Advertisement

ಸರಕಾರಗಳದ್ದು ರೈತ ವಿರೋಧಿ ನೀತಿ: ಮಹಮ್ಮದ್‌ ಕುಂಞಿ

03:56 PM Mar 21, 2017 | Team Udayavani |

ಪುತ್ತೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ನೀತಿ ಹೊಂದಿದ್ದು, ಮುಂದಿನ ಚುನಾವಣೆಗಳಲ್ಲಿ ಆ ಪಕ್ಷಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ಪುತ್ತೂರು ವಿಧಾನಸಭಾ ಕ್ಷೇತ್ರ ಜೆಡಿಎಸ್‌ ಸಮಿತಿ ವತಿಯಿಂದ ಸೋಮವಾರ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಅನಂತರ ಗ್ಯಾಸ್‌ ಸಿಲಿಂಡರ್‌ ಧಾರಣೆ ಗಗನಕ್ಕೇರಿದೆ. ದಿನನಿತ್ಯದ ಬಳಕೆಯ ವಸ್ತುಗಳ ದರ ಮಿತಿ ಮೀರಿದೆ. ಬಡವರು ತೀವ್ರ ತೊಂದರೆಪಡುತ್ತಿದ್ದರೂ ಸರಕಾರ ಮೌನವಾಗಿದೆ ಎಂದು ಅವರು ಟೀಕಿಸಿದರು.

Advertisement

ಬಿಜೆಪಿ, ಕಾಂಗ್ರೆಸ್‌ಗೆ ಪಾಠ ಕಲಿಸಿ
ಬರಗಾಲದ ಬಿಸಿಯಲ್ಲಿ ರೈತ ತತ್ತರಿಸಿದ್ದರೂ ರಾಜ್ಯ ಸರಕಾರ ಬಜೆಟ್‌ನಲ್ಲಿ ಸಾಲ ಮನ್ನಾ ಮಾಡದೆ, ತನ್ನ ನಿಜರೂಪವನ್ನು ತೆರೆದಿಟ್ಟಿದೆ. ಇಂತಹ ರೈತ ವಿರೋಧಿ ನಡೆಯ ವಿರುದ್ಧ ಜನರು ಎಚ್ಚೆತ್ತುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಭ್ರಮನಿರಸನ
ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಐ.ಸಿ. ಕೈಲಾಸ್‌ ಮಾತನಾಡಿ, 60 ವರ್ಷಗಳಲ್ಲಿ ಏರಿಕೆ ಆಗದ ಗ್ಯಾಸ್‌ ದರ 40 ತಿಂಗಳುಗಳಲ್ಲಿ 400 ರೂ. ನಷ್ಟು ಏರಿಕೆ ಕಂಡಿದೆ. ದಾಖಲೆ ಪ್ರಮಾಣದಲ್ಲಿ ಮಳೆ ಕುಸಿತ ಕಂಡರೂ ರಾಜ್ಯ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಸರಕಾರದ ಆಳ್ವಿಕೆಯ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ ಪರ ಒಲವು ವ್ಯಕ್ತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆ ನಿಲುವು ಏನು ?
ಬಿಜೆಪಿ ಮತ್ತು ಕಾಂಗ್ರೆಸ್‌ ಎತ್ತಿನಹೊಳೆ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಜಿಲ್ಲೆಯ ಜನರ ಕುಡಿಯುವ ನೀರಿನ ವಿಚಾರದಲ್ಲಿ ಏಕ ನಿಲುವು ಹೊಂದಿಲ್ಲ. ಇಲ್ಲಿನ ಜನಪ್ರತಿನಿಧಿಗಳು ತಮ್ಮ ಸ್ಪಷ್ಟ ನಿಲುವನ್ನು ಜನರ ಮುಂದಿಡಬೇಕು ಎಂದು ಅವರು ಆಗ್ರಹಿಸಿದರು.

ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಸೂದನ್‌, ಜೆಡಿಎಸ್‌ ಕೋರ್‌ಕಮಿಟಿ ಸದಸ್ಯರಾದ ಪ್ರಜ್ವಲ್‌, ವಿಶ್ವನಾಥ್‌ ಪಂಡಿತ್‌, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಶಿವು ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಸಾಲ್ಯಾನ್‌, ನಗರ ಯುವ ಜೆಡಿಎಸ್‌ ಅಧ್ಯಕ್ಷ ಅದ್ದು ಪಡೀಲ್‌, ಶಿಯಾಬ್‌, ಪ್ರಧಾನ ಕಾರ್ಯದರ್ಶಿ ವಿಕ್ಟರ್‌ ಗೋನ್ಸಾಲಿಸ್‌, ಸುರೇಶ್‌,  ಕಿಶೋರ್‌, ಅಶ್ರಫ್‌ ಉಪ್ಪಿನಂಗಡಿ,  ಜೆಡಿಎಸ್‌ ಮುಖಂಡರಾದ ಹೈದರ್‌ ಪರ್ತಿಪ್ಪಾಡಿ, ಸುರೇಶ್‌ ಕುಮಾರ್‌, ಕಿಶೋರ್‌, ಅಶ್ರಫ್‌, ಚೇತನ್‌ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. ಜೆಡಿಎಸ್‌ ಅಲ್ಪಸಂಖ್ಯಾಕ ಅಧ್ಯಕ್ಷ ಅಶ್ರಫ್‌ ಕೊಟ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next