ಚಿಕ್ಕಮಗಳೂರು: ಸಾಮಾಜಿಕ ಸಮಸ್ಯೆ ಮತ್ತು ಸೂಕ್ಷ್ಮ ಸಂವೇದನೆ ಕಥೆ ಹೊಂದಿರುವ “ಅಂತ್ಯವಲ್ಲ ಆರಂಭ’ ಕನ್ನಡ ಚಲನಚಿತ್ರ ನ.26ರಂದು ಪ್ರೀಮಿಯರ್ ಶೋ ಅಂತರ್ಜಾಲ ತಾಣಗಳಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಡಾ| ಎನ್.ಬಿ. ಜಯರಾಮ್ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರಂಜನೆ, ಪ್ರೇಮ ಕಥಾನಕ ಹೊಂದಿರುವ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತನಟ ಸಂಚಾರಿ ವಿಜಯ್ ಮತ್ತು ಶೃತಿ ಹರಿಹರನ್ ಪಾತ್ರ ನಿರ್ವಹಿಸಿದ್ದಾರೆ. ನಾಗತಿಹಳ್ಳಿ ಟೆಂಟ್ ಸಿನಿಮಾ ವಿದ್ಯಾರ್ಥಿ ಶಿಶಿರ್ ಅಭಿನಯಿಸಿದ್ದಾರೆ ಎಂದರು.
ಹಿರಿಯ ಸಾಹಿತಿ ವಸುಮತಿ ಉಡುಪ ಸಂಭಾಷಣೆ, ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್, ಚಂದನ್, ಬಾಲಕಲ್ಯಾಣ ಹಿನ್ನೆಲೆ ಗಾಯಕರಾಗಿದ್ದಾರೆ. ದೇಶ ವಿದೇಶಗಳಲ್ಲಿಕನ್ನಡ ಸಂಘಟನೆ ಮತ್ತು ಇತರೆ ಸ್ವಯಂ ಸೇವಾಸಂಸ್ಥೆಗಳ ಸಹಕಾರದಿಂದ ಆನ್‌ಲೈನ್ ವರ್ಲ್ಡ್ ಪ್ರೀಮಿಯರ್ ಚಾರಿಟಿ ಮೂಲಕ ಪ್ರದರ್ಶನ ಕಾಣಲಿದೆ ಎಂದು ತಿಳಿಸಿದರು.
ಚಿತ್ರದಿಂದ ಬರುವ ಹಣವನ್ನು ವಿಧವಾ ವಿವಾಹ ಮತ್ತು ವಿಚ್ಛೇದಿತೆಯರ ವಿವಾಹ ವೇದಿಕೆ ಪರಿವರ್ತನಾ ಟ್ರಸ್ಟ್ ಮತ್ತು ಪರಿಹಾರ ಪೌಂಡೇಶನ್‌ಗೆ ಬಳಸಿಕೊಳ್ಳಲಾಗುತ್ತದೆ. ಮುಂಗಡ ಹಣ ಪಾವತಿಸಿ ನಿದಿಷ್ಠ ಆನ್‌ಲೈನ್ ಲಿಂಕ್ ಮೂಲಕ ಚಿತ್ರ ವೀಕ್ಷಿಸಬಹುದಾಗಿದೆ ಎಂದರು.
ಜಾನ್‌ಸಾಲೆ ಹಾಡಿರುವ ಒಂದು ಯಕ್ಷಗಾನ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳನ್ನು ಒಳಗೊಂಡಿದೆ. ಸಾಮಾಜಿಕ ಉದ್ದೇಶದಿಂದ ನಿರ್ಮಿಸಿರುವ ಚಲನಚಿತ್ರವನ್ನು ಹೆಚ್ಚಿನ ಸಂಖ್ಯೆಯ ಜನರು ವೀಕ್ಷಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ನಡಹಳ್ಳಿ ಶ್ರೀಪಾದ ರಾವ್ ಇದ್ದರು.