Advertisement

ಕೋವಿಡ್‌ಗೆ ಸೋಂಕಿತರ ಪ್ರತಿಕಾಯಗಳೇ ಮದ್ದು

02:31 PM May 29, 2020 | mahesh |

ಪ್ಯಾರಿಸ್‌: ಕೋವಿಡ್‌-19 ಇಡೀ ಮನುಕುಲದ ನಿದ್ದೆಗೆಡಿಸಿದೆ. ಇನ್ನೇನು ಸೋಂಕಿತರ ಪ್ರಮಾಣ ಕಡಿತವಾಗುತ್ತಿದೆ ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೂಮ್ಮೆ ಅಬ್ಬರಿಸಿ ಬರುತ್ತಿದೆ. ಈ ಮಹಾಮಾರಿಯನ್ನು ಮಟ್ಟಹಾಕಲು ಲಸಿಕೆಯ ಅಗತ್ಯ ಇದೆ ಎಂದು ವಿಶ್ವದೆಲ್ಲೆಡೆ ಜನರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಆಶಾದಾಯಕ ಎನಿಸುವ ಕೆಲವು ಅಧ್ಯಯನಗಳು ನಡೆಯುತ್ತಿದ್ದು, ಫ್ರಾನ್ಸ್ ನಿಂದ ಸಕಾರಾತ್ಮಕ ವರದಿ ಹೊರಬಿದ್ದಿದೆ.

Advertisement

ಸೋಂಕಿಗೆ ತುತ್ತಾದ ವ್ಯಕ್ತಿಗಳ ದೇಹದಲ್ಲಿಯೇ ವೈರಸನ್ನು ಎದುರಿಸುವ ಶಕ್ತಿ ಉತ್ಪತ್ತಿ ಯಾಗಲಿದ್ದು, ಅವರಿಗೆ ಮತ್ತೂಮ್ಮೆ ಕೋವಿಡ್‌ – 19 ಪತ್ತೆಯಾಗುವುದಿಲ್ಲ ಎಂದು ಹೇಳಲಾಗಿದೆ. ಈಶಾನ್ಯ ಫ್ರಾನ್ಸ್ ನ ಸ್ಟ್ರಾಸ್‌ ಬರ್ಗ್‌ನಲ್ಲಿರುವ ಪಾಶ್ಚರ್‌ ಸಂಸ್ಥೆ ಹಾಗೂ ವಿಶ್ವವಿದ್ಯಾಲಯದ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಈ ಅಧ್ಯಯನ ನಡೆದಿದೆ. ಕೋವಿಡ್‌-19 ವಿರುದ್ಧ ಮುಖ್ಯ ಭೂಮಿಕೆಯಲ್ಲಿ ಹೋರಾಡುತ್ತಿರುವ ವೈದ್ಯಾಧಿಕಾರಿಗಳ ತಂಡ, ದಾದಿಯರು ಹಾಗೂ ಸಿಬಂದಿಯ ಮೇಲೆ ಈ ಪ್ರಯೋಗ ಕೈಗೊಳ್ಳಲಾಗಿದೆ. ಪ್ರಾರಂಭಿಕ ಹಂತದ ಸೋಂಕಿನ ಗುಣಲಕ್ಷಣಗಳು ಕಂಡುಬಂದ ವೈದ್ಯರು ಹಾಗೂ ಆಸ್ಪತ್ರೆ ಸಿಬಂದಿಯ ದೇಹದಲ್ಲಿ ಸೋಂಕು ನಿಗ್ರಹಿಸುವ ಪ್ರತಿಕಾಯಗಳು ಉತ್ಪತ್ತಿಯಾಗಿವೆ ಎಂದು ಅಧ್ಯಯನದ ವರದಿ ಹೇಳಿದೆ.

ಸೋಂಕಿಗೆ ಒಳಗಾದ ಪರೀಕ್ಷಾರ್ಥಿಗಳ ಪೈಕಿ ಶೇ. 98 ಜನರಲ್ಲಿ 28ರಿಂದ 41 ದಿನಗಳ ಒಳಗಾಗಿ ರೋಗ ನಿರೋಧಕ ಶಕ್ತಿಯ ಕಣಗಳು ಕಂಡುಬಂದಿದ್ದು, ರಕ್ತದ ಮಾದರಿಯನ್ನು ಆಧರಿಸಿ ಈ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ಉಲ್ಲೇಖೀಸಿದೆ. ದಿನ ಕಳೆದಂತೆ ದೇಹದಲ್ಲಿ ಸೋಂಕನ್ನು ನಿಗ್ರಹಿಸುವ ಕಣಗಳ ಪ್ರಮಾಣದಲ್ಲೂ ಹೆಚ್ಚಳ ಕಂಡುಬಂದಿದ್ದು, ಮತ್ತಷ್ಟು ವಿಷಯಗಳನ್ನು ತಿಳಿದು ಕೊಳ್ಳಲು ಉಪಯುಕ್ತ ಎಂದು ಸಂಶೋಧಕರ ತಂಡ ಅಭಿಪ್ರಾಯಪಟ್ಟಿದೆ. ಆದರೆ, ಈ ನಿಟ್ಟಿನಲ್ಲಿ ಮತ್ತಷ್ಟು ಪ್ರಯೋಗಗಳು ನಡೆಯಬೇಕಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 160 ಜನರು ಈ ಪರೀಕ್ಷೆಗೆ ಒಳಗಾಗಿದ್ದು, ಎಲ್ಲರಲ್ಲೂ ರೋಗ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿದ್ದು ಕಂಡುಬಂದಿದೆ. ಅದರಲ್ಲೂ ಓರ್ವನಿಗೆ ಸೋಂಕು ಕಾಣಿಸಿಕೊಂಡ ಕೇವಲ 15 ದಿನಗಳಲ್ಲಿ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಟಿಯಾಗಿವೆ ಎಂದು ಸಂಶೋಧನ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next