ಬೆಲ್ಗ್ರೇಡ್: ಹಾಲಿ ವಿಶ್ವ ಚಾಂಪಿಯನ್, ಅಮೆರಿಕದ ಒಲಿವಿಯ ಡೊಮಿನಿಕ್ ಪಾರಿಶ್ ಅವರನ್ನು ಮೊದಲ ಸುತ್ತಿನಲ್ಲೇ ಕೆಡವಿದ ಭಾರತದ ಅಂತಿಮ್ ಪಂಘಲ್, “ವಿಶ್ವ ಕುಸ್ತಿ ಚಾಂಪಿಯನ್‌ಶಿಪ್’ನಲ್ಲಿ ಅಮೋಘ ಪರಾಕ್ರಮಗೈದು ಸೆಮಿಫೈನಲ್ ಪ್ರವೇಶಿಸಿದರೂ ಇಲ್ಲಿ ಪರಾಭವಗೊಂಡರು.
ವನಿತೆಯರ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಪಾರಿಶ್ ವಿರುದ್ಧ 19 ವರ್ಷದ ಅಂತಿಮ್ ಪಂಘಲ್ 0-2 ಹಿನ್ನಡೆಯಲ್ಲಿದ್ದರು. ಬಳಿಕ ಅಮೆರಿಕನ್ ರೆಸ್ಲರ್‌ಗೆ ಭರ್ಜರಿ ತಿರುಗೇಟು ನೀಡಿ 3-2 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಪಾರಿಶ್ ಅವರನ್ನು ಪರಾಭವಗೊಳಿಸಿದ ಬಳಿಕ ಅಂತಿಮ್ ಪಂಘಲ್ ಪೋಲೆಂಡ್‌ನ ರೊಕ್ಸಾನಾ ಮಾರ್ತಾ ಝಸಿನಾ ಅವರನ್ನೂ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಇಲ್ಲಿ ರಷ್ಯಾದ ನತಾಲಿಯಾ ಮಲಿಶೇವಾ ವಿರುದ್ಧ 9-6 ಅಂತರದ ಗೆಲುವು ಸಾಧಿಸಿದರು. ಆರಂಭದಲ್ಲಿ ಪಂಘಲ್ 6-0 ಮುನ್ನಡೆಯಲ್ಲಿದ್ದರು. ಬಳಿಕ ರಷ್ಯನ್ ಎದುರಾಳಿಯ ಪಟ್ಟು ಬಿಗಿಗೊಂಡಿತು. ಸ್ಪರ್ಧೆ 6-6 ಸಮಬಲಕ್ಕೆ ಬಂತು. ಅಂತಿಮವಾಗಿ ಪಂಘಲ್ 9-6 ಅಂಕಗಳ ಮೇಲುಗೈ ಸಾಧಿಸಿ ಗೆದ್ದು ಬಂದರು.
ಸೆಮಿಫೈನಲ್‌ನಲ್ಲಿ ಬೆಲರೂಸ್‌ನ ವನೇಸಾ ಕಲಝಿಸ್ಕಾವಾ ವಿರುದ್ಧ 4-5ರಿಂದ ಸೋತ ಅಂತಿಮ್, ದೊಡ್ಡ ಪದಕದಿಂದ ವಂಚಿತರಾದರು. ಕಂಚಿನ ಪದಕ ಜಯಿಸಿದರೆ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಲಭಿಸಲಿದೆ.
ಭಾರತದ ಉಳಿದ ಕುಸ್ತಿಪಟುಗಳಾದ ಮನೀಷಾ (62 ಕೆಜಿ), ಪ್ರಿಯಾಂಕಾ (68 ಕೆಜಿ) ಮತ್ತು ಜ್ಯೋತಿ ಬ್ರೆವಾಲ್ (72 ಕೆಜಿ) ಬೇಗನೇ ಪರಾಭವಗೊಂಡರು. ಪುರುಷರ ಫ್ರೀ-ಸ್ಟೈಲ್ ವಿಭಾಗದಲ್ಲಿ ಭಾರತದ ಎಲ್ಲ 10 ಸ್ಪರ್ಧಿಗಳು ಈಗಾಗಲೇ ಕೂಟದಿಂದ ನಿರ್ಗಮಿಸಿದ್ದಾರೆ. ಇವರ್ಯಾರಿಗೂ ಒಲಿಂಪಿಕ್ಸ್ ಕೋಟಾವಾಗಲಿ, ಪದಕವಾಗಲಿ ಒಲಿಯಲಿಲ್ಲ.