ಹೊಸದಿಲ್ಲಿ: ಒಟಿಟಿಗಳಲ್ಲೂ ತಂಬಾಕು ವಿರೋಧಿ ಎಚ್ಚರಿಕೆಯನ್ನು ಕಡ್ಡಾಯ ಮಾಡಿದ ಜಗತ್ತಿನ ಮೊದಲ ದೇಶ ಭಾರತವೆನಿಸಿಕೊಂಡಿದೆ. ಚಿತ್ರಮಂದಿರಗಳಲ್ಲಿ ಸಿನೆಮಾಗಳಲ್ಲಿ ಹೇಗೆ ತಂಬಾಕು ವಿರೋಧಿ ಸಂದೇಶ, ಎಚ್ಚರಿಕೆಗಳು ಪ್ರಸಾರವಾಗುತ್ತವೆಯೋ ಅದೇ ರೀತಿ ಒಟಿಟಿಗಳಲ್ಲೂ ಹಾಕಬೇಕೆಂದು ಕಡ್ಡಾಯ ಮಾಡಲಾಗಿದೆ. ವಿಶ್ವ ತಂಬಾಕು ದಿನಾಚರಣೆಯ ಅಂಗವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಈ ಪ್ರಕಾರ ಆನ್‌ಲೈನ್ ತಾಣಗಳಲ್ಲಿ ತಂಬಾಕು ಬಳಕೆಯ ದೃಶ್ಯಗಳಿದ್ದರೆ, ಅಂತಹ ಕಡೆ ಕಾರ್ಯಕ್ರಮದ ಆರಂಭ ಮತ್ತು ಮಧ್ಯಭಾಗದಲ್ಲಿ ತಲಾ 30 ಸೆಕೆಂಡ್‌ಗಳ ತಂಬಾಕು ವಿರೋಧಿ ಸಂದೇಶ ಪ್ರಸಾರವಾಗಬೇಕು. ಒಂದು ವೇಳೆ ತಂಬಾಕು ಸೇವನೆ ದೃಶ್ಯಗಳು ಪ್ರಸಾರವಾಗುತ್ತಿದ್ದರೆ, ಪರದೆಯ ಕೆಳಭಾಗದಲ್ಲಿ ತಂಬಾಕು ಸೇವನೆ ವಿರುದ್ಧದ ಒಂದು ಸ್ಥಿರ ಸಂದೇಶ ಪ್ರಸಾರವಾಗಬೇಕು ಎಂದೂ ಹೇಳಿದೆ. ತಂಬಾಕು ಸೇವನೆಯಿಂದಾಗುವ ಅಪಾಯದ ಕುರಿತು ಧ್ವನಿ-ದೃಶ್ಯ ಮಾದರಿಯ 20 ಸೆಕೆಂಡ್‌ಗಳ ಸಂದೇಶವನ್ನು ನೀಡಲೇಬೇಕು ಎಂದೂ ತಿಳಿಸಿದೆ.