Advertisement

ಆ್ಯಂಥ್ರೊಪಾಲಜೀ ಹುಜೂರ್‌!

08:58 AM Jun 14, 2019 | mahesh |

ಪೂರ್ಣಚಂದ್ರ ತೇಜಸ್ವಿ ಅವರ “ಮಿಸ್ಸಿಂಗ್‌ ಲಿಂಕ್‌’ ಪುಸ್ತಕ ಓದಿದವರಿಗೆ ಪುರಾತನ ಅಸ್ಥಿಪಂಜರಗಳ ಜಾಡು ಹಿಡಿದು ಮನುಷ್ಯನ ಪೂರ್ವಜನ ಹುಡುಕಾಟ ನಡೆಸಿದ್ದ ಘಟನೆಗಳು ನೆನಪಿರಬಹುದು. ಇದೊಂದು ರೀತಿಯಲ್ಲಿ ಪತ್ತೇದಾರಿ ಕೆಲಸವೇ. ಆದರೆ ಸತ್ತು ಹೋದ ವ್ಯಕ್ತಿಯ ಪಳೆಯುಳಿಕೆ ಇಂದು ನೆನ್ನೆಯದಲ್ಲ ಸಾವಿರಾರು ವರ್ಷಗಳಷ್ಟು ಹಳೆಯದು. ಇನ್ನು ಕೆಲಸ ಸಂದರ್ಭಗಳಲ್ಲಿ ಅದಕ್ಕಿಂತಲೂ ಪುರಾತನವಾದುದು. ಜೀವಶಾಸ್ತ್ರ, ಪ್ರಾಚೀನ ಜೀವನಶೈಲಿ ಮತ್ತು ಮಾನವ ದೇಹದ ಇತಿಹಾಸವನ್ನು ಕುರಿತ ಶಾಸ್ತ್ರವನ್ನು “ಮಾನವಶಾಸ್ತ್ರ’, ಇಂಗ್ಲಿಷ್‌ನಲ್ಲಿ “ಆ್ಯಂಥ್ರೊಪಾಲಜಿ’ ಎಂದು ಕರೆಯುತ್ತಾರೆ.

Advertisement

ಅರ್ಹತೆ
ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕೂಡಾ ಮಾನವಶಾಸ್ತ್ರ ಅಧ್ಯಯನದಲ್ಲಿ ತೊಡಗಬಹುದು. ಸಾಮಾನ್ಯವಾಗಿ ಮಾನವಶಾಸ್ತ್ರ ಓದಲಿಚ್ಛಿಸುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆರಿಸಿಕೊಂಡು, ಬಿ.ಎಸ್ಸಿಯಲ್ಲಿ ಆಂಥ್ರೊಪಾಲಜಿ ವಿಷಯವನ್ನು ಆರಿಸಿಕೊಳ್ಳುತ್ತಾರೆ. ಬಿ.ಎಸ್ಸಿ ಆ್ಯಂಥ್ರೊಪಾಲಜಿ ಮೂರು ವರ್ಷಗಳ ಕೋರ್ಸ್‌ ಆಗಿದ್ದು, ಓದು ಮುಂದುವರಿಸಬೇಕೆಂದಿದ್ದವರು ಎಂ.ಎಸ್ಸಿ, ಎಂ.ಫಿಲ್‌ ಹಂತದವರೆಗೆ ಓದಬಹುದು. ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಲಹೆಗಾರರಾಗಿ ಹೋಗುವವರು ಕಡ್ಡಾಯವಾಗಿ ಈ ವಿಷಯದಲ್ಲಿ ಪಿ.ಎಚ್‌.ಡಿ ಮಾಡಿರಬೇಕು.

ಕೆಲಸ ಎಲ್ಲೆಲ್ಲಿ?
ಮಾನವಶಾಸ್ತ್ರ, ಮನುಷ್ಯ ಜೈವಿಕವಾಗಿ ವಿಕಾಸ ಹೊಂದಿದ ಎಂಬುದನ್ನು ಸೂಚಿಸುವುದಲ್ಲದೆ, ಸಾಮಾಜಿಕವಾಗಿಯೂ ಯಾವ ರೀತಿ ಬೆಳವಣಿಗೆ ಕಂಡ ಎಂಬುದನ್ನು ತಿಳಿಸುತ್ತದೆ. ಜೀವಶಾಸ್ತ್ರ ಮತ್ತು ಸಾಮಾಜಿಕ ಪ್ರಸ್ತುತತೆ ಹೊಂದಿರುವುದರಿಂದ ಅವೆರಡೂ ವಿಷಯಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿದ್ಯಾರ್ಥಿ ಉದ್ಯೋಗ ಕಂಡುಕೊಳ್ಳಬಹುದಾಗಿದೆ.

