Advertisement

ಸಂಸದರ ವಿರೋಧಿ ಅಲೆ ತಗ್ಗಿಸಿದ ವೈಮಾನಿಕ ದಾಳಿ

02:21 AM Mar 15, 2019 | Team Udayavani |

ಬೆಂಗಳೂರು: ರಾಜ್ಯದ ನಾಲ್ಕೈದು ಬಿಜೆಪಿ ಸಂಸದರ ವಿರುದ್ಧ ಎದ್ದಿದ್ದ ಆಡಳಿತ ವಿರೋಧಿ ಅಲೆಯು ಪುಲ್ವಾಮಾ ಘಟನೆ ಹಾಗೂ ಕೇಂದ್ರ ಬಜೆಟ್‌ನ ಕೊಡುಗೆಗಳ ಅಬ್ಬರದಲ್ಲಿ ಕೊಚ್ಚಿ ಹೋದಂತಿದೆ. ಇದು ಆಯ್ದ ಸಂಸದರ ಪಾಲಿಗೆ ವರದಾನವಾಗಿದ್ದು, ಮತ್ತೆ ಟಿಕೆಟ್‌ ಗಿಟ್ಟಿಸುವ ದಾರಿ ಸುಗಮವಾದಂತಾಗಿದೆ. ಸಂಸದರ ಕಾರ್ಯ ವೈಖರಿ, ಜನ ಸಂಪರ್ಕಕ್ಕೆ ಅಲಭ್ಯತೆ ಹಾಗೂ ಇತರೆ ಕೆಲ ವಿಚಾರಗಳ ಕಾರಣಕ್ಕೆ ಬೇಸರಗೊಂಡಿದ್ದವರನ್ನು ಸಮಾಧಾನಪಡಿಸಲು ಎರಡು ತಿಂಗಳ ಹಿಂದೆ ರಾಜ್ಯ ಬಿಜೆಪಿಯ ಕೆಲ ನಾಯಕರು ತೀವ್ರ ಕಸರತ್ತು ನಡೆಸಿದ್ದರು. ಕೆಲವೆಡೆ ಅಭ್ಯರ್ಥಿ ಬದಲಾವಣೆ ಬಗ್ಗೆ ಗಂಭೀರ ಚಿಂತನೆ ನಡೆಯುವಷ್ಟರ ಮಟ್ಟಿಗೆ ಪ್ರತಿರೋಧ ಉಂಟಾಗಿತ್ತು. ಆದರೆ ಕೇಂದ್ರ ಸರ್ಕಾರದ ಬಜೆಟ್‌ ಹಾಗೂ ವೈಮಾನಿಕ ದಾಳಿ ಘಟನೆಯು ಚಿತ್ರಣವನ್ನೇ ಬದಲಿಸಿದ್ದು, ಹಲವೆಡೆ ಪ್ರತಿರೋಧದ ಕಾವು ಕಡಿಮೆಯಾಗಿರುವುದು ನಾಯಕರಲ್ಲಿ ನಿರಾಳತೆ ಮೂಡಿಸಿದೆ.

Advertisement

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯಿಂದ 17 ಸಂಸದರು ಆಯ್ಕೆಯಾಗಿದ್ದರು. ನಂತರ ನಡೆದ ಬಳ್ಳಾರಿ ಉಪಚುನಾವಣೆಯಲ್ಲಿ ಸೋತ ಬಿಜೆಪಿಯು ಒಂದು ಸ್ಥಾನ ಕಳೆದುಕೊಂಡಿತ್ತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್‌ ನಿಧನದಿಂದ ಸ್ಥಾನ ತೆರವಾಗಿದೆ. ಉಳಿದಂತೆ 15 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದು, ಡಿ.ವಿ.ಸದಾನಂದಗೌಡ, ಅನಂತ ಕುಮಾರ್‌ ಹೆಗಡೆ ಹಾಗೂ ರಮೇಶ್‌ ಜಿಗಜಿಣಗಿ ಅವರು ಕೇಂದ್ರ ಸಚಿವರಾಗಿದ್ದಾರೆ.

