Advertisement

ಆ್ಯಂಟಿ ಮೈಕ್ರೊಬಿಯಲ್‌ ಪ್ರತಿರೋಧ

06:45 AM Jan 07, 2018 | |

ಆ್ಯಂಟಿ ಬಯಾಟಿಕ್‌ ಅಥವಾ ಪ್ರತಿರೋಧ – ಯಾವುದು ಮೊದಲು?
ಆಧುನಿಕ ಆ್ಯಂಟಿ ಬಯಾಟಿಕ್‌ ಯುಗ 20ನೆಯ ಶತಮಾನದ ತನಕ ಆರಂಭವಾಗಿರಲಿಲ್ಲ. ಆದರೆ ಅದಕ್ಕೂ ಹಿಂದೆ ಪಾರಂಪರಿಕ ಔಷಧ ಪದ್ಧತಿಗಳಲ್ಲಿಯೂ ಆ್ಯಂಟಿ ಬಯಾಟಿಕ್‌ಗಳ ಬಳಕೆ ಇತ್ತು. ಆ್ಯಂಟಿ ಬಯಾಟಿಕ್‌ ಔಷಧಿಗಳ ಜತೆಗೆ ಬ್ಯಾಕ್ಟೀರಿಯಾಗಳ ಪ್ರತಿರೋಧವೂ ಅಸ್ತಿತ್ವದಲ್ಲಿತ್ತು – ಆದರೆ ಈಗಿನಷ್ಟು ಬೃಹತ್‌ ಪ್ರಮಾಣದಲ್ಲಿ ಇರಲಿಲ್ಲ. ಆ್ಯಂಟಿ ಬಯಾಟಿಕ್‌ಗಳನ್ನು ಹೆಚ್ಚು ಬಳಸಿದಷ್ಟು ಅವುಗಳನ್ನು ಸೋಲಿಸುವ ಶಕ್ತಿಯನ್ನು ಬ್ಯಾಕ್ಟೀರಿಯಾಗಳು ಬೆಳೆಸಿಕೊಳ್ಳುವ ಸಾಧ್ಯತೆಯೂ ಅಧಿಕಗೊಳ್ಳುತ್ತದೆ. 

Advertisement

“ಮನುಷ್ಯ ಆ್ಯಂಟಿ ಬಯಾಟಿಕ್‌ಗಳನ್ನು ಅತ್ಯಂತ ವಿಪರೀತವಾಗಿ ಬಳಕೆ ಮಾಡಿದ್ದರಿಂದ ಲಾಭ ಪಡೆದಿರುವ ಸೂಕ್ಷ್ಮಜೀವಿಗಳಿಗೆ ಪ್ರತಿರೋಧ ವಂಶವಾಹಿಗಳನ್ನು ಬೆಳೆಸಿಕೊಳ್ಳುವ ಎಲ್ಲ ಅವಕಾಶಗಳೂ ಒದಗಿದ್ದು’, ಅವು ವೈದ್ಯಕೀಯವಾಗಿ, ಕೃಷಿಯಲ್ಲಿ ಅಥವಾ ಇತರ ಕ್ಷೇತ್ರಗಳಲ್ಲಿ ಬಳಕೆಗೆ ಬಂದ ಪ್ರತಿಯೊಂದು ಆ್ಯಂಟಿಬಯಾಟಿಕ್‌ಗೂ ಪ್ರತಿರೋಧವನ್ನು ಹೊಂದಬಲ್ಲ “ಅಸಾಧಾರಣ ವಂಶವಾಹೀಯ ಸಾಮರ್ಥ್ಯ’ವನ್ನು ಪಡೆದುಕೊಂಡಿವೆ ಎಂದು ಸೂಕ್ಷ್ಮಜೀವಿಗಳಲ್ಲಿ ಪ್ರತಿರೋಧ ಶಕ್ತಿ ಬೆಳೆದ ಬಗೆಯ ಬಗ್ಗೆ ವಿಜ್ಞಾನಿಗಳು ವರದಿ ಮಾಡಿದ್ದಾರೆ. 

