Advertisement

ರಾಜ್ಯ ಸರಕಾರ ಶಿಕ್ಷಕರ ವಿರೋಧಿ: ನಮೋಶಿ ಆರೋಪ

12:52 PM Jan 30, 2017 | |

ಕಲಬುರಗಿ: ರಾಜ್ಯ ಸರಕಾರ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸದೆ ಶಿಕ್ಷಕರ ವಿರೋಧಿಯಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ರಾಜ್ಯ ಸಹ ವಕ್ತಾರ ಶಶೀಲ್‌ ಜಿ. ನಮೋಶಿ ಆರೋಪಿಸಿದರು. 

Advertisement

ಆದರ್ಶನಗರದ ಕನ್ನಡ ಕಾನ್ವೆಂಟ್‌ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಅನುದಾನಿತ ಪ್ರೌಢಶಾಲಾ ಶಿಕ್ಷಕ,  ಶಿಕ್ಷಕೇತರ ಸಂಘದ ಜಿಲ್ಲಾ ಘಟಕದ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭ, ನೂತನ ಅನುದಾನಿತ ಪ್ರೌಢಶಾಲಾ ಶಿಕ್ಷಕ, ಶಿಕ್ಷಕೇತರ ನೌಕರರ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಮಸ್ಯೆಗೆ ಸ್ಪಂದಿಸುವ ಹುಸಿ ಭರವಸೆ ನೀಡುವ ರಾಜ್ಯ ಸರಕಾರ, ಹೊಸ ನೀತಿ ಜಾರಿಗೆ ತರುವ ಹಾಗೂ ಗೊಂದಲದ ಹೇಳಿಕೆಗಳನ್ನು ನೀಡುತ್ತ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ವೇಳೆಯಲ್ಲಿ ರಾಜ್ಯ ಸರಕಾರ ಆತುರದಲ್ಲಿ ಪಠ್ಯ ಬದಲಾವಣೆಗೆ ಮುಂದಾಗಿರುವುದು ಸರಿಯಲ್ಲ ಎಂದರು. 

ಕುಮಾರ ನಾಯಕ ಸಮಿತಿ ವರದಿ ಕುರಿತು ಸಚಿವ ತನ್ವೀರ್‌ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರ ಎಲ್ಲ ನಿಯಮ ಗಾಳಿಗೆ ತೂರಿ ಪಠ್ಯ ಬದಲಾವಣೆಗೆ ಮುಂದಾಗಿರುವುದನ್ನು ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿದರು. 

ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ಸರಕಾರವು ಸರಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳ ನಡುವಿನ ತಾರತಮ್ಯ ನಿವಾರಿಸಬೇಕು ಎಂದರು. ಮಹ್ಮದ್‌ಹನೀಫ್‌ ಪಿ. ಮಕಾನದಾರ ಮಾತನಾಡಿ,ಅನುದಾನಿತ ಶಾಲೆಗಳತ್ತ ಸರಕಾರ ದಿವ್ಯ ನಿರ್ಲಕ್ಷದ ಧೋರಣೆ ಮುಂದುವರಿಸಿದೆ.

Advertisement

ಕಾಲ್ಪನಿಕ ವೇತನ, ಬಡ್ತಿ ಹಾಗೂ ಜ್ಯೋತಿ ಸಂಜೀವಿನಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅನುದಾನಿತ ಶಾಲೆಗಳ ಸಿಬ್ಬಂದಿಗೂ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಖಜೂರಿ ಕೋರಣೇಶ್ವರ ವಿರಕ್ತಮಠದ ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ, ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಗಾರಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಸೈಯದ್‌ ಅಹ್ಮದ್‌ ಅಲಿ, ಎಸ್‌.ಎಸ್‌. ಪಾಟೀಲ ವಡ್ಡಳ್ಳಿ, ಅಮರೇಶ್ವರ ಶಿಳ್ಳಿ, ಬಿ.ಜಿ.ಪಾಟೀಲ, ಅರುಣ ಹುಬಳಿ, ಪಂಚಪ್ಪ ಜಗಸಕ್ಕರೆ, ಚನ್ನಬಸಪ್ಪ ಕೊಳ್ಳೂರ, ಮಲಶೆಟ್ಟೆಪ್ಪ ಇಂಡಿ, ಗುಂಡಪ್ಪ ಘಂಟಿ, ಶ್ರೀನಿವಾಸ ಮರಿ ಪಾಲ್ಗೊಂಡಿದ್ದರು. ಶ್ಯಾಮಲಾ ಎಸ್‌. ಸ್ವಾಮಿ ನಿರೂಪಿಸಿದರು. ಬಸವರಾಜ ನಿಂಬರಗಿ ವಂದಿಸಿದರು. ಇದೆ ವೇಳೆ ಹೊಸ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು. ಎಸ್ಸೆಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ಅನುದಾನಿತ  ಶಾಲೆಗಳ ನಿವೃತ್ತ ಸಿಬ್ಬಂದಿಗೆ ಸನ್ಮಾನಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next