Advertisement

ವಿರೋಧಿ ಅಲೆಯೇರಿ ದಡ ಹತ್ತಿದ ಕ್ಯಾಪ್ಟನ್‌!

03:45 AM Mar 12, 2017 | Team Udayavani |

ಚಂಡೀಗಢ: ಪಂಜಾಬ್‌ನಲ್ಲಿ ಬೀಸಿದ ಆಡಳಿತ ವಿರೋಧಿ ಅಲೆಗೆ ಶಿರೋಮಣಿ ಅಕಾಲಿದಳ-ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊಚ್ಚಿಕೊಂಡು ಹೋಗಿದೆ. ಮತ್ತೂಂದು ಕಡೆ ಮೊದಲ ಬಾರಿ ಸ್ಪರ್ಧಿಸಿ ಅದೇ ಅವಕಾಶದಲ್ಲಿ ಪಂಜಾಬ್‌ ಗದ್ದುಗೆ ಹತ್ತುವ ತವಕದಲ್ಲಿದ್ದ ಆಮ್‌ ಆದ್ಮಿ ಪಕ್ಷ 2ನೇ ಸ್ಥಾನ ಗಳಿಸುವ ಮೂಲಕ ನಿರಾಶೆ ಅನುಭವಿಸಿದೆ. ಆದರೆ ಇವೆರಡರ ವೈಫ‌ಲ್ಯದ ಪೂರ್ಣ ಲಾಭ ಎತ್ತಿದ್ದು ಅಮರಿಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌. ಅದು 117 ಕ್ಷೇತ್ರಗಳ ಪೈಕಿ 77ನ್ನು ತನ್ನದಾಗಿಸಿಕೊಂಡು ಮೆರೆದಾಡಿದೆ. ಅಮರಿಂದರ್‌ 4ನೇ ಬಾರಿ ಮುಖ್ಯಮಂತ್ರಿಯಾಗುವುದಕ್ಕೆ ಸರ್ವಸಿದ್ಧತೆ ನಡೆಸಿದ್ದಾರೆ.

Advertisement

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆಯಿತ್ತಾದರೂ ಈ ಮಟ್ಟದ ಗೆಲುವು ಅದಕ್ಕೂ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಶಿರೋಮಣಿ-ಬಿಜೆಪಿಯ ಹೀನಾಯ ಸೋಲಲ್ಲ, ಆಮ್‌ ಆದ್ಮಿ ಪಕ್ಷದ ನಿರೀಕ್ಷೆಗೂ ಕಡಿಮೆ ಸಾಧನೆ. ಈ ಬಾರಿ
ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೇರಿದರೂ ಅಚ್ಚರಿಯಿಲ್ಲ ಎಂಬ ವಾತಾವರಣವಿತ್ತು. ಅಲ್ಲಿನ ಆಡಳಿತ ವಿರೋಧಿ ಅಲೆ, ಮಾದಕ ದ್ರವ್ಯ ಸೇವನೆ ಹಾವಳಿ, ರೈತರ ಆತ್ಮಹತ್ಯೆ, ನಿರುದ್ಯೋಗದ ಉಗ್ರಸ್ವರೂಪ ಇವೆಲ್ಲವೂ ಸಮ್ಮಿಶ್ರ
ಸರ್ಕಾರವನ್ನು ಆಪೋಶನ ತೆಗೆದುಕೊಳ್ಳುವುದು ಮೊದಲೇ ಖಚಿತವಾಗಿತ್ತು. ಇದರ ಪೂರ್ಣ ಲಾಭ ಎತ್ತಲು ಆಮ್‌ ಆದ್ಮಿ ಪಕ್ಷ ದೆಹಲಿ ಮಾದರಿಯಲ್ಲೇ ಸಜ್ಜಾಗಿತ್ತು. ಇದು ಅಧಿಕಾರ ಹಿಡಿಯುವ ತೀವ್ರ ಹಪಹಪಿಯಲ್ಲಿದ್ದ ಕಾಂಗ್ರೆಸ್‌ಗೆ ಆತಂಕ ಮೂಡಿಸಿತ್ತು. ಈ ಆತಂಕ ಅಗತ್ಯವಿಲ್ಲವೆಂದು ಫ‌ಲಿತಾಂಶ ಸಾಬೀತುಪಡಿಸಿದೆ.