ಆ್ಯಂಟಿ ಬಯಾಟಿಕ್‌ಗಳು ಕ್ರಾಂತಿಕಾರಿ ವೈದ್ಯಕೀಯ ಶೋಧವಾಗುವ ಬದಲು ಅತಿದೊಡ್ಡ ಸಾರ್ವಜನಿಕ ಆರೋಗ್ಯ ಕಳವಳವಾಗಿ ಪರಿವರ್ತನೆ ಹೊಂದಿರುವುದು ಹೀಗೆ. ಇದರರ್ಥವೆಂದರೆ, ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುವುದು ಒಂದು ವಿಕಸನಶೀಲ ಅನಿವಾರ್ಯತೆಯಾಗಿದ್ದು, ಸೂಕ್ಷ್ಮಜೀವಿ ಪ್ರತಿರೋಧಗಳನ್ನು ಸಮರ್ಪಕವಾಗಿ ಮತ್ತು ಅಪರೂಪವಾಗಿ ಬಳಸಬೇಕಾಗಿದೆ. ವಂಶವಾಹಿ ಬದಲಾವಣೆಗೆ ಒಳಗಾಗಿ ಔಷಧಗಳನ್ನು ನಿಷ್ಪ್ರಯೋಜಕಗೊಳಿಸಬಲ್ಲ ಸಾಮರ್ಥ್ಯ ಎಲ್ಲ ಸೂಕ್ಷ್ಮಜೀವಿಗಳಿಗೂ ಇವೆ. ಒಮ್ಮೆ ವಂಶವಾಹಿ ಬದಲಾವಣೆಗೆ ಒಳಗಾದ ಸೂಕ್ಷ್ಮಜೀವಿಗಳು, ಆ್ಯಂಟಿಬಯಾಟಿಕ್‌ಗಳು ಇನ್ನುಳಿದ ಸೂಕ್ಷ್ಮಜೀವಿಗಳನ್ನು ನಾಶ ಮಾಡಿದ ಬಳಿಕ ಉಂಟಾಗುವ ಅವಕಾಶವನ್ನು ಉಪಯೋಗಿಸಿಕೊಂಡು ತೀವ್ರವಾಗಿ ಪ್ರಸಾರವಾಗುತ್ತವೆ.

ಇದು ಯಾರ ಸಮಸ್ಯೆ?
ವ್ಯಾಪಕವಾಗುತ್ತಿರುವ ಆ್ಯಂಟಿಬಯಾಟಿಕ್‌ ಪ್ರತಿರೋಧವು ಆರೋಗ್ಯ ವ್ಯವಸ್ಥೆಯಲ್ಲಿ ದೂರಗಾಮಿ ಸಂಭಾವ್ಯ ಪರಿಣಾಮಗಳನ್ನು ಬೀರುತ್ತಿದೆ. ಪ್ರತಿರೋಧ ಅಥವಾ ಅಲಭ್ಯತೆಯ ಕಾರಣದಿಂದಾಗಿ ಮೊದಲ ಸಾಲಿನ ಮತ್ತು ದ್ವಿತೀಯ ಸಾಲಿನ ಆ್ಯಂಟಿಬಯಾಟಿಕ್‌ ಚಿಕಿತ್ಸಾ ಆಯ್ಕೆಗಳು ಸೀಮಿತವಾದಾಗ ಆರೋಗ್ಯ ಸೇವಾ ಪೂರೈಕೆದಾರರು ಕಡಿಮೆ ಪರಿಣಾಮಕಾರಿ ಮತ್ತು ಹೆಚ್ಚು ವಿಷಕಾರಿಯಾದ ಆ್ಯಂಟಿ ಬಯಾಟಿಕ್‌ಗಳನ್ನು ಪ್ರಯೋಗಿಸುವುದು ಅನಿವಾರ್ಯವಾಗುತ್ತದೆ. ಇದರಿಂದಾಗಿ ಆಸ್ಪತ್ರೆವಾಸ ದೀರ್ಘ‌ವಾಗುತ್ತದೆ, ಆರೋಗ್ಯ ಸೇವಾವೆಚ್ಚ ಮತ್ತು ಮರಣಪ್ರಮಾಣ ಎರಡೂ ಏರುತ್ತವೆ.

