ಸುವರ್ಣಸೌಧ (ಬೆಳಗಾವಿ): ಮತಾಂತರ ನಿಷೇಧ ಕಾಯ್ದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ. ಎಲ್ಲಿಯೂ ಬಲವಂತವಾಗಿ ಮತಾಂತರವಾಗಿಲ್ಲ. ಖಡಾ ಖಂಡಿತವಾಗಿಯೂ ಇದನ್ನು ವಿರೋಧ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದವರು ರಾಜ್ಯದಲ್ಲಿ ಅಶಾಂತಿ ಮೂಡಿಸಲು ಮತಾಂತರ ನಿಷೇಧ ಕಾಯ್ದೆ ತರುತ್ತಿದ್ದಾರೆ. ಇದರಿಂದ ಎಲ್ಲರಿಗೂ ಕಸಿವಿಸಿಯಾಗುತ್ತಿದೆ. ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಕಾನೂನು ಮಾಡುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಸಂಪುಟದ ಒಪ್ಪಿಗೆ: ಮತಾಂತರ ನಿಷೇಧ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದ್ದು, ಮಂಗಳವಾರವೇ ವಿಧಾನಸಭೆಯಲ್ಲಿ “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021′ ಅನ್ನು ಮಂಡನೆ ಮಾಡಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ:ರಾಯಣ್ಣನನ್ನು ಅವಮಾನಿಸಿ ಶಿವಾಜಿಯನ್ನು ಕೊಂಡಾಡುತ್ತಾರೆ. ಇದೆಂಥಾ ದೇಶಪ್ರೇಮ?: ಎಚ್ ಡಿಕೆ
ಗೃಹ ಇಲಾಖೆ ಸಿದ್ಧಪಡಿಸಿರುವ ವಿಧೇಯಕಕ್ಕೆ ಯಾವುದೇ ತಿದ್ದುಪಡಿ ಮಾಡದೇ ಸಂಪುಟ ಅನುಮೋದನೆ ನೀಡಿದೆ. ಇನ್ನೊಂದೆಡೆ, ವಿಧಾನಸಭೆಯಲ್ಲಿ ಈ ವಿಧೇಯಕವನ್ನು ಬಲವಾಗಿ ವಿರೋಧಿಸಲು ಪ್ರತಿಪಕ್ಷ ಕಾಂಗ್ರೆಸ್ ಸಿದ್ಧತೆ ನಡೆಸಿದೆ.