Advertisement

ನೀರಿಗಾಗಿ ಪರ-ವಿರೋಧ ಹೋರಾಟ

01:36 AM May 21, 2019 | Sriram |

ಬೆಳಗಾವಿ: ಸಂಪೂರ್ಣ ಒಣಗಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ನದಿ ತೀರದ ಪ್ರದೇಶಗಳಲ್ಲಿ ನಡೆದಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಸೋಮವಾರ ಕರೆ ನೀಡಿದ್ದ ಅಥಣಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಅಥಣಿ ಸಂಘಟನೆಗಳ ಹೋರಾಟಕ್ಕೆ ಬೆಂಬಲಿಸಿ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲೂ ವಿವಿಧ ಸಂಘಟನೆಗಳಿಂದ ಸೋಮವಾರ ಪ್ರತಿಭಟನೆಗಳು ನಡೆದಿವೆ. ಇನ್ನೊಂದು ಕಡೆ ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಬಾರದು. ಈ ಸಂಬಂಧ ಜಲಸಂಪನ್ಮೂಲ ಸಚಿವರು ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಒತ್ತಾಯಿಸಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.

ಅಥಣಿಯಲ್ಲಿ ನಡೆದಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಸೋಮವಾರ 25ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಬಂದ್‌ ಕರೆಗೆ ಬೆಂಬಲವಾಗಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು. ಪ್ರತಿಭಟನಾಕಾರರು ಬೆಳಗಾವಿ-ವಿಜಯಪುರ ರಸ್ತೆ ತಡೆ ನಡೆಸಿ ಕೂಡಲೇ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಚಿಕ್ಕೋಡಿ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂಕಲಿ-ಮಾಂಜರಿ ಸೇತುವೆ ಬಳಿ ಚಿಂಚಣಿ ಸಿದ್ಧಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಚಿಕ್ಕೋಡಿ ಚರಮೂರ್ತಿ ಸಂಪಾದನಾ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೂಡಲೇ ಕೃಷ್ಣಾ ನದಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.

ಬೆಳಗಾವಿಯಲ್ಲಿ ಪ್ರತಿಭಟನೆ: ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅಥಣಿ ಹಾಗೂ ಕೃಷ್ಣಾ ತೀರದ ಜನರನ್ನು ಬೆಂಬಲಿಸಿ ಕನ್ನಡ ಪರ ಮತ್ತು ರೈತ ಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಕೃಷ್ಣಾ ನದಿಗೆ ಕೊಯ್ನಾ ನೀರು ಬಿಡುಗಡೆ ಮಾಡಲೇಬೇಕು. ಈ ವಿಷಯದಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಮಹಾರಾಷ್ಟ್ರದ ಜಲಾಶಯಗಳ ಬದಲಾಗಿ ನಮ್ಮಲ್ಲಿಯ ಹಿಡಕಲ್ ಜಲಾಶಯದಿಂದ 94 ಕಿಮೀ ದೂರದ ಕೃಷ್ಣಾ ನದಿಗೆ ಒಂದು ಟಿಎಂಸಿ ನೀರು ಹರಿಸುವ ನಿರ್ಧಾರ ಅತ್ಯಂತ ಅವೈಜ್ಞಾನಿಕವಾಗಿದೆ. ಈ ನೀರು ಕೃಷ್ಣಾ ನದಿ ತಲುಪಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ರಾಜ್ಯದ ಮುಖ್ಯಮಂತ್ರಿಗಳು ಮಹಾರಾಷ್ಟ್ರಕ್ಕೆ ಸರ್ವಪಕ್ಷೀಯ ನಿಯೋಗ ಕಳಿಸಿ ಕೊಯ್ನಾದಿಂದ ನೀರು ಬಿಡಿಸಬೇಕೇ ಹೊರತು ಇಲ್ಲಿಯೇ ಕುಳಿತು ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ, ಶಿವಪ್ಪ ಶಮರಂತ, ದೀಪಕ ಗುಡಗನಟ್ಟಿ, ಸಾಗರ ಬೋರಗಲ್ಲ, ಗೌರಿ ಲಮಾಣಿ, ರಾಜೂ ಕುಸೋಜಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next