Advertisement

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಔಷಧ ತುರ್ತು ಸಂದರ್ಭದಲ್ಲಿ ಬಳಕೆಗೆ ಅನುಮತಿ

09:06 PM May 08, 2021 | Team Udayavani |

ನವದೆಹಲಿ: ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಕೋವಿಡ್‌ ತಡೆಗೆ ಅಭಿವೃದ್ಧಿಪಡಿಸಿದ ಔಷಧವನ್ನು ತುರ್ತು ಸಂದರ್ಭದಲ್ಲಿ ಸಹಾಯಕ ಚಿಕಿತ್ಸೆಯ ರೂಪದಲ್ಲಿ ಬಳಸಲು ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದಾರೆ’ ಎಂದು ರಕ್ಷಣಾ ಸಚಿವಾಲಯವು ಶನಿವಾರ ತಿಳಿಸಿದೆ.

Advertisement

2–ಡಯಾಕ್ಸಿ–ಡಿ–ಗ್ಲೂಕೋಸ್‌ (2–ಡಿಜಿ) ಎಂಬ ಬಾಯಿಯಿಂದ ಸೇವಿಸಬಹುದಾದ ಈ ಔಷಧವು ಕೋವಿಡ್‌ಗೆ ಒಳಗಾಗಿ ಆಸ್ಪತ್ರೆಗೆ ಸೇರಿದ ರೋಗಿಗಳು ಶೀಘ್ರವಾಗಿ ಗುಣಮುಖರಾಗಲು ನೆರವಾಗುತ್ತದೆ. ಅಲ್ಲದೆ, ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಸಣ್ಣ ಪೊಟ್ಟಣಗಳಲ್ಲಿ ಪುಡಿಯ ರೂಪದಲ್ಲಿ ಬರುವ ಈ ಔಷಧವನ್ನು ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಬಹುದು. ಈ ಔಷಧವು ಸೋಂಕಿತ ಕೋಶಗಳ ಮೇಲೆ ಕಾರ್ಯಾಚರಣೆ ಮಾಡುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಲು ಇದು ನೆರವಾಗಲಿದೆ ಎಂದು ಪ್ರಯೋಗಗಳಿಂದ ದೃಢಪಟ್ಟಿದೆ ಸಚಿವಾಲಯ ಹೇಳಿದೆ.

2–ಡಿಜಿ ಔಷಧವನ್ನು ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ನ ಸಹಯೋಗದಲ್ಲಿ ಡಿಆರ್‌ಡಿಒದ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಕ್ಲಿಯರ್‌ ಮೆಡಿಸಿನ್‌ ಅಂಡ್ ಅಲೈಡ್ ಸೈನ್ಸಸ್‌ (ಐಎನ್‌ಎಂಎಎಸ್‌) ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಔಷಧವು ದೇಹವನ್ನು ಸೇರಿದ ಬಳಿಕ ಸೋಂಕಿತ ಜೀವಕೋಶಗಳ ಮೇಲೆ ಸಂಗ್ರಹಗೊಂಡು, ಅಲ್ಲಿ ವೈರಸ್‌ ಅಭಿವೃದ್ಧಿಹೊಂದುವುದನ್ನು ತಡೆಯುತ್ತದೆ. 2–ಡಿಜಿ ಔಷಧದ ಸಹಾಯದಿಂದ ಚಿಕಿತ್ಸೆ ಪಡೆದ ರೋಗಿಗಳು ಇತರ ರೋಗಿಗಳಿಗಿಂತ ಶೀಘ್ರದಲ್ಲಿ ಗುಣಮುಖರಾಗಿರುವುದು ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಔಷಧವನ್ನು ಸುಲಭವಾಗಿ ತಯಾರಿಸಿ ಎಲ್ಲರಿಗೂ ಪೂರೈಸಬಹುದಾಗಿದೆ. ಸಾಮಾನ್ಯದಿಂದ ಗಂಭೀರ ಸ್ವರೂಪದ ಕೋವಿಡ್‌ ರೋಗಿಗಳ ಮೇಲೆ ಈ ಔಷಧವನ್ನು ತುರ್ತು ಸಂದರ್ಭದಲ್ಲಿ ಸಹಾಯಕ ಚಿಕಿತ್ಸೆಯ ರೂಪದಲ್ಲಿ (ಪ್ರಾಥಮಿಕ ಚಿಕಿತ್ಸೆಯ ಜತೆಯಲ್ಲೇ, ಅದಕ್ಕೆ ಪೂರಕವಾಗುವಂತೆ ಇನ್ನೊಂದು ಚಿಕಿತ್ಸೆ ನೀಡುವುದನ್ನು ಸಹಾಯಕ ಚಿಕಿತ್ಸೆ ಎನ್ನಲಾಗುತ್ತದೆ) ಬಳಸಲು ಮೇ 1ರಂದು ಡಿಸಿಜಿಐ ಅನುಮತಿ ನೀಡಿತ್ತು ಎಂದು ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next