದರೂ ಗಂಡು ಮಗು ಆಗಬೇಕೆಂಬ ಮಹದಾಸೆ ಇತ್ತು. ಆದರೆ ಈ ನಿರೀಕ್ಷೆ ಫಲಿಸಲೇ ಇಲ್ಲ.
ಹೀಗಾಗಿ ಈಕೆಗೆ “ಅಂತಿಮ್’ (ಕೊನೆ) ಎಂಬ ಹೆಸರಿಟ್ಟು ಮಂಗಲ ಹಾಡಿದರು. ಈ “ಅಂತಿಮ್’ ಅವರಿಂದಾಗಿಯೇ ಭಾರತಕ್ಕೆ ಈ ಕೂಟದಲ್ಲಿ ಪ್ರಥಮ ಚಿನ್ನ ಬಂದದ್ದು ವಿಶೇಷ!