ಮುಂದಿನ ದಿನಗಳಲ್ಲೂ ಅದಕ್ಕೆ ಅತಂತ್ರ ಸ್ಥಿತಿ ಸ್ಥಿತಿ ಎದುರಿಸುವ ಭೀತಿಯಿಲ್ಲ. ಅಷ್ಟು ಶಾಸಕರ ಬಲ ಅದಕ್ಕೆ ಸಿಕ್ಕಿದೆ.

ಶಿರೋಮಣಿ-ಬಿಜೆಪಿಗೆ ಸೋಲು: ಆದರೆ ಹಾನಿ ಅನುಭವಿಸಿದ್ದು ಶಿರೋಮಣಿ-ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ. ಸೋಲುವ ವಾಸನೆ ಅದಕ್ಕೆ ಬಡಿದಿದ್ದರೂ ಇಷ್ಟು ಹೀನಾಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಅದರ ಹಲವು ಸಚಿವರು ಸೇರಿ ಬಹುತೇಕ ಶಾಸಕರು ಸೋತು ಹೋಗಿದ್ದಾರೆ. ಇದು ಸ್ಪಷ್ಟಗೊಳ್ಳಬೇಕಿದ್ದರೆ 2012ರ ಚುನಾವಣೆ ಫ‌ಲಿತಾಂಶ ಪರಿಶೀಲಿಸಬೇಕು. ಆಗ ಶಿರೋಮಣಿ ಅಕಾಲಿದಳ 56 ಸ್ಥಾನ ಗೆದ್ದಿದ್ದರೆ, ಜೊತೆಗಾರ ಬಿಜೆಪಿ 12 ಗೆದ್ದಿತ್ತು. ಇಬ್ಬರೂ ಒಟ್ಟಾಗಿ 68 ಸ್ಥಾನ ಗೆದ್ದಿದ್ದವು. ಈ ಬಾರಿ ಪೂರ್ಣ ವಿರುದ್ಧ ಚಿತ್ರ. ಶಿರೋಮಣಿ ಗೆದ್ದಿದ್ದು ಕೇವಲ 15, ಬಿಜೆಪಿಗೆ ದಕ್ಕಿದ್ದು ಬರೀ 3. ಆಗ ಅಸ್ತಿತ್ವದಲ್ಲೇ ಇಲ್ಲದ ಆಪ್‌ ಗೆದ್ದಿರುವುದು 20!

ಭಾರೀ ಅಂತರದಿಂದ ಗೆದ್ದ ಕ್ಯಾಪ್ಟನ್‌: ಇಲ್ಲಿನ ಮತ್ತೂಂದು ಗಮನಿಸಬೇಕಾದ ಸಂಗತಿ ಕೈ ನಾಯಕ ಅಮರಿಂದರ್‌ ಸಿಂಗ್‌ 2 ಕಡೆ ಸ್ಪರ್ಧಿಸಿ 1 ಕಡೆ ಗೆದ್ದು, 1 ಕಡೆ ಸೋತರು. ತಮ್ಮ ಸ್ವಕ್ಷೇತ್ರ ಪಟಿಯಾಲದಲ್ಲಿ ಬೃಹತ್‌ ಅಂತರದಿಂದ (52,407) ವಿರೋಧಿಗಳನ್ನು ಹಣಿದರು. ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕಿದ ಸಮಾಧಾನವೆಂದರೆ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ಗೆದುರಾಗಿ ಲಂಬಿಯಲ್ಲಿ ಸ್ಪರ್ಧಿಸಿದ್ದ ಅಮರಿಂದರ್‌ ಅಲ್ಲಿ 22,770 ಮತಗಳಿಂದ ಸೋತಿದ್ದು. ಉಪಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್‌ ಜಲಾಲಾಬಾದ್‌ನಲ್ಲಿ ಗೆದ್ದು ನಿಟ್ಟುಸಿರುಬಿಟ್ಟಿದ್ದು ಸಮ್ಮಿಶ್ರಸರ್ಕಾರದ ಮತ್ತೂಂದು ಸಾಧನೆ!

