Advertisement

ಬಿಜೆಪಿ ವಿರುದ್ಧದ ಅಭಿಯಾನಕ್ಕೆ ತಕ್ಕ ಉತ್ತರ ನೀಡಿ

07:20 AM Aug 07, 2017 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಅಭಿಯಾನ ಹೆಚ್ಚಾಗುತ್ತಿದ್ದು, ಈ ತಾಣಗಳಲ್ಲಿ ಸಕ್ರಿಯವಾಗಿರುವ ಪಕ್ಷದ ಕಾರ್ಯಕರ್ತರು ನಕಾರಾತ್ಮಕ ಚಿಂತನೆಗೆ ಆಸ್ಪದ ನೀಡದೆ ತಕ್ಕ ಉತ್ತರ ನೀಡುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ನಗರದ ಅರಮನೆ ಮೈದಾನದಲ್ಲಿ ಭಾನುವಾರ ಬಿಜೆಪಿ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದಿಂದ ಹಮ್ಮಿಕೊಂಡಿದ್ದ ಸಾಮಾಜಿಕ
ಜಾಲತಾಣದಲ್ಲಿ ಸಕ್ರಿಯವಾಗಿರುವ ಬಿಜೆಪಿ ಬೆಂಬಲಿತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ರಾಜಸ್ಥಾನ, ಉತ್ತರ ಪ್ರದೇಶ, ಅಸ್ಸಾಂ ಸೇರಿ ವಿವಿಧ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಮಾಜಿಕ ಜಾಲತಾಣದ
ಅಭಿಯಾನ ಸಾಕಷ್ಟು ಫ‌ಲ ನೀಡಿದೆ. ಅದೇ ರೀತಿ ಕರ್ನಾಟಕದಲ್ಲೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣ ಪ್ರಮುಖ ಪಾತ್ರ ವಹಿಸಲಿದೆ. ರಾಜ್ಯದ ಬಿಜೆಪಿ ಸಂಸದರು, ಶಾಸಕರು ಸೇರಿ ಎಲ್ಲಾ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಮುಖಂಡರು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ ಸೇರಿದಂತೆ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿ ಬಿಜೆಪಿ ಬೆಂಬಲಿತ ಸಂದೇಶಗಳನ್ನು ಹಂಚಬೇಕು.

ಜತೆಗೆ ಕನಿಷ್ಠ ಮೂರ್‍ನಾಲ್ಕು ಜನರಿಗೆ ಟ್ಯಾಗ್‌ ಮಾಡಬೇಕು ಎಂದು ಸಲಹೆ ನೀಡಿದರು. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಸೇರಿ ಪ್ರಮುಖ ಸಾಂವಿಧಾನಿಕ ಹುದ್ದೆಗಳನ್ನು ಬಿಜೆಪಿ ನಾಯಕರು ಅಲಂಕರಿಸಿದ್ದಾರೆ. ಅದೇ ರೀತಿ ಮುಂದಿನ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಗೆಲ್ಲಿಸುವ ಮಹತ್ವದ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಆ ಮೂಲಕ ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಕರ್ನಾಟಕವೂ ಸೇರಬೇಕು ಎಂದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಕೇಂದ್ರ ಬಿಜೆಪಿ ಐಟಿ ಘಟಕದ ಅಮಿತ್‌ ಮಾಳವೀಯ, ಸಂಸದ ಪ್ರತಾಪ್‌ ಸಿಂಹ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next