ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸ ಆ್ಯಂಟಿಲಿಯಾ ಸಮೀಪ ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಪ್ರಕರಣ ಮತ್ತು ಮನ್ಸುಖ್ ಹಿರಾನ್ ಹತ್ಯೆ ಪ್ರಕರಣಗಳ ಆರೋಪಿ ಮಾಜಿ ‘ಎನ್ಕೌಂಟರ್ ಸ್ಪೆಷಲಿಸ್ಟ್’ ಪ್ರದೀಪ್ ಶರ್ಮಾಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿದೆ.
ಕಳೆದ ವಾರ ತೀರ್ಪು ಕಾಯ್ದಿರಿಸಿದ ನಂತರ, ಈ ವರ್ಷದ ಜನವರಿಯಲ್ಲಿ ಜಾಮೀನು ನಿರಾಕರಿಸುವ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಶರ್ಮಾ ಅವರ ಜಾಮೀನು ಅರ್ಜಿಯನ್ನು ಆಲಿಸಿದ ನಂತರ ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಇಂದು ತೀರ್ಪು ನೀಡಿದೆ.
ಜೂನ್ 5 ರಂದು, ಸುಪ್ರೀಂ ಕೋರ್ಟ್ ಪ್ರದೀಪ್ ಶರ್ಮಾಗೆ ಮೂರು ವಾರಗಳ ಮಧ್ಯಂತರ ಜಾಮೀನು ನೀಡಿತು, ಅವರ ಪತ್ನಿಯ ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದುದರಿಂದ ಜಾಮೀನು ಮಂಜೂರು ಮಾಡಿತ್ತು.
ಪ್ರದೀಪ್ ಶರ್ಮಾ ಅವರು ತಮ್ಮ ಮನವಿಯಲ್ಲಿ ತಮ್ಮ ಪತ್ನಿಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಮತ್ತು ಅವರಿಗೆ ತಕ್ಷಣದ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಹೇಳಿದರು.
ಬಿಲಿಯನೇರ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯ ದಕ್ಷಿಣ ಮುಂಬೈನ ನಿವಾಸವಾದ ಆಂಟಿಲಿಯಾ ಮನೆಯ ಹೊರ ಭಾಗದಲ್ಲಿ ಸ್ಫೋಟಕ ತುಂಬಿದ ಎಸ್‌ಯುವಿ ಕಾರು ಪಾರ್ಕಿಂಗ್ ಮಾಡಿರುವುದು ಪತ್ತೆಯಾಗಿತ್ತು ಮತ್ತು ಮನ್ಸುಖ್ ಹಿರಾನ್ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿವೃತ್ತ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಶರ್ಮಾ ಅವರನ್ನು ಬಂಧಿಸಲಾಗಿತ್ತು.
1983ರಲ್ಲಿ ಪ್ರದೀಪ್ ಶರ್ಮಾ ಮುಂಬಯಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಮುಂಬಯಿ ಭೂಗತ ಜಗತ್ತಿನ ಸುಮಾರು 300 ಮಂದಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡುವ ಮೂಲಕ ಶರ್ಮಾ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: Chikkamagaluru: ಶಾಲೆಯ ವಸತಿಗೃಹದಲ್ಲೇ 9ನೇ ತರಗತಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