Advertisement

ಅಮರಿಂದರ್‌ ಕೊನೆ ಚುನಾವಣೆ?: ಚುನಾವಣೆ ಗೆದ್ದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅಮರಿಂದರ್‌, ಮಾದಕ ದ್ರವ್ಯ ಹಾವಳಿಯನ್ನು ತಡೆಯುವುದು ತನ್ನ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಅಮರಿಂದರ್‌ಗೆ ಇದೇ ಕೊನೆಯ ಚುನಾವಣೆಯಂತೆ. ಈಗಾಗಲೇ 75 ಮುಟ್ಟಿರುವ ಅಮರಿಂದರ್‌ ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಕುಟುಂಬ ಮೂಲಗಳು ತಿಳಿಸಿವೆ.

ಸಿಎಂ ಹುದ್ದೆಗೆ ಅಮರಿಂದರ್‌
ಪೀಪಲ್ಸ್‌ ಮಹಾರಾಜಾ ಎಂದು ಕರೆಸಿಕೊಂಡಿರುವ ಅಮರಿಂದರ್‌ ಸಿಂಗ್‌ ಈಗ ಮತ್ತೂಮ್ಮೆ ಪಂಜಾಬ್‌ ಸಿಂಹಾಸನವೇರುವ ಸನ್ನಾಹದಲ್ಲಿದ್ದಾರೆ. ಸದ್ಯದಲ್ಲೇ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಪಟ್ಟಕ್ಕೇರಿದ ನಂತರ
ಅಮರಿಂದರ್‌ ಮಾಡಬೇಕಾದ ಕೆಲಸಗಳು ಒಂದೆರಡಲ್ಲ. ಪಂಜಾಬ್‌ನಲ್ಲಿ ಹದಗೆಟ್ಟಿರುವ ಆಡಳಿತ ವ್ಯವಸ್ಥೆಯನ್ನು ಹಿಡಿತಕ್ಕೆ ತರುವುದು, ರೈತರ ಆತ್ಮಹತ್ಯೆಯನ್ನು ತಡೆಯುವುದು ಮುಖ್ಯ ಹೊಣೆ. ಪಂಜಾಬ್‌ನಲ್ಲಿ ಇಡೀ ದೇಶದಲ್ಲೇ 2ನೇ ಗರಿಷ್ಠ ಪ್ರಮಾಣದಲ್ಲಿ ಕೃಷಿಕರ ಆತ್ಮಹತ್ಯೆಗಳು ನಡೆಯುತ್ತಿವೆ. ಅದನ್ನು ತಡೆಯುವುದು, ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ಕೃಷಿಕರ ಕಲ್ಯಾಣ ಮಾಡುವು ಅನಿವಾರ್ಯ. ಪಂಜಾಬ್‌ನಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಅಮರಿಂದರ್‌ ಚುನಾವಣೆಯಲ್ಲಿ ಭರವಸೆ ಕೊಟ್ಟಿರುವಂತೆ 2 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ. ಅದು ಸಾಧ್ಯವಾಗದೇ ಹೋದರೆ ಇವರೂ ಜನರ ಭರವಸೆ ಕಳೆದುಕೊಳ್ಳುವುದು ಖಚಿತ. ಮಾದಕ ದ್ರವ್ಯ ಸೇವನೆ ತಡೆ ಕೂಡ ಮಹತ್ತರ ಕೆಲಸ. ಈ ಚುನಾವಣೆಯಲ್ಲಿ ಇದು ಪ್ರಮುಖ ಚರ್ಚೆಗೆ ಕಾರಣವಾಗಿತ್ತು.