ನಾಲ್ಕೈದು ಕಡೆ ವಿರೋಧಿ ಅಲೆ: ಬಿಜೆಪಿ ಸಂಸದರಿರುವ ಕ್ಷೇತ್ರಗಳ ಪೈಕಿ ನಾಲ್ಕೈದು ಕಡೆ ಕಾರ್ಯಕರ್ತರು, ಮುಖಂಡರೇ ಹಾಲಿ ಸಂಸದರ ವಿರುದ್ಧ  ತಿರುಗಿಬಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕ್ಷೇತ್ರದ ಜನರ ಸಂಪರ್ಕಕ್ಕೆ ಸಿಗದಿರುವುದು, ಜನಪರ ಕಾಳಜಿ ಕೊರತೆ, ಕಾರ್ಯಕರ್ತರು, ಮುಖಂಡರಿಗೂ ಅಲಭ್ಯರಾಗಿರುವುದು, ಕ್ಷೇತ್ರದೊಂದಿಗೆ ಒಡನಾಟವಿಟ್ಟುಕೊಳ್ಳದೆ ಅಂತರ ಕಾಯ್ದುಕೊಳ್ಳುವುದು. ಕೆಲವೆಡೆ ಅನ್ಯ ಪಕ್ಷಗಳ ಮುಖಂಡರೊಂದಿಗೆ ವ್ಯವಹರಿಸುವುದರ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಉತ್ತರ ಕರ್ನಾಟಕದ ಒಂದು ಕ್ಷೇತ್ರ, ಕರಾವಳಿಯನ್ನು ಪ್ರಧಾನವಾಗಿ ಹೊಂದಿರುವ ಎರಡು ಕ್ಷೇತ್ರಗಳು, ಮಧ್ಯ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದ ತಲಾ ಒಂದು ಕ್ಷೇತ್ರದ ಸಂಸದರ ವಿರುದಟಛಿ ಸ್ಥಳೀಯವಾಗಿ ತೀವ್ರ ವಿರೋಧವಿತ್ತು. ಈ ಬಗ್ಗೆ ಕೆಲ ಕ್ಷೇತ್ರಗಳಲ್ಲಿ ಕಾರ್ಯಕರ್ತರು, ಮುಖಂಡರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿರೋಧ ತೋರಿದ್ದು ವರದಿಯಾಗಿತ್ತು. ಕೆಲವೆಡೆ ಹಾಲಿ ಸಂಸದರ ವಿರುದಟಛಿ ದೊಡ್ಡ ಮಟ್ಟದ ಪ್ರತಿರೋಧವೂ ವ್ಯಕ್ತವಾಗಿತ್ತು. ಕೆಲವೆಡೆ ಅಭ್ಯರ್ಥಿ ಬದಲಾವಣೆಯೊಂದೇ ಪರಿಹಾರ ಎಂಬ ಒತ್ತಡವೂ ಹೆಚ್ಚಾಗಿದ್ದು ನಾಯಕರಿಗೆ ತಲೆಬಿಸಿ ತಂದಿತ್ತು.

ದಿಢೀರ್‌ ಚಿತ್ರಣ ಬದಲು: ದಿನ ಕಳೆದಂತೆ ಕೆಲ ಸಂಸದರ ವಿರೋಧಿ ಅಲೆಯು ದೊಡ್ಡ ಮಟ್ಟದಲ್ಲಿ ಏಳಲಾರಂಭಿಸಿದ ಹೊತ್ತಿನಲ್ಲೇ ಕೇಂದ್ರ ಬಜೆಟ್‌ನಲ್ಲಿ ಕೆಲ ಆಕರ್ಷಕ ಘೋಷಣೆಗಳು ಪರಿಸ್ಥಿತಿಯನ್ನು ತುಸು ತಿಳಿಗೊಳಿಸಲು ಸಹಕಾರಿಯಾಗಿತ್ತು. ಹಾಗಿದ್ದರೂ ವೈಯಕ್ತಿಕ ಪ್ರತಿರೋಧ ಮುಂದುವರಿದಿತ್ತು. ಬಳಿಕ ಪುಲ್ವಾಮಾದಲ್ಲಿ ಉಗ್ರರು ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದ ಅಮಾನವೀಯ ಘಟನೆ ಹಾಗೂ ನಂತರ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ನಿಲುವಿನ ಬಳಿಕ ವಾತಾವರಣ ಬದಲಾಗಿದ್ದು, ಪ್ರತಿರೋಧ ಬಹುತೇಕ ಉಪಶಮನವಾಗಿದೆ ಎಂದು ಮೂಲಗಳು ಹೇಳಿವೆ.

Advertisement

— ಎಂ.ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next