ಸಾರಾಂಶವೆಂದರೆ, ಆ್ಯಂಟಿಬಯಾಟಿಕ್‌ಗಳ ಪ್ರಯೋಜನ ಅನಂತ ಎಂದು ತಪ್ಪು ಭಾವಿಸಿ ನಾವು ಆ್ಯಂಟಿಬಯಾಟಿಕ್‌ಗಳನ್ನು ಸ್ವೇಚ್ಛೆಯಾಗಿ ಬಳಸಿದ್ದೇವೆ. ಆದರೆ ಈಗ ಅನಿರೀಕ್ಷಿತವಲ್ಲದೆ, ಅತ್ಯಂತ ತೀಕ್ಷ್ಣವಾದ ಆ್ಯಂಟಿಬಯಾಟಿಕ್‌ ಕೂಡ ಕೆಲಸ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಹ-ವಿಕಾಸ ಮತ್ತು ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಪ್ರಕಾರ ಸೂಕ್ಷ್ಮಜೀವಿಗಳು ತಮಗೆ ಆ್ಯಂಟಿಬಯಾಟಿಕ್‌ ಔಷಧಗಳಿಂದ ಎದುರಾದ ಬೆದರಿಕೆಗೆ ಪ್ರತಿರೋಧಾತ್ಮಕ ವಿಕಾಸ ಹೊಂದುವಲ್ಲಿ ಯಶಸ್ವಿಯಾಗಿವೆ. ಕೆಲವು ಮಂದಿ ತಜ್ಞರು ಬೆಟ್ಟು ಮಾಡುವ ಪ್ರಕಾರ, ನಾವು ಈಗ ಆ್ಯಂಟಿಬಯಾಟಿಕೋತ್ತರ ಜಗತ್ತನ್ನು ಪ್ರವೇಶಿಸಿದ್ದೇವೆ. ಆ್ಯಂಟಿಬಯಾಟಿಕ್‌ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿರುವ ಬ್ಯಾಕ್ಟೀರಿಯಾಗಳಿಂದ ಜಾಗತಿಕವಾಗಿ ವಾರ್ಷಿಕ 7 ಲಕ್ಷ ಮೃತ್ಯುಗಳು ಸಂಭವಿಸುತ್ತಿವೆ ಎಂದು ಪ್ರಸ್ತುತ ಅಂದಾಜಿಸಲಾಗಿದೆ. ಈ ಅಂಕಿಅಂಶ ಹೆಚ್ಚುವುದು ಸಂಭವನೀಯ, ಒಂದು ಅಂದಾಜಿನ ಪ್ರಕಾರ ಇದು 2050ರ ಹೊತ್ತಿಗೆ 1 ಕೋಟಿಗೆ ಏರಬಲ್ಲುದು. 

Advertisement

ಆ್ಯಂಟಿಬಯಾಟಿಕ್‌ ಪ್ರತಿರೋಧ ಎನ್ನುವುದು ಒಂದು ಜಾಗತಿಕ ವಿದ್ಯಮಾನ. ಆದರೆ ಅದರ ಕೇಂದ್ರ ಭಾರತ. ಅತ್ಯಂತ ತೀಕ್ಷ್ಣವಾದ ಆ್ಯಂಟಿಬಯಾಟಿಕ್‌ಗಳು ರೋಗ ಪತ್ತೆ ಅಥವಾ ವೈದ್ಯರ ಶಿಫಾರಸು ಇಲ್ಲದೆಯೇ ಬಹಳ ಸುಲಭವಾಗಿ ನಮ್ಮ ದೇಶದಲ್ಲಿ ಜನರ ಕೈಗೆಟಕುತ್ತವೆ. ತಜ್ಞ ವೈದ್ಯರಲ್ಲದೆ ಅಲ್ಪಸ್ವಲ್ಪ ವೈದ್ಯಕೀಯ ಜ್ಞಾನವುಳ್ಳ ನಕಲಿ ವೈದ್ಯರು ಒಂದಿಷ್ಟೂ ಆಲೋಚಿಸದೆ ಔಷಧಗಳನ್ನು ಶಿಫಾರಸು ಮಾಡುತ್ತಾರೆ, ಆಸ್ಪತ್ರೆಗಳಲ್ಲಿ ಆ್ಯಂಟಿಬಯಾಟಿಕ್‌ಗಳ ಮಿತಿಮೀರಿದ ಬಳಕೆಯಿಂದ ಈ ಸೂಪರ್‌ಬಗ್‌ಗಳ ವಸಾಹತುಗಳೇ ನಿರ್ಮಾಣಗೊಂಡಿವೆ, ಜಾನುವಾರುಗಳ ಮೇಲೆಯೂ ಆ್ಯಂಟಿಬಯಾಟಿಕ್‌ಗಳನ್ನು ವಿಪರೀತವಾಗಿ ಪ್ರಯೋಗಿಸಲಾಗಿದೆ, ಅತ್ಯಂತ ಕಳಪೆ ನೈರ್ಮಲ್ಯವೂ ಇದಕ್ಕೆ ಕೊಡುಗೆ ನೀಡಿದೆ. ಇವೆಲ್ಲವೂ ಒಟ್ಟು ಸೇರಿ ನಮ್ಮ ಆರೋಗ್ಯಕ್ಕೆ ಬೆದರಿಕೆ ಒಡ್ಡುವಂತೆ ಈ ಆ್ಯಂಟಿಬಯಾಟಿಕ್‌ ಪ್ರತಿರೋಧ ಹೊಂದಿರುವ ಸೂಕ್ಷ್ಮಜೀವಿಗಳ ಪ್ರವಾಹವೇ ಉಂಟಾಗುವುದಕ್ಕೆ ಯೋಗ್ಯವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟಿವೆ.

