ಕಾಸರಗೋಡು : ಕೇರಳದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಗೆ ಸಮಾನವಾದ ಸ್ಥಿತಿ ಇಂದು ಸಂಜಾತವಾಗಿದೆ ಎಂದು ಬಿಜೆಪಿ ಉತ್ತರ ವಲಯ ಅಧ್ಯಕ್ಷ ವಿ.ವಿ.ರಾಜನ್ ಆರೋಪಿಸಿದ್ದಾರೆ. ಅವರು ಬಿಜೆಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದ ತುರ್ತು ಪರಿಸ್ಥಿತಿ ವಿರೋಧಿ ದಿನಾಚರಣೆಯಂಗವಾಗಿ ನಡೆಸಲಾದ ಪ್ರಜಾತಂತ್ರ ಸಂರಕ್ಷಣಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಘೋಷಿಸಿ ದೇಶದ ಪ್ರಜೆಗಳ ಮೂಲಭೂತ ಹಕ್ಕನ್ನು ಕಸಿದು ಕೊಂಡರು. ಸುದ್ದಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಅವುಗಳ ಮೇಲೆ ಸೆನ್ಸಾರ್ ಹೇರಿದರು. ಪೊಲೀಸರು ದೇಶದಾದ್ಯಂತ ದಾಂಧಲೆ, ಪೈಶಾಚಿಕ ಕೃತ್ಯ ನಡೆಸಿದರು. ಪ್ರತಿಪಕ್ಷ ಮುಖಂಡರನ್ನೆಲ್ಲಾ ಜೈಲಿಗಟ್ಟಿದರು. ಅದೇ ರೀತಿ ಇಂದು ಪಿಣರಾಯಿ ನೇತೃತ್ವದ ಸರಕಾರವೂ ಕಾರ್ಯವೆಸಗುತ್ತಿದೆ. ಪೊಲೀಸ್ ಕಸ್ಟಡಿ ಸಾವು, ಕೊಲೆ ಇತ್ಯಾದಿಗಳು ಇಂದು ನಿತ್ಯ ಘಟನೆಯಾಗಿ ಮಾರ್ಪಟ್ಟಿದೆ.
ಪೊಲೀಸ್ ಕಸ್ಟಡಿ ಸಾವಿಗೆ ಕಾರಣರಾದ ಪೊಲೀಸ್ ಕ್ರಿಮಿನಲ್‌ಗಳನ್ನು ಸಮರ್ಥಿಸಿ ಸಂರಕ್ಷಿಸಲಾಗುತ್ತಿದೆ. ಪೊಲೀಸ್ ಪಡೆಯನ್ನು ಕೆಂಪು ಪಡೆಯನ್ನಾಗಿ ಬದಲಾಯಿಸಲಾಗಿದೆ. ಪೊಲೀಸ್ ಅಸೋಸಿಯೇಶನ್ ಸಮ್ಮೇಳನಗಳಲ್ಲಿ ನಿಬಂಧನೆಗಳಿಗೆ ತದ್ವಿರುದ್ಧವಾಗಿ ಹುತಾತ್ಮ ಮಂಟಪಗಳನ್ನು ನಿರ್ಮಿಸಿ ಘೋಷಣೆಗಳನ್ನು ಮೊಳಗಿಸಲಾಗುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ದೇಶದಂತೆ ಇದನ್ನು ನಡೆಸಲಾಗುತ್ತಿದೆ ಎಂದು ರಾಜನ್ ಹೇಳಿದರು.
ಪಿಣರಾಯಿ ವಿರುದ್ಧ ಸುದ್ದಿ ಪ್ರಕಟಿಸುವ ಮಾಧ್ಯಮದವರನ್ನು ಬೆದರಿಸಿ ಪತ್ರಕರ್ತರ ಧ್ವನಿ ಹತ್ತಿಕ್ಕಲು ಎಡರಂಗ ಸರಕಾರ ಯತ್ನಿಸುತ್ತಿದೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಪ್ರಧಾನಿ ಇಂದಿರಾಗಾಂಧಿ ಪ್ರಜಾತಂತ್ರದ ಕೊಲೆ ನಡೆಸಿದ್ದಾರೆ. ಸಚಿವ ಸಂಪುಟದ ಸಚಿವರುಗಳ ಎಲ್ಲಾ ಅಧಿಕಾರಗಳನ್ನು ಕಸಿದುಕೊಳ್ಳಲಾಯಿತು. ಅದೇ ರೀತಿ ಇಂದು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದಲ್ಲಿ ಎಲ್ಲ ರಾಜ್ಯ ಸಚಿವರುಗಳನ್ನು ಕೇವಲ ಪ್ರದರ್ಶನದ ವಸ್ತುಗಳನ್ನಾಗಿಸಿದ್ದಾರೆ. ತಮ್ಮ ಖಾತೆಗೆ ಸಂಬಂಧಿಸಿದ ವರ್ಗಾವಣೆ ಕೂಡಾ ಸಚಿವರುಗಳಿಗೆ ತಿಳಿಯುತ್ತಿಲ್ಲ. ಸಚಿವರ ಬಗ್ಗೆ ಪಿಣರಾಯಿ ವಿಜಯನ್ ನಂಬಿಕೆ ಇರಿಸಿಕೊಂಡಿಲ್ಲ. ಅದಕ್ಕಾಗಿ ಅವರು ಸಲಹೆಗಾರರನ್ನು ನೇಮಿಸುತ್ತಿದ್ದಾರೆ ಎಂದು ರಾಜನ್ ಆರೋಪಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಮುಖಂಡರಾದ ಕೆ.ಸುರೇಶ್ ಕುಮಾರ್ ಶೆಟ್ಟಿ, ನೆಂಜಿಲ್ ಕುಂಞಿರಾಮನ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾೖಕ್, ಎ. ವೇಲಾಯುಧನ್, ವಿ. ಕುಂಞಿಕಣ್ಣನ್, ರವೀಶ ತಂತ್ರಿ ಕುಂಟಾರು, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ಸವಿತಾ ಟೀಚರ್, ನ್ಯಾಯವಾದಿ ಸದಾನಂದ ರೈ, ಎಂ. ಬಾಲರಾಜ್, ಸತ್ಯಶಂಕರ್ ಭಟ್, ಜಿ. ಚಂದ್ರನ್, ಎಂ. ಜನನಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ವಿ. ಕುಂಞಿಕಣ್ಣನ್ ಬಳಾಲ್ ವಂದಿಸಿದರು.
ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ’ ಎಂಬುವುದು ಇಂದಿರಾಗಾಂಧಿ ಅವರ ನಿಲುವಾಗಿತ್ತು. ಅದುವೇ ಪಿಣರಾಯಿ ನಿಲುವು ಆಗಿದೆ. ಕೇಂದ್ರ ಸರಕಾರವನ್ನು ದೂಷಿಸಿ ಆ ಮೂಲಕ ರಾಜ್ಯ ಸರಕಾರದ ಪರಾಭವದಿಂದ ನುಣುಚಿಕೊಳ್ಳು ಮುಖ್ಯಮಂತ್ರಿ ಯತ್ನಿಸುತ್ತಿದ್ದಾರೆ.
– ರಾಜನ್
ಬಿಜೆಪಿ ಉತ್ತರ ವಲಯ ಅಧ್ಯಕ್ಷ