ಬೇರೆ ರಾಜ್ಯದೆಡೆಗೆ ಕೇಜ್ರಿವಾಲ್‌
ಪಂಜಾಬ್‌ನಲ್ಲಿ ಅಧಿಕಾರದ ಕನಸು ಕಂಡಿದ್ದ ಆಪ್‌ ಮುಖ್ಯಸ್ಥ ಕೇಜ್ರಿವಾಲ್‌ಗೆ 22 ಸೀಟು ಭ್ರಮನಿರಸನ ತಂದಿದ್ದರೂ, ಚುಟುಕು ಅವಧಿಯಲ್ಲಿ ಪಕ್ಷದ ಸಾಧನೆ ಕೊಂಚಮಟ್ಟಿಗೆ ಹುರಿದುಂಬಿಸಲಿದೆ. ಪಂಜಾಬ್‌ನಲ್ಲೇನೋ ಹಿಂದಿನ ಲೋಕಸಭಾ ಚುನಾವಣೆಯ 4 ಸೀಟಿನ ಗೆಲವು ಆಪ್‌ಗೆ ಧೈರ್ಯ ತುಂಬಿತ್ತು. ಆದರೆ, ಮುಂದೆ ಚುನಾವಣೆ ನಡೆಯುವ ಯಾವ ರಾಜ್ಯಗಳಲ್ಲೂ ಆಪ್‌ಗೆ ಇಂಥ ವಾತಾವರಣ ಇಲ್ಲ. ಶೂನ್ಯದಿಂದಲೇ ಇನ್ನಿಂಗ್ಸ್‌ ಆರಂಭಿಸಲು ಅರವಿಂದ್‌ ಕೇಜ್ರಿವಾಲ್‌ ಇನ್ನಷ್ಟು ತಯಾರುಗೊಳ್ಳುವ ಸಾಧ್ಯತೆಯಿದೆ. ಗೆಲವು ಸಾಧ್ಯತೆಯಿದ್ದ ಗೋವಾ- ಪಂಜಾಬ್‌ನಲ್ಲಿ ತಳಮಟ್ಟದಲ್ಲಿಯೇ ಪಕ್ಷ ಕೆಲಸ ಮಾಡಿದ್ದರೂ, ಪ್ರಯೋಜನವಾಗಲಿಲ್ಲ. “ನಗರಕೇಂದ್ರಿತ ಪಕ್ಷ’ ಎಂಬ ಹಣೆಪಟ್ಟಿ ಕಳಚಲು ಯತ್ನಿಸಬಹುದು. ಸ್ಥಳೀಯ ನಾಯಕರನ್ನು ನಿರ್ಲಕ್ಷಿಸಿದ್ದು ಪಂಜಾಬ್‌ ಚುನಾವಣೆ ಕಲಿಸಿದ ದೊಡ್ಡ ಪಾಠ. ದೆಹಲಿ ನಾಯಕರನ್ನು ಮುಂದೆ ನಿಲ್ಲಿಸುವ ಸಾಹಸವನ್ನು ಇನ್ನು ಕಡಿಮೆ ಮಾಡಬಹುದು. ಮುಂದಿನ ಗುಜರಾತ್‌, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮೇಘಾಲಯ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಈ ತಪ್ಪನ್ನು ಅವರು ತಿದ್ದಿಕೊಳ್ಳಬಹುದು.
ನೋಟು ಅಮಾನ್ಯದ ಹೊರತಾಗಿ ಮೋದಿ ವಿರುದ್ಧ ಹೊಸ ಅಸ್ತ್ರ ಬಳಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next