“ಭಾರತದಲ್ಲಿ ನಿಜಕ್ಕೂ ಆ್ಯಂಟಿಬಯಾಟಿಕ್‌ ಪ್ರತಿರೋಧ ಹೊಂದಿರುವ ಸೂಕ್ಷ್ಮಜೀವಿಗಳ ಸರಿಯಾದ ಪ್ರವಾಹವೇ ಉಂಟಾಗಿದೆ’ ಎನ್ನುತ್ತಾರೆ ಸೆಂಟರ್‌ ಫಾರ್‌ ಡಿಸೀಸ್‌ ಡೈನಾಮಿಕ್ಸ್‌, ಇಕನಾಮಿಕ್ಸ್‌ ಆ್ಯಂಡ್‌ ಪಾಲಿಸಿ (ಸಿಡಿಡಿಇಪಿ)ಯ ನಿರ್ದೇಶಕ ಮತ್ತು ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ನೀತಿ ಹಾಗೂ ಸಂಶೋಧನಾ ವಿಭಾಗದ ಉಪಾಧ್ಯಕ್ಷರಾಗಿರುವ ರಮಣನ್‌ ಲಕ್ಷ್ಮೀನಾರಾಯಣನ್‌. “ಭಾರತದ ಬೃಹತ್‌ ಫಾರ್ಮಾಸುಟಿಕಲ್‌ ಉದ್ಯಮ, ಸೋಂಕುಕಾರಕ ಕಾಯಿಲೆಗಳ ಭಾರೀ ಪ್ರಮಾಣ ಮತ್ತು ಆ್ಯಂಟಿಬಯಾಟಿಕ್‌ಗಳನ್ನು ಕೊಳ್ಳಬಲ್ಲ ಭಾರೀ ಜನಸಂಖ್ಯೆ ಭಾರತದಲ್ಲಿದೆ. ಇವೆಲ್ಲವೂ ಸೇರಿ ಅತಿಹೆಚ್ಚು ರೋಗಕಾರಕ ಸೂಕ್ಷ್ಮಜೀವಿಗಳು ಇಲ್ಲಿವೆ’ಎಂದು ವಿವರಿಸುವ ಅವರು, ಸಿರಿವಂತರಿರಲಿ, ಬಡವರಿರಲಿ, ಎಲ್ಲರೂ ಇನ್ನೊಬ್ಬರ ಕೃಪಾಶ್ರಯದಲ್ಲಿದ್ದಾರೆ ಎನ್ನುತ್ತಾರೆ. 

“ಆ್ಯಂಟಿಬಯಾಟಿಕ್‌ಗಳು ಇತರ ಔಷಧಿಗಳಂತಲ್ಲ. ಉದಾಹರಣೆಗೆ, ನಾನು ಲಿಪಿಡ್‌ ಕಡಿಮೆ ಮಾಡುವ ಒಂದು ಔಷಧಿಯಾದ ಸ್ಟಾಟಿನ್‌ ತೆಗೆದುಕೊಳ್ಳುತ್ತೇನೆ ಎಂದುಕೊಳ್ಳೋಣ. ಅದರಿಂದ ನೀವು ಸ್ಟಾಟಿನ್‌ ತೆಗೆದುಕೊಂಡ ಸಂದರ್ಭದಲ್ಲಿ ಅದರ ಪರಿಣಾಮಕಾರಿತ್ವ ಕಡಿಮೆಯಾಗುವುದಿಲ್ಲ. ಆದರೆ, ಆ್ಯಂಟಿಬಯಾಟಿಕ್‌ ಹಾಗಲ್ಲ. ನೀವು ಜೀವನದಲ್ಲಿ ಒಮ್ಮೆಯೂ ಆ್ಯಂಟಿಬಯಾಟಿಕ್‌ಗಳನ್ನು ದುರ್ಬಳಕೆ ಮಾಡಿರದಿ ದ್ದರೂ ಇನ್ನೊಬ್ಬರು ಹಾಗೆ ಮಾಡಿದ್ದರಿಂದಾಗಿ ನಿಮಗೆ ಆ್ಯಂಟಿ ಬಯಾಟಿಕ್‌ ಪ್ರತಿರೋಧಶಕ್ತಿಯುಳ್ಳ ಸೋಂಕು ತಗಲುವ ಸಾಧ್ಯತೆ ಇದೆ’ ಎಂದು ಅವರು ವಿವರಿಸುತ್ತಾರೆ. 
(ಡಿ.24ರಿಂದ ಮುಂದುವರಿದ ಭಾಗ)
(ಮುಂದುವರಿಯುತ್ತದೆ)

Advertisement

Udayavani is now on Telegram. Click here to join our channel and stay updated with the latest news.

Next