ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹನುಮ ಮಾಲಾಧಾರಿಗಳನ್ನು ಭೇಟಿ ಮಾಡಿ, ಕೇಸರಿ ಶಾಲು ಹಾಕಿಕೊಂಡಿರುವುದಕ್ಕೆ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಕೆ.ವೆಂಕಟೇಶ ಜಂತಗಲ್ ಖಂಡಿಸಿದ್ದಾರೆ.
ಹನುಮ ಜಯಂತಿ ಪ್ರಯಕ್ತ ನಗರದ ಚನ್ನಬಸವಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಹನುಮ ಮಾಲಾಧಾರಿಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿ ಕೆಸರಿ ಶಾಲು ಹಾಕಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೆ.ವೆಂಕಟೇಶ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ.
ನಮ್ಮ ಗಂಗಾವತಿ ಕ್ಷೇತ್ರದಲ್ಲಿ ಸಮಸ್ತ ಹಿಂದೂ ಗಳ ಆರಾಧ್ಯ ದೈವ ವಾಯುಪುತ್ರ ಹನುಮಂತನ ಜನ್ಮಭೂಮಿ ಅಂಜನಾದ್ರಿ ಪರ್ವತ ಅಯೋಧ್ಯೆಯಷ್ಟೆ ಪವಿತ್ರ ತೀರ್ಥ ಕ್ಷೇತ್ರವಾಗಿದೆ. ಹೀಗಾಗಿ ಗಂಗಾವತಿ ತಾಲೂಕು ಸೇರಿದಂತೆ ರಾಜ್ಯದ ಸಾವಿರಾರು ಭಕ್ತರು ಹನುಮ ಜಯಂತಿ ಪ್ರಯಕ್ತ ಶ್ರದ್ಧಾ, ಭಕ್ತಿಯಿಂದ ಮಾಲೆ ಧರಿಸಿ ವ್ರತಾಚರಣೆ ಕೈಗೊಳ್ಳುತ್ತಾರೆ. ಈ ವರ್ಷ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಸೇರಿದಂತೆ ಅವರ ಅಭಿಮಾನಿಗಳು ಮಾಲೆ ಧರಿಸಿರುವುದನ್ನು ನಾವು ಶ್ರದ್ಧೆ ಯಿಂದ ಸ್ವಾಗತಿಸುತ್ತೇವೆ. ಆದರೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಪಕ್ಷವನ್ನು ಓಲೈಸಿಕೊಳ್ಳುವುದಕ್ಕಾಗಿ ಮಾಲಾಧಾರಿಗಳನ್ನು ಭೇಟಿ ಮಾಡಿದ್ದಾರೆ ಹೊರತು ಅವರಲ್ಲಿ ಹಿಂದೂ ಧರ್ಮದ ಬಗ್ಗೆ ಯಾವುದೇ ರೀತಿಯ ಶ್ರದ್ಧೆ ಇಲ್ಲ ಎಂದಿದ್ದಾರೆ.
ಅನ್ಸಾರಿ ಅವರ ಡೋಂಗಿ ರಾಜಕೀಯಕ್ಕೆ ಗಂಗಾವತಿಯ ಮತದಾರರು ಮರಳಾಗುವುದಿಲ್ಲ. ಈಗಾಗಲೇ ಅವರ ಪಕ್ಷದ ಕೆಲ ಮುಖಂಡರು ಅನ್ಸಾರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವುದು ಜಗಜ್ಜಾಹಿರಾಗುತ್ತಿದೆ. ಸ್ವತಃ ಕಾಂಗ್ರೆಸ್ ಪಕ್ಷದವರೇ ಇಕ್ಬಾಲ್ ಅನ್ಸಾರಿ ಅವರನ್ನು ನಂಬುತ್ತಿಲ್ಲ, ಹೀಗಿರುವಾಗ ಉಳಿದವರು ಹೇಗೆ ನಂಬುತ್ತಾರೆ. ಕಳೆದ ಹತ್ತು ವರ್ಷದಿಂದ ನಡೆಯುತ್ತಿರುವ ಹನುಮ ಮಾಲಾ ಕಾರ್ಯಕ್ರಮದಲ್ಲಿ ಒಮ್ಮೆಯೂ ಇಕ್ಬಾಲ್ ಅನ್ಸಾರಿ ಭಾಗವಹಿಸಿಲ್ಲ. ಅನ್ಸಾರಿ ಅಧಿಕಾರದಲ್ಲಿದ್ದಾಗ ಅಂಜನಾದ್ರಿಯ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ಬಂದಿಲ್ಲ ಎಂದು ಕೆ.ವೆಂಕಟೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.