ಬಂಗಾರಪೇಟೆ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿರುದ್ಧ ಬಿಜೆಪಿ ಪಕ್ಷಕ್ಕೆ ಮತ ಹಾಕಿಸುವುದರ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಆಪಾದನೆಯಲ್ಲಿ ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಲ್ಲಹಳ್ಳಿ ಕೆ.ವಿ.ನಾಗರಾಜ್ ಹಾಗೂ ಕಾಮಸಮುದ್ರ ಜಿಪಂ ಸದಸ್ಯ ಶಾಹಿದ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಶಿಸ್ತುಕ್ರಮಕೈಗೊಳ್ಳಲು ಶಿಫಾರಸು ಮಾಡಿರುವುದರಿಂದ ತಾಲೂಕಿನಲ್ಲಿ ಭಿನ್ನಮತ ನ್ಪೋಟಗೊಂಡಿದೆ.
ಪಟ್ಟಿ ರವಾನೆ: ಸತತ ಏಳು ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ವಿರುದ್ಧ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ಮುಖಂಡರು ಹಾಗೂ ಜೆಡಿಎಸ್ ಪಕ್ಷದ ಕೆಲವು ಹಾಲಿ, ಮಾಜಿ ಶಾಸಕರುಗಳು ಸೇರಿ ಬಂಡಾಯವೆದ್ದು, ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿಯನ್ನು ಬದಿಗೊತ್ತಿ ಬುಡಮೇಲು ಚುಟುವಟಿಕೆ ನಡೆಸಿರುವ ಖಚಿತ ಮಾಹಿತಿ ಮೇರೆಗೆ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲು ಎಐಸಿಸಿಗೆ ಪಟ್ಟಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಆರೋಪ: ಬೂದಿಕೋಟೆ ಜಿಪಂ ಕ್ಷೇತ್ರದ ಸದಸ್ಯೆ ಪಾರ್ವತಮ್ಮ ಕೆ.ವಿನಾಗರಾಜ್ ಪತ್ನಿಯಾಗಿದ್ದು, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದುಕೊಂಡು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ ಒಂದು ಗುಂಪಿನಿಂದ ಕೆ.ಎಚ್.ಮುನಿಯಪ್ಪ ವಿರುದ್ಧ ಕೆಲಸ ಮಾಡುವಂತೆ ಆದೇಶ ಬಂದಿದೆ. ಇದರಿಂದ ಎಲ್ಲಾ ಕಾಂಗ್ರೆಸ್ ಮುಖಂಡರು ಮೆಲ್ನೋಟಕ್ಕೆ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಸಹ ಬಿಜೆಪಿ ಪರವಾಗಿ ಕೆಲಸ ಮಾಡುವಂತೆ ಹಾಗೂ ಕೆ.ಎಚ್.ಮುನಿಯಪ್ಪರಿಗೆ ಮತ ಹಾಕದಿರಲು ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ.
ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದುಕೊಂಡು ಹಾಗೂ ಪತ್ನಿಯನ್ನು ಜಿಪಂ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ಅಧಿಕಾರ ನಡೆಸುತ್ತಿರುವುದನ್ನು ಮರೆತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿರುವುದು ಕೆಲವು ಅಡಿಯೋ ದಾಖಲೆಗಳ ಮೂಲಕ ಸಾಬೀತಾಗಿರುವುದರಿಂದ ಇಂತಹವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಪಟ್ಟಿ ರವಾನೆಯಾಗಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಶಾಹೀದ್ ಕಣ್ಮರೆ: ತಾಲೂಕಿನ ಕಾಮಸಮುದ್ರ ಜಿಪಂ ಕ್ಷೇತ್ರದ ಸದಸ್ಯರಾಗಿರುವ ಶಾಹೀದ್ ಹಲವಾರು ವಿರೋಧದ ನಡುವೆಯೂ ಕಾಂಗ್ರೆಸ್ ಪಕ್ಷದಿಂದ ಜಿಪಂ ಟಿಕೆಟ್ ಪಡೆದು ಜಯಶೀಲರಾಗಿದ್ದರು. ಕಾಂಗ್ರೆಸ್ ಹಿರಿಯ ಮುಖಂಡ ಕೆಜಿಎಫ್ ಶ್ರೀನಿವಾಸ್‌ರ ಬಲಗೈಬಂಟನಾಗಿರುವ ಶಾಹಿದ್ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ವಿರುದ್ಧವೇ ಕೆಲಸ ಮಾಡಿರುವ ಅರೋಪ ಕೇಳಿ ಬರುತ್ತಿವೆ.
ಶಾಹಿದ್ ಕಾಮಸಮುದ್ರದಲ್ಲಿ ಎಲ್ಲಿಯೂ ಪರಿಚಯವೇ ಇಲ್ಲವಾಗಿತ್ತು. ಕಳೆದ ಮೂರು ವರ್ಷಗಳ ಹಿಂದೆ ನಡೆದ ಜಿಪಂ ಚುನಾವಣೆ ಸಂದರ್ಭದಲ್ಲಿ ಕಾಮಸಮುದ್ರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮಾಡುವ ವಿಚಾರದಲ್ಲಿ ಉಂಟಾಗಿದ್ದ ಗೊಂದಲದಲ್ಲಿ ಶಾಹಿದ್ ಪಡೆದುಕೊಂಡು ಗೆದ್ದಿದ್ದರು. ಎರಡು ವರ್ಷಗಳ ಕಾಲ ಕ್ಷೇತ್ರದಲ್ಲಿ ಬಂದು ಹೋಗುತ್ತಿದ್ದ ಶಾಹಿದ್ ಕಳೆದ ಒಂದು ವರ್ಷದಿಂದ ಕ್ಷೇತ್ರದಿಂದ ಕಣ್ಮರೆಯಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿರುವುದಲ್ಲದೇ, ಕೆ.ಎಚ್.ಮುನಿಯಪ್ಪರಿಗೆ ಟಿಕೆಟ್ ನೀಡಬಾರದೆಂದು ದೆಹಲಿವರೆಗೂ ಲಾಬಿ ನಡೆಸಿದ್ದರು ಎಂದು ತಿಳಿದುಬಂದಿದೆ.
ಕೋಲಾರ ಜಿಪಂ ಅಧ್ಯಕ್ಷ ಗೀತಮ್ಮ ಆನಂದರೆಡ್ಡಿ ವಿರುದ್ಧ ಸತತ ಮೂರು ಬಾರಿ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ಕಾಮಸಮುದ್ರ ಜಿಪಂ ಸದಸ್ಯ ಶಾಹಿದ್ ಹಾಗೂ ಬೂದಿಕೋಟೆ ಜಿಪಂ ಸದಸ್ಯೆ ಪಾರ್ವತಮ್ಮ ನಾಗರಾಜ್ ಸಹ ಕೆ.ಎಚ್.ಮುನಿಯಪ್ಪರ ಬಣದ ವಿರುದ್ಧವೇ ಹೋಗಿದ್ದರೂ ಸಹ ಯಾವುದೇ ಕ್ರಮಕೈಗೊಳ್ಳದೇ ಇದ್ದ ಕೆ.ಎಚ್.ಮುನಿಯಪ್ಪ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಇವರಿಬ್ಬರ ಮೇಲೆ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ.