ಕೆಲವು ಧಾರಾವಾಹಿಗಳು ಆರಂಭದ ದಿನದಿಂದಲೇ, ಮೊದಲ ಎಪಿಸೋಡ್ ನಿಂದ ಪ್ರೇಕ್ಷಕರ ಮನಸ್ಸು ಗೆದ್ದು ಮುಂದೆ ಸಾಗುತ್ತವೆ. ಈಗ ಆ ಸಾಲಿಗೆ ಹೊಸ ಧಾರಾವಾಹಿಯೊಂದು ಸೇರಿಕೊಂಡಿದೆ. ಅದು ಅಂತರಪಟ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಏ.24ರಿಂದ ಪ್ರಾರಂಭವಾಗಿರುವ ಈ ಧಾರಾವಾಹಿ ಈಗ ಹೊಸ ಕಥಾಹಂದರದ ಮೂಲಕ ಮೆಚ್ಚುಗೆ ಗಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ರೆಗ್ಯುಲರ್ ಕಥಾಹಂದರ ಬಿಟ್ಟು ಪ್ರಸಾರವಾಗುತ್ತಿರುವುದೇ ಈ ಜನಪ್ರಿಯತೆಗೆ ಕಾರಣ. ಕಥಾಹಂದರದ ಬಗ್ಗೆ ಹೇಳುವುದಾದರೆ,ಮಲ ತಂದೆಯ ಕಾಟ ಎದುರಿಸುತ್ತಾ ಮನೆಯ ಜವಾಬ್ದಾರಿಯನ್ನೂ ಹೊತ್ತಿರುವ ಆರಾಧನಾಳಿಗೆ ಒಂದು ದೊಡ್ಡ ವೆಡ್ಡಿಂಗ್ ಪ್ಲಾನಿಂಗ್ ಕಂಪೆನಿ ಕಟ್ಟುವ ಕನಸು. ನೂರಾರು ಅಡ್ಡಿಗಳನ್ನು ಎದುರಿಸಿ ಆಕೆ ತನ್ನ ಕನಸನ್ನು ನನಸು ಮಾಡುತ್ತಾಳಾ ಎಂಬ ಕುತೂಹಲವೇ ಆರಾಧನಾಳನ್ನ ವೀಕ್ಷಕರ ಮನಸಿಗೆ ಹತ್ತಿರವಾಗಿಸಿದೆ.
ಬಹುದಿನಗಳ ನಂತರ ವಟಾರದ ಬದುಕನ್ನು ಸೊಗಸಾಗಿ ಹಿಡಿದಿಟ್ಟಿರುವುದು ಕೂಡ ಅಂತರಪಟದ ವಿಶೇಷತೆಗಳಲ್ಲೊಂದು. ನಿರ್ದೇಶಕಿ ಸ್ವಪ್ನಾಕೃಷ್ಣ ಅವರ ಕಲ್ಪನೆಯಲ್ಲಿ ಅರಳುತ್ತಿರುವ ಆರಾಧನಾಳ ಕತೆಯಲ್ಲಿ ಸುಶಾಂತ್ ಎಂಬ ಆಗರ್ಭ ಶ್ರೀಮಂತ ಹುಡುಗನೂ ಇದ್ದಾನೆ. ಕನಸಿದ್ದು ಕಾಸಿಲ್ಲದ ಹುಡುಗಿ ಆರಾಧನಾ ಆದರೆ, ಕಾಸಿದ್ದು ಕನಸೇ ಇಲ್ಲದ ಹುಡುಗ ಸುಶಾಂತ್. ಅಂಥ ಎರಡು ವಿರುದ್ಧ ಧ್ರುವಗಳು ಮುಖಾಮುಖಿಯಾದಾಗ ಬದುಕು ಪಡೆದುಕೊಳ್ಳುವ ಹೊಸ ವಿನ್ಯಾಸವೇ ಇಲ್ಲಿನ ಕತೆ…
ಈ ತರಹದ ಹೊಸ ಕಥೆ ಈಗ ಮನೆಮಂದಿಯ ಮನಸ್ಸು ಗೆದ್ದಿದೆ. ಅಂತರಪಟದಲ್ಲಿ ಬಿಗ್‌ಬಾಸ್ ಖ್ಯಾತಿಯ ಮಂಜು ಪಾವಗಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ.
ಮಜಾ ಭಾರತದಲ್ಲಿ ನಕ್ಕುನಕ್ಕು ಸುಸ್ತಾಗುವಂತೆ ಮಾಡುತ್ತಿದ್ದ ಮಂಜು ಇಲ್ಲಿ ಮಗಳನ್ನು ಸತಾಯಿಸುವ ತಂದೆಯ ಪಾತ್ರದಲ್ಲಿ ಹೊಸ ಮಂಜು ಅಗಿ ಕಾಣಿಸಿಕೊಂಡಿದ್ದಾರೆ.ಅವರ ಜೊತೆಗೆ ಬಿಗ್‌ಬಾಸ್‌ನಿಂದಲೇ ಮನೆಮಾತಾದ ದೀಪಿಕಾದಾಸ್ ಕೂಡಾ ಅಂತರಪಟದ ತಾರಾಗಣದಲ್ಲಿದ್ದಾರೆ. ಮೊದಲ ವಾರದಲ್ಲೇ ದೀಪಿಕಾ ಅವರ ಪಾತ್ರವೂ ವೀಕ್ಷಕರ ಮನಸೂರೆಗೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿರುವ ಪ್ರತಿಕ್ರಿಯೆಯಿಂದ ಸಾಬೀತಾಗಿದೆ.
ಈಗಾಗಲೇ ವೀಕ್ಷಕರ ಮನಸ್ಸಿಗೆ ಲಗ್ಗೆಯಿಟ್ಟಿರುವ ಅಂತರಪಟ ಬರುವ ವಾರಗಳಲ್ಲಿ ಮಹತ್ವದ ತಿರುವುಗಳನ್ನು ತೆಗೆದು ಕೊಳ್ಳುತ್ತಾ ಇನ್ನಷ್ಟು ನಿಮ್ಮ ಮನಸ್ಸಿನಾಳಕ್ಕೆ ಇಳಿ ಯಲಿದೆ ಎಂಬ ಭರವಸೆ ನಿರ್ದೇಶಕರದ್ದು. ಸದ್ಯದ ಮೆಚ್ಚುಗೆ ನೋಡಿದಾಗ ಅಂತರ ಪಟ ಕನ್ನಡ ಕಿರುತೆರೆ ಲೋಕದಲ್ಲಿ ನೆನಪಿನಲ್ಲಿ ಉಳಿಯುವ ಧಾರಾವಾಹಿ ಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತರಪಟ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರತೀ ರಾತ್ರಿ 8.30ಗೆ ಮೂಡಿಬರುತ್ತಿದೆ.