ವೃತ್ತಿಯ ವಿಚಾರ ಬಂದಾಗ ಮಾನವಶಾಸ್ತ್ರ ವಿದ್ಯಾರ್ಥಿಗಳ ಎದುರು ಮೂರು ದಾರಿಗಳಿವೆ. ಶಿಕ್ಷಕ ವೃತ್ತಿ, ಸಂಶೋಧನಾ ಕ್ಷೇತ್ರ ಮತ್ತು ವಸ್ತುಸಂಗ್ರಹಾಲಯ. ಪ್ರಾಚ್ಯವಸ್ತು ಸಂಶೋಧನಾ ಇಲಾಖೆ, ಭಾರತೀಯ ಪುರಾತತ್ವ ಇಲಾಖೆ. ಯೋಜನಾ ಆಯೋಗ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಸಂಸ್ಥೆಗಳಾದ ಯುನೆಸ್ಕೊ, ಯುನಿಸೆಫ್ ಮತ್ತು ವಿಶ್ವಸಂಸ್ಥೆಗಳಲ್ಲಿ ಕೆಲಸ ಪಡೆದುಕೊಳ್ಳಬಹುದು. ಇಷ್ಟೇ ಅಲ್ಲದೆ ಸರಕಾರೇತರ ಸಂಸ್ಥೆಗಳಲ್ಲೂ ಉದ್ಯೋಗ ಪಡೆಯಲು ಬಹಳಷ್ಟು ಅವಕಾಶಗಳಿವೆ. ಸಾಂಸ್ಕೃತಿಕ ಮಾನವಶಾಸ್ತ್ರಜ್ಞರು ಜನರ ಜೊತೆ ಕೆಲಸವನ್ನು ಒಳಗೊಂಡ ಉದ್ಯೋಗಕ್ಕೆ ಹೆಚ್ಚು ಸೂಕ್ತರು. ಉದಾಹರಣೆಗೆ ಶಿಕ್ಷಕ ವೃತ್ತಿ, ಆರೋಗ್ಯ, ಸಮಾಜಸೇವೆ ಮತ್ತು ಪತ್ರಿಕೋದ್ಯಮದಲ್ಲಿಯೂ ಕಾರ್ಯ ನಿರ್ವಹಿಸಬಹುದು.

ವಸ್ತುಸಂಗ್ರಹಾಲಯಗಳು ಮಾನವಶಾಸ್ತ್ರ ವಿದ್ಯಾರ್ಥಿಗಳಿಗೆ ಇನ್ನಷ್ಟು ಅವಕಾಶದ ಬಾಗಿಲನ್ನು ತೆರೆದಿಡುತ್ತದೆ. ಇದಲ್ಲದೆ ಐಸಿಎಂಆರ್‌, ವಿಶ್ವ ಆರೋಗ್ಯ ಸಂಸ್ಥೆ, ಪೊಲೀಸ್‌ ಇಲಾಖೆಯಲ್ಲಿಯೂ(ಅಪರಾಧ ಪತ್ತೆ ವಿಭಾಗ) ವೃತ್ತಿ ನಿರ್ವಹಿಸಬಹುದು. ಇನ್ನುಳಿದಂತೆ ಸಂಶೋಧನಾ ಕ್ಷೇತ್ರದಲ್ಲಿಯೂ ಹಲವು ಅವಕಾಶಗಳಿದ್ದು ಸಾಮಾಜಿಕ ಸಮಸ್ಯೆಗಳ ಕುರಿತು, ಸಾರ್ವಜನಿಕ ಆರೋಗ್ಯ, ಶಿಕ್ಷಣ, ನಗರ ಯೋಜನೆ ಮತ್ತಿತರ ವಿಷಯಗಳ ಕುರಿತು ಬೆಳಕು ಚೆಲ್ಲುವಂಥ ಸಂಶೋಧನೆಗಳನ್ನು ಕೈಗೊಳ್ಳಬಹುದಾಗಿದೆ.

Advertisement

ಮಾನವಶಾಸ್ತ್ರ ಓದಲು ಸೂಕ್ತವಾದ ರಾಜ್ಯದ ವಿದ್ಯಾಸಂಸ್ಥೆಗಳಲ್ಲಿ ಕೆಲವು ಇಲ್ಲಿವೆ-
ಜ್ಞಾನಭಾರತಿ ವಿಶ್ವವಿದ್ಯಾಲಯ- ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ- ಧಾರವಾಡ, ಮಾನಸ ಗಂಗೋತ್ರಿ ವಿಶ್ವವಿದ್ಯಾಲಯ- ಮೈಸೂರು

– ಗಿರಿಜಾ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next